ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics 2024) ಪದಕ ಗೆದ್ದ ಹಾಕಿ ಆಟಗಾರ ಪಿ.ಆರ್ ಶ್ರೀಜೇಶ್(PR Sreejesh) ಮತ್ತು ಅವಳಿ ಕಂಚಿನ ಪದಕ ವಿಜೇತೆ ಶೂಟರ್ ಮನು ಭಾಕರ್(Manu Bhaker) ಭಾರದ ಧ್ವಜಧಾರಿಗಳಾಗಿ( India’s Co-Flag Bearer) ಆಯ್ಕೆಯಾಗಿದ್ದಾರೆ. ಸಮಾರೋಪ ಸಮಾರಂಭ(Paris Olympics 2024 Closing Ceremony) ಭಾನುವಾರ ರಾತ್ರಿ ನಡೆಯಲಿದೆ.
ಮಹಿಳಾ ಧ್ವಜಧಾರಿಯಾಗಿ ಮನು ಭಾಕರ್ ಅವರನ್ನು ಕಳೆದ ವಾರವೇ ಆಯ್ಕೆ ಮಾಡಲಾಗಿತ್ತು. ಆದರೆ, ಭಾರತದ ಪುರುಷ ಧ್ವಜಧಾರಿ ಕ್ರೀಡಾಳು ಆಯ್ಕೆಯಾಗಿರಲಿಲ್ಲ. ಇದೀಗ ಹಾಕಿಗೆ ವಿದಾಯ ಹೇಳಿರುವ ದಿಗ್ಗಜ ಗೋಲ್ ಕೀಪರ್ ಶ್ರೀಜೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಉಭಯ ಕ್ರೀಡಾಪಟುಗಳು ಧ್ವಜಧಾರಿಯಾಗಿ ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜವನ್ನು ಹೊತ್ತು ಸಾಗಲಿದ್ದಾರೆ. ಉದ್ಘಾಟನ ಸಮಾರಂಭದಲ್ಲಿ ಪಿ.ವಿ ಸಿಂಧು ಮತ್ತು ಟೆಬಲ್ ಟೆನಿಸ್ ಆಟಗಾರ ಶರತ್ ಕಮಲ್ ಭಾರತದ ಧ್ವಜಧಾರಿಗಳಾಗಿದ್ದರು.
ಮನು ಭಾಕರ್ ಮತ್ತು ಶ್ರೀಜೇಶ್ ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಉಭಯ ಕ್ರೀಡಾಪಟುಗಳು ಈ ಕೂಟದಲ್ಲಿ ಶ್ರೇಷ್ಠ ಸಾಧನೆಗೈದಿದ್ದು, ಈ ಗೌರವಕ್ಕೆ ಅರ್ಹ ಹಾಗೂ ಅತ್ಯಂತ ಸೂಕ್ತವಾಗಿದ್ದಾರೆ ಎಂಬುದಾಗಿ ಐಒಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರದಂದು ತವರಿಗೆ ಮರಳಿದ್ದ ಮನು ಭಾಕರ್ ಶನಿವಾರ ಮತ್ತೆ ಪ್ಯಾರಿಸ್ಗೆ ಮರಳಲಿದ್ದಾರೆ. 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಮೂಲಕ ಮನು ಭಾಕರ್ ಭಾರತದ ಪದಕ ಖಾತೆ ತೆರೆದಿದ್ದರು. ಬಳಿಕ ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀ. ಏರ್ ಪಿಸ್ತೂಲ್ ಮಿಶ್ರ ಡಬಲ್ಸ್‌ನಲ್ಲೂ ಕಂಚಿಗೆ ಗುರಿ ಇರಿಸಿದ್ದರು.
ಇದನ್ನೂ ಓದಿ Paris Olympics: ಚೊಚ್ಚಲ ಪ್ರಯತ್ನದಲ್ಲೇ ಒಲಿಂಪಿಕ್ಸ್ ಪದಕ ಗೆಲ್ಲಲು ಸಜ್ಜಾದ ಅಮನ್ ಸೆಹ್ರಾವತ್
36 ವಷದ ಕೇರಳದ ಶ್ರೀಜೇಶ್ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್ ಕಂಚಿನ ಪದಕ, ಏಷ್ಯನ್ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 2006ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಕಳೆದ ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಭಾರತ ತಂಡದ ಈ ಪದಕ ಗೆಲುವಿನಲ್ಲಿ ಶ್ರೀಜೇಶ್ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಎಂಬ ಪುರಸ್ಕಾರವೂ ಸಂದಿತ್ತು. ಈ ಬಾರಿಯೂ ಶ್ರೀಜೇಶ್ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಪದಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾರತೀಯ ಹಾಕಿಗೆ ಶ್ರೀಜೇಶ್ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಹಾಕಿ ಇಂಡಿಯಾ(Hockey India) ಶ್ರೀಜೇಶ್ ಅವರನ್ನು ಭಾರತ ಜೂನಿಯರ್ ಪುರುಷರ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ.