ಪ್ಯಾರಿಸ್: ಈ ಬಾರಿಯ ಒಲಿಂಪಿಕ್ಸ್(Paris Olympics 2024) ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತ್ರವಲ್ಲದೆ ಅಥ್ಲೆಟಿಕ್ಸ್ ಸ್ಪರ್ಧೆಗಳ ವಿಷಯದಲ್ಲೂ ವಿಶೇಷವಾಗಿದೆ. ಹೌದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸಂಪ್ರದಾಯಿಕ ಇಟ್ಟಿಗೆ-ಕೆಂಪು ಬಣ್ಣದ ಟ್ರ್ಯಾಕ್ ಬದಲಾಗಿ ನೇರಳೆ ಬಣ್ಣದ ಸಿಂಥೆಟಿಕ್ ಟ್ರ್ಯಾಕ್ ಬಳಕೆಯಾಗಲಿದೆ. ಅಥ್ಲೀಟ್‌ಗಳು ಲ್ಯಾವೆಂಡರ್ ಬಣ್ಣದ ಟ್ರ್ಯಾಕ್ನಲ್ಲಿ(purple track) ಮೊದಲ ಬಾರಿಗೆ ಓಡಲಿದ್ದಾರೆ. ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರ ಎಸೆತದ ಶೈಲಿಗೂ ಈ ಟ್ರ್ಯಾಕ್ ನೆರವಾಗಲಿದೆ ಎಂದು ಹೇಳಲಾಗಿದೆ.
1976ರಿಂದಲೂ ಇಟಲಿಯ ಮೊಂಡೊ ಸಂಸ್ಥೆಯು ಒಲಿಂಪಿಕ್ಸ್‌ಗೆ ಟ್ರ್ಯಾಕ್ ಅಳವಡಿಕೆ ಕಾರ್ಯ ಮಾಡುತ್ತಿದ್ದು, ನೇರಳೆ ಬಣ್ಣದ ಟ್ರ್ಯಾಕ್ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿದೆ. ಈ ಟ್ರ್ಯಾಕ್ನಲ್ಲಿ ವಿಶ್ವ ಹಾಗೂ ಒಲಿಂಪಿಕ್ಸ್ ದಾಖಲೆಗಳು ನಿರ್ಮಾಣಗೊಳ್ಳಲಿವೆ ಎಂದು ಮೊಂಡೊ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
2016ರಲ್ಲಿ ನೀಲಿ ಟ್ರ್ಯಾಕ್ ಬಳಕೆ
ಸಾಮಾನ್ಯವಾಗಿ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಸ್ಪರ್ಧೆಗಳು ಹೆಚ್ಚಾಗಿ ಇಟ್ಟಿಗೆ ಬಣ್ಣದ ಟ್ರ್ಯಾಕ್ನಲ್ಲಿ ನಡೆಯುತ್ತಿತ್ತು. ಆದರೆ, ಇಂಥದ್ದೇ ರ್ನಿದಿಷ್ಟ ಬಣ್ಣದ ಟ್ರ್ಯಾಕ್ನಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆ ನಡೆಸಬೇಕೆಂಬ ನಿಯಮವಿಲ್ಲ. 2016ರ ರಿಯೋ ಒಲಿಂಪಿಕ್ಸ್ ವೇಳೆ ಮೊದಲ ಬಾರಿಗೆ ಇಟ್ಟಿಗೆ ಬಣ್ಣದ ಸಿಂಥೆಟಿಕ್ ಟ್ರ್ಯಾಕ್ ಬದಲು ನೀಲಿ ಟ್ರ್ಯಾಕ್ ಮೇಲೆ ಅಥ್ಲೆಟಿಕ್ಸ್ ಸ್ಪರ್ಧೆ ನಡೆದಿತ್ತು. ಈ ಬಾರಿ ನೇರಳೆ ಬಣ್ಣದ ಟ್ರ್ಯಾಕ್ನಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆ ನಡೆಯಲಿದೆ. ಈ ವಿನೂತನ ತಂತ್ರಜ್ಞಾನದ ಹೊಸ ಟ್ರ್ಯಾಕ್ಗಳು ಅಥ್ಲೀಟ್ಗಳಿಗೆ ಅತ್ಯಂತ ವೇಗವಾಗಿ ಓಡಲು ನೆರವಾಗಲಿದೆ ಎಂದು ಮೊಂಡೋ ಕಂಪನಿ ತಿಳಿಸಿದೆ. ನೇರಳೆ ಬಣ್ಣದ ಅಥ್ಲೆಟಿಕ್ಸ್ ಟ್ರ್ಯಾಕ್ನಲ್ಲಿ ಲೇನ್ಗಳ ಸಂಖ್ಯೆಯನ್ನು 8ರಿಂದ 9ಕ್ಕೆ ಏರಿಸಲಾಗಿದೆ. ಕ್ರೀಡಾಂಗಣದಲ್ಲಿ ಒಟ್ಟಾರೆ 17,000 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ನೇರಳೆ ಬಣ್ಣ ವ್ಯಾಪಿಸಿದೆ.
ನೇರಳ ಬಣ್ಣ ಬಳಕೆಗೆ ಕಾರಣವೇನು?
ಪ್ಯಾರಿಸ್ ಒಲಿಂಪಿಕ್ಸ್ನ ಅಥ್ಲೆಟಿಕ್ಸ್ ಟ್ರ್ಯಾಕ್ಗೆ ನೇರಳೆ ಬಣ್ಣ ಬಳಸಲು ಕೂಡ ಒಂದು ಪ್ರಮುಖ ಕಾರಣವಿದೆ. ಅದೇನೆಂದರೆ, ಈ ಸಲದ ಒಲಿಂಪಿಕ್ಸ್ ಗೇಮ್ಸ್ ನೀಲಿ, ಹಸಿರು ಮತ್ತು ನೇರಳ ಬಣ್ಣದ ಥೀಮ್ ಒಳಗೊಂಡಿದೆ. ಕ್ರೀಡಾಕೂಟದ ಎಲ್ಲ ತಾಣಗಳಲ್ಲಿ ಇದೇ ಬಣ್ಣಗಳು ಎದ್ದು ಕಾಣಲಿವೆ. ಇದೇ ನಿಟ್ಟಿನಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ಗೂ ದೃಶ್ಯ ಆಕರ್ಷಣೆಯ ನೇರಳ ಬಣ್ಣವನ್ನು ನೀಡಲಾಗಿದೆ. ಜತೆಗೆ ಮನೋವೈಜ್ಞಾನಿಕ ಕಾರಣವೂ ಇದೆ. ನೇರಳೆ ಬಣ್ಣವನ್ನು ಧೈರ್ಯಶಾಲಿ, ಶಕ್ತಿಯುತ ಮತ್ತು ಸೃಜನಾತ್ಮಕತೆಯ ಪ್ರತಿಕ ಎನ್ನಲಾಗಿದೆ.
ಇದನ್ನೂ ಓದಿ Paris Olympics: ಪ್ಯಾರಿಸ್ ಒಲಿಂಪಿಕ್ಸ್ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ
100 ವರ್ಷಗಳ ಬಳಿಕ ಪ್ಯಾರಿಸ್ ಆತಿಥ್ಯ
ಪ್ಯಾರಿಸ್ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್ ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.