Site icon Vistara News

Paris Olympics 2024: ವಿನೇಶ್‌ ಫೋಗಟ್‌ ಅನರ್ಹಗೊಂಡ ಬೆನ್ನಲ್ಲೇ ಮತ್ತೊಂದು ಆಘಾತ; ಕುಸ್ತಿಪಟು ಆಂಟಿಮ್ ಪಂಘಲ್ ಗಡೀಪಾರಿಗೆ ಆದೇಶ

Paris Olympics 2024

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics 2024)ನಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ ಪಂದ್ಯದಿಂದ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಅವರು ಅನರ್ಹಗೊಂಡ ಬೆನ್ನಲ್ಲೇ ಇನ್ನೊಂದು ಆಘಾತ ಎದುರಾಗಿದೆ. ಭಾರತದ ಮತ್ತೊಬ್ಬ ಪ್ರಮುಖ ಕುಸ್ತಿಪಟು ಆಂಟಿಮ್ ಪಂಘಲ್ (Antim Panghal) ಅವರನ್ನು ಅಶಿಸ್ತಿನ ಕಾರಣದಿಂದಾಗಿ ಪ್ಯಾರಿಸ್‌ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿದೆ. ಈ ಮಧ್ಯೆ ಬುಧವಾರ ಪ್ರಿ ಕ್ವಾರ್ಟರ್ ಫೈನಲ್​​ನಲ್ಲಿ ಆಂಟಿಮ್ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದಾರೆ.

ʼʼಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಪ್ರವೇಶಿಸಲು ಆಂಟಿಮ್ ಪಂಘಲ್‌ ಅವರ ಅಧಿಕೃತ ಕಾರ್ಡ್‌ ಅನ್ನು ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದಿದ್ದಾರೆ. ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಆಟಗಾರರಲ್ಲದವರು ಪ್ರವೇಶಿಸುವಂತಿಲ್ಲ. ಹೀಗಾಗಿ ಆಂಟಿಮ್ ಪಂಘಲ್‌ ಅವರ ಕುಟುಂಬವನ್ನು ಗಡೀಪಾರು ಮಾಡಲಾಗುವುದುʼʼ ಎಂದು ಒಲಿಂಪಿಕ್ಸ್‌ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಿ ಕ್ವಾರ್ಟರ್ ಫೈನಲ್​​ನಲ್ಲಿ ಸೋತ ನಂತರ ಆಂಟಿಮ್ ಪಂಘಲ್‌ ಗೇಮ್ಸ್ ವಿಲೇಜ್ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಅವರು ತನ್ನ ಅಧಿಕೃತ ಐಡಿ ಕಾರ್ಡ್‌ ಅನ್ನು ಸಹೋದರಿ ನಿಶಾ ಅವರಿಗೆ ನೀಡಿ ಗೇಮ್ಸ್ ವಿಲೇಜ್‌ಗೆ ತೆರಳಿ ಬ್ಯಾಗ್‌ ತರುವಂತೆ ಸೂಚಿಸಿದ್ದರು. ಅದರಂತೆ ಗೇಮ್ಸ್‌ ವಿಲೇಜ್‌ನಿಂದ ಹೊರ ಬರುತ್ತಿದ್ದಾಗ ನಿಶಾ ಭದ್ರತಾ ಸಿಬ್ಬಂದಿ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಜತೆಗೆ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಆಂಟಿಮ್ ಪಂಘಲ್‌ ಅವರ ಇಡೀ ಪರಿವಾರವನ್ನೇ ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

“ಶಿಸ್ತು ಉಲ್ಲಂಘನೆಯನ್ನು ಫ್ರೆಂಚ್ ಅಧಿಕಾರಿಗಳು ಗಮನಕ್ಕೆ ತಂದ ಹಿನ್ನಲೆಯಲ್ಲಿ ಕುಸ್ತಿಪಟು ಆಂಟಿಮ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ” ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (Indian Olympic Association) ತಿಳಿಸಿದೆ.

ಸಹಾಯ ಸಿಬ್ಬಂದಿ ವಿರದ್ಧವೂ ಆರೋಪ

ಇದಲ್ಲದೆ ಆಂಟಿಮ್ ಅವರ ಸಹಾಯಕ ಸಿಬ್ಬಂದಿ ವಿಕಾಸ್ ಮತ್ತು ಭಗತ್ ಕುಡಿದು ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದಾರೆ ಮತ್ತು ಬಾಡಿಗೆ ಹಣ ಕೊಡಲು ನಿರಾಕರಿದ್ದಾರೆ ಎಂದು ಚಾಲಕ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಈ ಎಲ್ಲ ಹಿನ್ನಲೆಯಲ್ಲಿ 19 ವರ್ಷದ ಅಂಡರ್ 20 ವಿಶ್ವ ಚಾಂಪಿಯನ್ ಆಂಟಿಮ್ ಅವರನ್ನೂ ಪೊಲೀಸರು ಕರೆಸಿಕೊಂಡು ಹೇಳಿಕೆ ದಾಖಲಿಸಿದ್ದಾರೆ. ಆದರೆ ಆಂಟಿಮ್ ಮತ್ತು ಅವರ ಸಿಬ್ಬಂದಿ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಆಂಟಿಮ್‌ ಇದೇ ಮೊದಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: Vinesh Phogat: ಬೆಳ್ಳಿ ಪದಕಕ್ಕಾಗಿ ಕೋರ್ಟ್‌ ಕದ ತಟ್ಟಿದ ವಿನೇಶ್‌ ಫೋಗಟ್‌; ಇಂದು ತೀರ್ಪು ಪ್ರಕಟ

ನಿವೃತ್ತಿ ಘೋಷಣೆ

ಒಲಿಂಪಿಕ್ಸ್‌ ಫೈನಲ್‌ನಲ್ಲಿ ಕಣಕ್ಕಿಳಿಯಲು ಅನರ್ಹಗೊಂಡ ಬೆನ್ನಲ್ಲೇ ವಿನೇಶ್‌ ಫೋಗಟ್‌ ಅವರು ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿದೆ. ನಾನು ಸೋತೆ.. ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರಿಗೂ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

Exit mobile version