ಪ್ಯಾರಿಸ್: ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಕ್ರೀಡಾಕೂಟದ ಉದ್ಘಾಟನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಫ್ರಾನ್ಸ್ನ ಮಹಾನದಿ ಸೀನ್ ಮೇಲೆ ಉದ್ಘಾಟನ ಸಮಾರಂಭ ನಡೆಯಲಿದೆ. ಭಾರತದ ಧ್ವಜಧಾರಿಯಾಗಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಅವರು ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಜತೆ ಭಾರತದ ಧ್ವಜ ಹಿಡಿದು ಪಥಸಂಚಲನದಲ್ಲಿ ಸಾಗಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡ 84ನೇ ರಾಷ್ಟ್ರವಾಗಿ ಈ ಬಾರಿ ಕಾಣಿಸಿಕೊಳ್ಳಲಿದೆ.
ನದಿಯ ಮೇಲೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 3,000 ಮಂದಿ ಕಲಾವಿದರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಒಟ್ಟು 12 ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಭಾಗಿಸಲಾಗಿದೆ. ಫ್ರೆಂಚ್ ಸಂಗೀತ ಸೇರಿದಂತೆ ಭಾರತದ ಶಾಸ್ತ್ರೀಯ ಸಂಗೀತ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉದ್ಘಾಟನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಸುಮಾರು 5 ಲಕ್ಷ ಮಂದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಫ್ರಾನ್ಸ್ ಕಾಲಮಾನದಂತೆ ಸಾಯಂಕಾಲ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಭಾರತದಲ್ಲಿ ರಾತ್ರಿ 11 ಗಂಟೆಗೆ ನೇರಪ್ರಸಾರವಾಗಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ನ ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರರಾಗಿರುವ ವಯಾಕಾಮ್ 18 ಜಿಯೋ ಸಿನಿಮಾ ಮೂಲಕ ಒಲಿಂಪಿಕ್ಸ್ ಸ್ಪರ್ಧೆಯನ್ನು ನೇರಪ್ರಸಾರ ಮಾಡುತ್ತಿದೆ. ಸ್ಪೋಟ್ಸ್-18 ಚಾನಲ್‌ನಲ್ಲೂ ಇದು ನೇರಪ್ರಸಾರವಾಗಲಿದೆ.
ಪ್ಯಾರಿಸ್ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್ ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಲಿಂಪಿಕ್ಸ್ ವೇಳೆ ನಡೆಯುವ ಪರೇಡ್‌ನಲ್ಲಿ ಗ್ರೀಸ್ ದೇಶಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಆಧುನಿಕ ಒಲಿಂಪಿಕ್ಸ್ ಕ್ರೀಡೆಗಳು ಮೊದಲು ಗ್ರೀಸ್‌ನಲ್ಲಿ ಆರಂಭವಾದ ಕಾರಣ ಗೌರವಾರ್ಥವಾಗಿ ಗ್ರೀಸ್‌ಗೆ ಆದ್ಯತೆ ನೀಡಲಾಗುತ್ತದೆ. ಉಳಿದಂತೆ ಆಯಾ ದೇಶಗಳ ಭಾಷೆಯ ಅಲ್ಪಾಬೆಟಿಕ್ ಅಕ್ಷರಮಾಲೆಯನ್ನು ಅನುಸರಿಸಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತವೆ. ಆತಿಥೇಯ ತಂಡ ಯಾವಾಗಲೂ ಕೊನೆಯ ಸ್ಥಾನದಲ್ಲಿರುತ್ತದೆ.
ಭಾರೀ ಭದ್ರತೆ
ಒಲಿಂಪಿಕ್ಸ್ ವೇಳೆಯಲ್ಲಿ ಸಂಭಾವ್ಯ ದಾಳಿಗಳು ನಡೆಯುವ ಸಾಧ್ಯತೆ ಇರುವುದರಿಂದ ಪ್ಯಾರಿಸ್ನಲ್ಲಿ ಹಿಂದೆಂದೂ ಕಾಣದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ಫ್ರಾನ್ಸ್ನೊಂದಿಗೆ ಭಾರತದ ಯೋಧರು ಕೂಡ ಕೈಜೋಡಿಸಿದ್ದಾರೆ. ಹಮಾಸ್(Hamas) ಭಯೋತ್ಪಾದಕರಿಂದ(hamas terrorist) ಭೀಕರ ದಾಳಿಯ ಬೆದರಿಕೆ ಕೂಡ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ಒಲಿಂಪಿಕ್ಸ್ ವೇಳೆ ಫ್ರಾನ್ಸ್ ಅಧ್ಯಕ್ಷರನ್ನು ಹತ್ಯೆ ಮಾಡುವುದಾಗಿ ಮತ್ತು ಫ್ರಾನ್ಸ್ನಲ್ಲಿ ರಕ್ತದೋಕುಳಿ ಹರಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಉದ್ಘಾಟನಾ ಕಾರ್ಯಕ್ರಮವೊಂದಕ್ಕೇ 35000 ಮಂದಿ ಗುಪ್ತಚರರನ್ನು ನೇಮಕ ಮಾಡಲಾಗಿದೆ.