ಪ್ಯಾರಿಸ್: ಅವಳಿ ಒಲಿಂಪಿಕ್ಸ್(Paris Olympics) ಪದಕ ವಿಜೇತೆ, ಭಾರತದ ಸ್ಟಾರ್ ಶಟ್ಲರ್ ಪಿ.ವಿ ಸಿಂಧು(PV Sindhu) ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಗೆಲುವಿನ ಶುಭಾರಂಭ ಕಂಡಿದ್ದಾರೆ. ಇಂದು(ಭಾನುವಾರ) ನಡೆದ ಮಹಿಳಾ ಸಿಂಗಲ್ಸ್ ವಿಭಾಗದ(Paris Olympics Badminton) ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡಿವ್ಸ್ನ ಫಾತಿಮತ್ ನಬಾಹಾ ಅಬ್ದುಲ್ ರಝಾಕ್ ವಿರುದ್ಧ 21-9, 21-6 ನೇರ ಗೇಮ್ಗಳಿಂದ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಕ್ರಿಸ್ಟಿನ್ ಕುಬಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಬುಧವಾರ ನಡೆಯಲಿದೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ M ಗುಂಪಿನ ಪಂದ್ಯದಲ್ಲಿ ಸಿಂಧು ಆಕ್ರಮಣಕಾರಿ ಆಟವಾಡುವ ಮೂಲಕ ಎದುರಾಳಿ ಫಾತಿಮತ್ ನಬಾಹಾ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಫಾತಿಮತ್ ನಬಾಹಾ ಯಾವುದೇ ಹಂತದಲ್ಲೂ ಸಿಂಧುಗೆ ಪೈಪೋಟಿ ನೀಡುವಲ್ಲಿ ಯಶಸ್ಸು ಕಾಣಲಿಲ್ಲ.
ಅಶ್ವಿನಿ ಪೊನ್ನಪ್ಪ-ಕ್ರಾಸ್ತೊ ಜೋಡಿಗೆ ಸೋಲು
ಶನಿವಾರ ನಡೆದಿದ್ದ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ತೊ ಜೋಡಿ ಮೊದಲ ಪಂದ್ಯದಲ್ಲಿ ಸೋತು ನಿರಾಸೆ ಮೂಡಿಸಿತ್ತು. ದಕ್ಷಿಣ ಕೊರಿಯಾದ ಕಿಮ್ ಸೊ ಯಿಯಾಂಗ್ ಮತ್ತು ಕಾಗ್ ಹೀ ಯಾಂಗ್ ಎದುರು 18-21, 10-21 ಅಂತರದಿಂದ ಮುಗ್ಗರಿಸಿತ್ತು. ಮುಂದಿನ ಪಂದ್ಯದಲ್ಲಿ ಜಪಾನ್‌ನ ಚಿಹರು ಶಿದಾ ಮತ್ತು ನಮಿ ಮತ್ಸುಯಾಮ ಎದುರು ಸೋಮವಾರ ಕಣಕ್ಕಿಳಿಯಲಿದೆ.
ಸಾತ್ವಿಕ್-ಚಿರಾಗ್, ಸೇನ್ ಗೆಲುವಿನ ಆರಂಭ
ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಶನಿವಾರ ನಡೆದಿದ್ದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗ್ವಾಟೆಮಾಲಾ ದೇಶದ ಕೆವಿನ್ ಕಾರ್ಡನ್ ವಿರುದ್ಧ 21-8, 22-20 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ ಮುಂದಿನ ಹಂತಕ್ಕೇರಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ, ವಿಶ್ವ ನಂ.3 ಸಾತ್ವಿಕ್-ಚಿರಾಗ್ ಕೂಡ ಆರಂಭಿಕ ಸುತ್ತಿನಲ್ಲಿ ಶ್ರೇಯಾಂಕ ರಹಿತ, ಫ್ರಾನ್ಸ್‌ನ ಲುಕಾಸ್-ಲಾಬರ್ ರೊನನ್ ವಿರುದ್ಧ 21-17, 21-14 ನೇರ ಗೇಮ್‌ಗಳಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದ್ದಾರೆ.
ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಪ್ರೀತಿ ಪವಾರ್
ಒಲಿಂಪಿಕ್ ಕ್ರೀಡಾಕೂಟದಲ್ಲಿ ಶನಿವಾರ ತಡರಾತ್ರಿ ನಡೆದಿದ್ದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ(Paris Olympics boxing) ಭಾರತದ ಬಾಕ್ಸರ್ ಪ್ರೀತಿ ಪವಾರ್(Preeti Pawar) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪ್ರೀತಿ ಅವರ ಪವರ್ ಪಂಚ್ಗಳಿಗೆ ತಡೆಯೊಡ್ಡುವಲ್ಲಿ ಸಂಪೂರ್ಣ ವಿಫಲರಾದ ವಿಯೆಟ್ನಾಂನ ಪ್ರತಿಸ್ಪರ್ಧಿ ವೋ ಥಿ ಕಿಮ್ ಅನ್ಹ್(Vo Thi Kim Anh) 0-5 ಅಂತರದ ಸೋಲು ಕಂಡರು.
ಚೊಚ್ಚಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಪ್ರೀತಿ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿದ್ದರು. ಹರಿಯಾಣದ 20 ವರ್ಷದ ಈ ಬಾಕ್ಸರ್ ಮಂಗಳವಾರ ನಡೆಯುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಲಿದ್ದಾರೆ.