ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಕ್ರೀಡಾಕೂಟ ಆರಂಭಕ್ಕೆ ಇನ್ನು ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿವೆ. ಜುಲೈ 26ರಂದು ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಭಾರತದಿಂದ ಒಟ್ಟು ಈ ಬಾರಿ 117 ಮಂದಿ ಕ್ರೀಡಾಪಟುಗಳು ಪದಕ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಕರ್ನಾಟಕದಿಂದ 8 ಮಂದಿ ಸ್ಪರ್ಧಿಸಲಿದ್ದಾರೆ. ವಿಶೇಷವೆಂದರೆ ಒಲಿಂಪಿಕ್ಸ್ ವೇಳೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಕೂಡ ಕರ್ನಾಟಕದವರೇ ಎನ್ನುವುದು ಹೆಮ್ಮೆಯ ವಿಚಾರ.
ಹೌದು, ಕಳೆದ 9 ವರ್ಷಗಳಿಂದ ಪ್ಯಾರಿಸ್ನಲ್ಲಿ ಸಂಗೀತ ಕಚೇರಿ ಸೇರಿ ಹಲವು ಸಂಸ್ಕೃತಿಯ ಕಾರ್ಯಕ್ರಮ ನಡೆಸುತ್ತಿರುವ ಕರ್ನಾಟಕ ಮೂಲದ ಭಾವನಾ ಪ್ರದ್ಯುಮ್ನ(Bhavana Pradyumna) ಅವರು ಕನ್ಸರ್ವೇಟರಿ ಆಫ್ ಪ್ಯಾರಿಸ್ ಸಂಸ್ಥೆಯ ಮೂಲಕ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ನಡೆಯುವ 24 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಜುಲೈ 27ರಂದು ಶಾಸ್ತ್ರೀಯ ಸಂಗೀತ ಕಚೇರಿ ನಡೆಸುವ ಮೂಲಕ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸ್ತ್ರೀಯ ಸಂಗೀತ, ನೃತ್ಯ ಕಾರ್ಯಕ್ರಮಗಳು ಮೂಡಿಬರಲಿದೆ. ಒಟ್ಟು 180 ಕಲಾವಿದರಿಂದ ಸಂಗೀತ, ನಾಟಕ ಕಾರ್ಯಕ್ರಮ ನಡೆಯಲಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ಗೆ ಹೋದಾಗ ಭಾವನಾ ಪ್ರದ್ಯುಮ್ನ ಅವರು ಮೋದಿಗೆ ಸ್ವಾಗತಿಸಿದ್ದರು.
ಕರ್ನಾಟಕದ ಸ್ಪರ್ಧಿಗಳು
ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ 8 ಮಂದಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್.ಪೂವಮ್ಮ, ಮಿಜೊ ಚಾಕೊ ಕುರಿಯನ್, ಬ್ಯಾಡ್ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ, ಗಾಲ್ಫ್‌ನಲ್ಲಿ ಅದಿತಿ ಅಶೋಕ್, ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಹಾಗೂ ಧಿನಿಧಿ ದೇಸಿಂಘು ಸ್ಪರ್ಧಿಸಲಿದ್ದಾರೆ. ಟೇಬಲ್ ಟೆನಿಸ್‌ನಲ್ಲಿ ಅರ್ಚನಾ ಕಾಮತ್, ಟೆನಿಸ್‌ನಲ್ಲಿ ರೋಹನ್ ಬೋಪಣ್ಣ ಕಣದಲ್ಲಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.
ಒಲಿಂಪಿಕ್ಸ್ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ
ಭಯೋತ್ಪಾದನಾ ದಾಳಿ ತಡೆ ಭದ್ರತಾ ಕಾರ್ಯಕ್ಕಾಗಿ ಭಾರತೀಯ ಸೇನೆಯಲ್ಲಿ ತರಬೇತುಗೊಂಡ ಶ್ವಾನದಳವನ್ನು ನಿಯೋಜಿಸಲಾಗಿದೆ. ಈ ಶ್ವಾನಪಡೆಯ ಸಾಮರ್ಥ್ಯ ಪರೀಕ್ಷೆ ನಡೆದದ್ದು ಬೆಂಗಳೂರಿನಲ್ಲಿ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ವಿಶೇಷ ಕಮಾಂಡೊ ಪಡೆಯ ಭಾರತೀಯ ಕೆ9 (ಕೆನೈನ್) ಹತ್ತು ಶ್ವಾನಗಳ ಪಡೆಯನ್ನು ಪ್ಯಾರಿಸ್‌ಗೆ ಕಳುಹಿಸಲಾಗಿದೆ. ಬೆಂಗಳೂರು ಸಮೀಪದ ತರಳುವಿನಲ್ಲಿರುವ ಸಿಆರ್‌ಪಿಎಫ್ ಶ್ವಾನ ತಳಿ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಈ ಶ್ವಾನಪಡೆಯ ಸಾಮರ್ಥ್ಯ ಪರೀಕ್ಷೆ ನಡೆಸಿದ ಬಳಿಕ ಪ್ಯಾರಿಸ್‌ಗೆ ಕಳುಹಿಸಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿರುವ ಭದ್ರತಾ ಪಡೆಗಳೊಂದಿಗೆ ಈ ಶ್ವಾನಪಡೆಯು ಕಾರ್ಯನಿರ್ವಹಿಸಲಿದೆ.
ಈ ಶ್ವಾನಗಳಿಗೆ ಹತ್ತು ವಾರಗಳ ಕಾಲ ವಿಶೇಷ ತರಬೇತಿ ನೀಡಲಾಗಿದೆ. ಸಿಎಪಿಎಫ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಗಳಿಂದ ಈ ಶ್ವಾನ ಮತ್ತು ನಿರ್ವಹಾಕರನ್ನು ಆಯ್ಕೆ ಮಾಡಲಾಗಿದೆ. ಈ ಶ್ವಾನಪಡೆಯಲ್ಲಿರುವ ಬೆಲ್ಜಿಯನ್ ಮೆಲಿನೊಸ್ ತಳಿಯು ಪ್ರಮುಖವಾಗಿದೆ. ಬಾಂಬ್ ಪತ್ತೆ ಕಾರ್ಯಾಚರಣೆಯಲ್ಲಿ ಅತ್ಯಂತ ಚುರುಕಾದ ತಳಿ ಇದಾಗಿದೆ.