Site icon Vistara News

Paris Olympic: ಹುಟ್ಟು ಹಬ್ಬದ ದಿನವೇ ಗೆಲುವು ಸಾಧಿಸಿ ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಶ್ರೀಜಾ ಅಕುಲಾ

Paris Olympics

Paris Olympics: Birthday girl Sreeja Akula follows Manika into pre-quarters

ಪ್ಯಾರಿಸ್​: ಭಾರತದ ಅಗ್ರ ಶ್ರೇಯಾಂಕದ ಟೇಬಲ್‌ ಟೆನಿಸ್‌ ಆಟಗಾರ್ತಿ ಶ್ರೀಜಾ ಅಕುಲಾ(Sreeja Akula) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympic) 16 ರ ರೌಂಡ್‌ಗೆ ಪ್ರವೇಶಿಸಿದ್ದಾರೆ. ಇಂದು(ಬುಧವಾರ) ನಡೆದ ಮಹಿಳೆಯರ ಸಿಂಗಲ್ಸ್‌ 32ರ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಝೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸಿದರು. ವಿಶೇಷ ಎಂದರೆ ಶ್ರೀಜಾ ಅಕುಲಾ ತಮ್ಮ 26ನೇ ಹುಟ್ಟು ಹಬ್ಬದ ದಿನವೇ ಈ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ವಿಶ್ವ ನಂ. 1 ಮತ್ತು ಅಗ್ರ ಶ್ರೇಯಾಂಕದ ಚೀನಾದ ಪ್ಯಾಡ್ಲರ್ ಸನ್ ಯಿಂಗ್ಶಾ(Sun Yingsha) ಅವರ ಸವಾಲು ಎದುರಿಸಲಿದ್ದಾರೆ.

ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಸಿಂಗಾಪುರದ ಜಿಯಾನ್ ಝೆಂಗ್ ಅವರನ್ನು 9-11, 12-10, 11-4, 11-5, 10-12, 12-10 ಅಂಕಗಳಿಂದ ಸೋಲಿಸಿದರು. 26 ವರ್ಷದ ಅಕುಲಾ ಈಗ ಒಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್ ಪ್ರಿ-ಕ್ವಾರ್ಟರ್‌ಗೆ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಮಣಿಕಾ ಬಾತ್ರಾ ಕೂಡ ಪ್ರಿ-ಕ್ವಾರ್ಟರ್‌ ಪ್ರವೇಶಿಸಿದ್ದರು.

ಸೋಲಿನ ಬಳಿಕ ಕಮ್​ಬ್ಯಾಕ್​


ಮೊದಲ ಸೆಟ್‌ನಲ್ಲಿ ಶ್ರೀಜಾ ಸೋಲು ಕಂಡರು. ಆದರೆ, ದ್ವಿತೀಯ ಸೆಟ್​ನಲ್ಲಿ ತೀವ್ರ ಪೈಪೋಟಿ ನಡೆಸಿ ಗೆಲುವಿನ ಕಮ್​ಬ್ಯಾಕ್​ ಮಾಡುವ ಮೂಲಕ 1-1 ಸಮಬಲ ಸಾಧಿಸಿದರು. ಗೆಲುವಿನ ಅಂತರ 12-10. ಮೂರನೇ ಸೆಟ್​ನಲ್ಲಿ ಮತ್ತು ನಾಲ್ಕನೇ ಸೆಟ್​ನಲ್ಲಿ ಅತ್ಯಂತ ಜೋಶ್​ನಿಂದ ಆಡಿದ ಶ್ರೀಜಾ ಬರ್ಜರಿ ಗೆಲುವು ಸಾಧಿಸಿ ಭಾರೀ ಮುನ್ನಡೆ ಸಾಧಿಸಿದರು. 5ನೇ ಸೆಟ್​ನಲ್ಲಿ ತೀವ್ರ ಹೋರಾಟ ನಡೆಸಿದರೂ ಸ್ವಲ್ಪ ಸಮಸ್ಯೆ ಎದುರಿಸಿ ಸಣ್ಣ ಅಂತರದಿಂದ ಮತ್ತೆ ಸೋಲು ಕಂಡರು. ಅಂತಿಮ ಹಾಗೂ ನಿರ್ಣಾಯಕ ಸೆಟ್​ನಲ್ಲಿ ಕಠಿಣ ಪೈಪೋಟಿ ಎದುರಾದರೂ ಕೂಡ ಇದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿ ಗೆಲುವಿನ ನಗೆ ಬೀರಿದರು. ಗೆಲುವಿನ ಅಂತರ 9-11, 12-10, 11-4, 11-5, 10-12, 12-10.

ಇದನ್ನೂ ಓದಿ Paris Olympics: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್‌ ಕುಸಾಲೆ; 16ರ ಸುತ್ತಿಗೇರಿದ ಸಿಂಧು

ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್-ಸಿಂಧು


ಪುರುಷರ ಮತ್ತು ಸಿಂಗಲ್ಸ್​ ವಿಭಾಗದ ಬ್ಯಾಡ್ಮಿಂಟನ್​ ಸ್ಪರ್ಧೆಯಲ್ಲಿ ಲಕ್ಷ್ಯ ಸೇನ್(Lakshya Sen) ಮತ್ತು ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧು(PV Sindhu) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್​ ಫೈನಲ್​ಗೆ ಪ್ರವೇಶ ಪಡೆದರು.

ಸಿಂಧು ಅವರು 73ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ 21-5, 21-10 ಸುಲಭ ಜಯ ಸಾಧಿಸಿ 16ರ(ಪ್ರೀ ಕ್ವಾರ್ಟರ್​) ಸುತ್ತಿಗೇರಿದರು. ಸಿಂಧು ಅವರ ಬಲಿಷ್ಠ ಹೊಡೆತಗಳ ಮುಂದೆ ಕ್ರಿಸ್ಟಿನ್ ಕುಬಾ ಸಂಪೂರ್ಣ ಮಂಕಾದರು. ಮೊದಲ ಗೇಮ್​ನಲ್ಲಿ ಕೇವಲ 5 ಅಂಕಕ್ಕೆ ಸೀಮಿತರಾದರು. ಈ ಪಂದ್ಯ ಕೇವಲ 34 ನಿಮಿಷಗಳಲ್ಲಿ ಅಂತ್ಯ ಕಂಡಿತ್ತು.

ಪುರುಷರ ಸಿಂಗಲ್ಸ್​ ವಿಭಾಗದ ಅಂತಿಮ ಪಂದ್ಯದಲ್ಲಿ ವಿಶ್ವ ನಂ.3 ಇಂಡೋನೇಷ್ಯಾದ ಜೊನಾಥನ್​ ಕ್ರಿಸ್ಟಿ(Jonatan Christie) ವಿರುದ್ಧ ​21-18, 21-12 ನೇರ ಗೇಮ್​ಗಳಿಂದ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ ಹಂತಕ್ಕೆ ಪ್ರವೇಶಿಸಿದ್ದಾರೆ. ಇದೇ ವೇಳೆ ಲಕ್ಷ್ಯ ಸೇನ್​ 8 ವರ್ಷಗಳ ನಂತರ ಒಲಿಂಪಿಕ್ಸ್ ನಾಕೌಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

22 ವರ್ಷದ ಲಕ್ಷ್ಯ ಸೇನ್ ಮೊದಲ ಗೇಮ್​ನಲ್ಲಿ 2-8 ಅಂಕಗಳ ಹಿನ್ನಡೆ ಸಾಧಿಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ತೀವ್ರ ಹೋರಾಟ ನಡೆಸಿ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 21-18 ಅಂಕಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು. ದ್ವಿತೀಯ ಗೇಮ್​ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಸೇನ್​ ಎದುರಾಳಿಗೆ ಚೇರಿಸಿಕೊಳ್ಳಲು ಕೂಡ ಸಮಯ ನೀಡಲಿಲ್ಲ. ಸತತವಾಗಿ ಅಂಕ ಗಳಿಸುತ್ತಲೇ ಸಾಗಿ ಮೇಲುಗೈ ಸಾಧಿಸಿ ನೇರ ಗೇಮ್​ಗಳ ಅಂತರದಿಂದ ಪಂದ್ಯವನ್ನು ಗೆದ್ದು ಬೀಗಿದರು. ಹಾಲಿ ಆಲ್-ಇಂಗ್ಲೆಂಡ್ ಚಾಂಪಿಯನ್ ಕ್ರಿಸ್ಟಿ ಆಘಾತಕಾರಿ ಸೋಲುಂಡರು.

Exit mobile version