Site icon Vistara News

Paris Olympics Boxing: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌

Paris Olympics Boxing

Paris Olympics Boxing: Lovlina Borgohain reaches boxing quarters

ಪ್ಯಾರಿಸ್​: ವಿಶ್ವ ಚಾಂಪಿಯನ್‌, ಟೋಕಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ(Paris Olympics Boxing) ಪದಕ ಗೆಲ್ಲುವ ವಿಶ್ವಾಸದಲ್ಲಿದೆ. ಇಂದು(ಬುಧವಾರ) ನಡೆದ 75 ಕೆ.ಜಿ. ವಿಭಾಗದ 16ರ ಸುತ್ತಿನ ಬಾಕ್ಸಿಂಗ್​ ಹೋರಾಟದಲ್ಲಿ ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಏಕಮುಖವಾಗಿ ಸಾಗಿದ ಈ ಹೋರಾಟದಲ್ಲಿ ಭಾರತೀಯ ಬಾಕ್ಸರ್​ ಮುಂದೆ ನಾರ್ವೆಯ ಪ್ರತಿಸ್ಪರ್ಧಿ ಸಂಪೂರ್ಣ ಶರಣಾದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಲಿ ವಿರುದ್ಧ ಲವ್ಲೀನಾ ಸೋಲು ಕಂಡಿದ್ದರು. ಕ್ವಾರ್ಟರ್​ ಫೈನಲ್​ ಪಂದ್ಯ ಆಗಸ್ಟ್ 4 ರಂದು ನಡೆಯಲಿದೆ. ಇಲ್ಲಿ ಗೆದ್ದರೆ ಪದಕವೊಂದು ಖಾತ್ರಿಯಾಗಲಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಲವ್ಲಿನಾ 69 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

ಇದನ್ನೂ ಓದಿ Paris Olympics: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್‌ ಕುಸಾಲೆ; 16ರ ಸುತ್ತಿಗೇರಿದ ಸಿಂಧು

ಶೂಟಿಂಗ್​ನಲ್ಲಿ ಮತ್ತೊಂದು ಪದಕ ನಿರೀಕ್ಷೆ; ಸ್ವಪ್ನಿಲ್‌ ಕುಸಾಲೆ ಫೈನಲ್​ ಪ್ರವೇಶ

ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(Paris Olympics)​ ಕ್ರೀಡಾ ಕೂಟದಲ್ಲಿ ಈಗಾಗಲೇ ಶೂಟಿಂಗ್​ನಲ್ಲಿ 2 ಪದಕ ಗೆದ್ದಿರುವ ಭಾರತಕ್ಕೆ ಇದೇ ವಿಭಾಗದಲ್ಲಿ ಮತ್ತೊಂದು ಪದಕ ಒಲಿಯುವ ನಿರೀಕ್ಷೆಯಿದೆ. ಬುಧವಾರ ನಡೆದ ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ ಅರ್ಹತಾ ಸುತ್ತಿನಲ್ಲಿ ಭಾರತದ ಸ್ವಪ್ನಿಲ್‌ ಕುಸಾಲೆ(Swapnil Kusale) 590 ಅಂಕಗಳೊಂದಿಗೆ 7 ನೇ ಸ್ಥಾನ ಪಡೆಯುವ ಮೂಲಕ ಫೈನಲ್​ ಪ್ರವೇಶಿಸಿದ್ದಾರೆ. ಇನ್ನೊಂದೆಡೆ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧು(PV Sindhu) ಕೂಡ ಗೆಲುವು ಸಾಧಿಸಿ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಇಂದು(ಬುಧವಾರ) ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಶನ್‌ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಸ್ವಪ್ನಿಲ್‌ ಕುಸಾಲೆ ಫೈನಲ್​ ಸುತ್ತಿಗೆ ಪ್ರವೇಶ ಪಡೆದರೆ, ಮತೋರ್ವ ಭಾರತೀಯ ಶೂಟರ್​ ಐಶ್ವರಿ ಪ್ರತಾಪ್ ಅವರು 589 ಸ್ಕೋರ್‌ನೊಂದಿಗೆ 11 ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದರು. ಅಗ್ರ 8 ಸ್ಥಾನ ಗಳಿಸಿದ ಶೂಟರ್​ಗಳಿಗೆ ನೇರವಾಗಿ ಫೈನಲ್​ ಪ್ರವೇಶ ಲಭಿಸುತ್ತದೆ. ಆದರೆ ಈ ಸ್ಥಾನ ಪಡೆಯುವಲ್ಲಿ ವಿಫಲರಾದ ಕಾರಣ ಅವರ ಒಲಿಂಪಿಕ್ಸ್​ ಸ್ಪರ್ಧೆ ಕೊನೆಗೊಂಡಿತು.

ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಶ್ರೀಜಾ ಅಕುಲಾ

ಭಾರತದ ಅಗ್ರ ಶ್ರೇಯಾಂಕದ ಟೇಬಲ್‌ ಟೆನಿಸ್‌ ಆಟಗಾರ್ತಿ ಶ್ರೀಜಾ ಅಕುಲಾ(Sreeja Akula) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympic) 16 ರ ರೌಂಡ್‌ಗೆ ಪ್ರವೇಶಿಸಿದ್ದಾರೆ. ಇಂದು(ಬುಧವಾರ) ನಡೆದ ಮಹಿಳೆಯರ ಸಿಂಗಲ್ಸ್‌ 32ರ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಝೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸಿದರು. ವಿಶೇಷ ಎಂದರೆ ಶ್ರೀಜಾ ಅಕುಲಾ ತಮ್ಮ 26ನೇ ಹುಟ್ಟು ಹಬ್ಬದ ದಿನವೇ ಈ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ವಿಶ್ವ ನಂ. 1 ಮತ್ತು ಅಗ್ರ ಶ್ರೇಯಾಂಕದ ಚೀನಾದ ಪ್ಯಾಡ್ಲರ್ ಸನ್ ಯಿಂಗ್ಶಾ(Sun Yingsha) ಅವರ ಸವಾಲು ಎದುರಿಸಲಿದ್ದಾರೆ.

Exit mobile version