ಪ್ಯಾರಿಸ್: ಟೋಕಿಯೊ ಒಲಿಂಪಿಕ್ಸ್ನಲ್ಲಿ ನಿರಾಸೆ ಎದುರಿಸಿದ್ದ ದೀಪಿಕಾ ಕುಮಾರಿ(Deepika Kumari) ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್(Paris Olympics)ನಲ್ಲಿ ಪದಕ ಗೆಲ್ಲುವ ಇರಾದೆಯಲ್ಲಿದ್ದಾರೆ. ಮಹಿಳಾ ಸಿಂಗಲ್ಸ್ ಆರ್ಚರಿಯಲ್ಲಿ(Paris Olympics Archery) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ನಲ್ಲಿ 2ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು. ಇಂದು ಸಂಜೆ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ನಾಮ್ ಸು-ಹ್ಯೆನ್ ವಿರುದ್ಧ ಸೆಣಸಾಡಲಿದ್ದಾರೆ.
ಇಂದು(ಶನಿವಾರ) ನಡೆದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯ 13 ಶ್ರೇಯಾಂಕದ ಮೈಕಲ್ ಕ್ರೋಪೆನ್ ವಿರುದ್ಧ 6-4 ಅಂತರದಿಂದ ಗೆದ್ದು ಬೀಗಿದರು. ಆದರೆ, ಇದೇ ವಿಭಾಗದ ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 18 ವರ್ಷದ ಭಜನ್ ಕೌರ್(Bhajan Kaur) ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ 5-6 ಕೂದಲೆಳೆ ಅಂತರದಲ್ಲಿ ಸೋಲು ಕಂಡರು.
ಬುಧವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಎಸ್ಟೋನಿಯಾದ ರೀನಾ ಪರ್ನಾಟ್ ಮತ್ತು ನೆದರ್ಲ್ಯಾಂಡ್ಸ್ನ ಕ್ವಿಂಟಿ ರೋಫೆನ್ ಅವರನ್ನು ಹಿಮ್ಮೆಟ್ಟಿಸಿ ಪ್ರೀ ಕ್ವಾರ್ಟರ್ಗೆ ಪ್ರವೇಶ ಪಡೆದಿದ್ದರು. ಪ್ರೀ ಕ್ವಾರ್ಟರ್ ಫೈನಲ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗೆಲುವಿನ ನಗೆ ಬೀರಿದರು.
ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾದ ಆಟಗಾರ್ತಿಯ ವಿರುದ್ಧ ದೀಪಿಕಾ ಸೋಲನುಭವಿಸಿ ನಿರಾಸೆ ಎದುರಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೊದಲ ಸುತ್ತಿನಲ್ಲಿ, ರಿಯೋ ಒಲಿಂಪಿಕ್ಸ್ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದ್ದರು. ಇದೀಗ 2ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿರುವ ಅವರು ಪದಕ ಬರ ನೀಗಿಸುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ Paris Olympics: ಹ್ಯಾಟ್ರಿಕ್ ಪದಕ ತಪ್ಪಿಸಿಕೊಂಡ ಮನು ಭಾಕರ್; 4ನೇ ಸ್ಥಾನಕ್ಕೆ ತೃಪ್ತಿ
ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಯುವ ಬಿಲ್ಗಾರ್ತಿ ಭಜನ್ ಕೌರ್ ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ ಅಮೋಘ ಹೋರಾಟ ನಡೆಸಿ 5-5 ಸಮಬಲ ಸಾಧಿಸಿದರೂ ಕೂಡ ಅಂತಿಮ ಶೂಟ್ನಲ್ಲಿ ಎಡವಿದರು. ಚೋರುನಿಸಾ 9 ಅಂಕಕ್ಕೆ ಗುರಿ ಇಟ್ಟರೆ, ಕೌರ್ 8 ಅಂಕ ಗಳಿಸಿ ಸೋಲು ಕಂಡರು. 10 ಅಂಕಕ್ಕೆ ಗುರಿ ಇಡುತ್ತಿದ್ದರೆ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತಿದ್ದರು. ಸೋಲು ಕಂಡರೂ ಕೂಡ ತಮ್ಮ ಚೊಚ್ಚಲ ಒಲಿಂಪಿಕ್ಸ್ನಲ್ಲಿ ಈ ಸಾಧನೆ ತೋರಿದ್ದು ಮೆಚ್ಚಾಲೇ ಬೇಕು.
4ನೇ ಸ್ಥಾನಕ್ಕೆ ತೃಪ್ತಿಪಟ್ಟ ಶೂಟರ್ ಮನು ಭಾಕರ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics) ಹ್ಯಾಟ್ರಿಕ್ ಪದಕ ನಿರೀಕ್ಷೆಯಲ್ಲಿದ್ದ ಮನು ಭಾಕರ್ಗೆ(manu bhaker) ನಿರಾಸೆಯಾಗಿದೆ. ಇಂದು(ಶನಿವಾರ) ನಡೆದ 25 ಮೀ. ಪಿಸ್ತೂಲ್ ಶೂಟಿಂಗ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅವರು ಐತಿಹಾಸಿಕ ಪದಕ ಗೆಲ್ಲುವ ಅವಕಾಶವೊಂದನ್ನು ಕಳೆದುಕೊಂಡರು. ಪದಕ ಗೆಲ್ಲುತ್ತಿದ್ದರೆ ವೈಯಕ್ತಿಕವಾಗಿ ಒಂದೇ ಆವೃತ್ತಿಯಲ್ಲಿ ಹಾಗೂ ಒಟ್ಟಾರೆಯಾಗಿ 3 ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಐತಿಹಾಸಿಕ ದಾಖಲೆ ಬರೆಯಬಹುದಿತ್ತು.
ಫೈನಲ್ ಹಂತದ ಮೊದಲ ಸುತ್ತಿನಲ್ಲಿ 6 ಅಂಕ ಗಳಿಸಿ 4ನೇ ಸ್ಥಾನಿಯಾದ ಭಾಕರ್ ಆ ಬಳಿಕದ ಸುತ್ತಿನಲ್ಲಿ ಪ್ರಗತಿ ಸಾಧಿಸಿ 2ನೇ ಸ್ಥಾನದೊಂದಿಗೆ ಈ ಸುತ್ತು ಮುಗಿಸಿದರು. 2ನೇ ಸುತ್ತಿನಲ್ಲಿ ಒಮ್ಮೆ 6ನೇ ಸ್ಥಾನಕ್ಕೆ ಕುಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಮತ್ತೆ ಯಶಸ್ಸು ಸಾಧಿಸಿದರು. ಆದರೆ ಅಂತಿಮ ಹಂತದಲ್ಲಿ 28 ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಯಾಂಗ್ ಜಿನ್ ಚಿನ್ನದ ಪದಕ ಗೆದ್ದರು. ಆತಿಥೇಯ ದೇಶದ ಕ್ಯಾಮಿಲ್ಲೆ ಬೆಳ್ಳಿ, ಹಂಗೇರಿಯ ಕಂಚು ಗೆದ್ದರು.