ಪ್ಯಾರಿಸ್: ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ಈ ಹಾಡು ಕೇಳಿದರೆ ಎಂಥವರಿಗಾದರೂ ಒಮ್ಮೆ ರೋಮಾಂಚನ ಆಗುತ್ತದೆ. ಏಕೆಂದರೆ ಈ ಹಾಡಿಗೆ ಇರುವ ತಾಕತ್ತು ಅಂಥದ್ದು. ಹಾಡಿನ ಪ್ರತಿ ಸಾಲುಗಳು ಕನ್ನಡ ನಾಡಿನ ವಿಶೇಷತೆ ಬಗ್ಗೆ ವರ್ಣಿಸಲಾಗಿದೆ. ಡಾ. ರಾಜ್ಕುಮಾರ್(Rajkumar) ಅವರು ಹಾಡಿದ ಈ ಹಾಡನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ. ಇದೀಗ ಈ ಹಾಡು ದೂರದ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿಯೂ(Paris Olympics) ಸದ್ದು ಮಾಡಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳು ರಿಲಯನ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ಇಂಡಿಯಾ ಹೌಸ್‌ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕಸ್ಮಿಕ(dr rajkumar akasmika) ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ನೃತ್ಯಗಾರರು ಅತ್ಯಂತ ಸುಂದವಾಗಿ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಕನ್ನಡ ಕಂಪು ಪ್ಯಾರಿಸ್ನಲ್ಲಿಯೂ ಮೊಳಗಿದೆ. ಸದ್ಯ ಈ ವಿಡಿಯೊ ವೈರಲ್(viral video) ಆಗಿದೆ.
ವಿಶೇಷವೆಂದರೆ ಒಲಿಂಪಿಕ್ಸ್ ವೇಳೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಕೂಡ ಕರ್ನಾಟಕದವರೆ. ಹೌದು, ಕಳೆದ 9 ವರ್ಷಗಳಿಂದ ಪ್ಯಾರಿಸ್ನಲ್ಲಿ ಸಂಗೀತ ಕಚೇರಿ ಸೇರಿ ಹಲವು ಸಂಸ್ಕೃತಿಯ ಕಾರ್ಯಕ್ರಮ ನಡೆಸುತ್ತಿರುವ ಕರ್ನಾಟಕ ಮೂಲದ ಭಾವನಾ ಪ್ರದ್ಯುಮ್ನ(Bhavana Pradyumna) ಅವರು ಕನ್ಸರ್ವೇಟರಿ ಆಫ್ ಪ್ಯಾರಿಸ್ ಸಂಸ್ಥೆಯ ಮೂಲಕ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ನಡೆಯುವ 24 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಒಟ್ಟು 180 ಕಲಾವಿದರಿಂದ ಸಂಗೀತ, ನಾಟಕ ಕಾರ್ಯಕ್ರಮ ನಡೆಯಲಿದೆ. ರಘು ದೀಕ್ಷಿತ್ ಕೂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಇದನ್ನೂ ಓದಿ Paris Olympics: ಶ್ರೀಜೇಶ್ಗೆ ಸಿಗಲಿ ಗೆಲುವಿನ ವಿದಾಯ; ಇಂದು ಭಾರತ-ಸ್ಪೇನ್ ಕಂಚಿನ ಕಾದಾಟ
ಇಂಡಿಯಾ ಹೌಸ್ ಪ್ಯಾರಿಸ್‌ನ ಪಾರ್ಕ್ ಡಿ ಲಾ ವಿಲೆಟ್ಟೆಯಲ್ಲಿ, ಭಾರತೀಯ ಒಲಿಂಪಿಕ್ಸ್ ಒಕ್ಕೂಟದೊಂದಿಗೆ ಸೇರಿ ಇದನ್ನು ನಿರ್ಮಾಣ ಮಾಡಲಾಗಿದೆ. ದೇಶದಿಂದ ದೂರ ಇರುವ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸಲು ಇದರ ಉದ್ದೇಶ. ಈ ಇಂಡಿಯಾ ಹೌಸ್ ನಿರ್ಮಾಣ ಮಾಡಿದ್ದು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ.
ನೀರಜ್ ಮೇಲೆ ಚಿನ್ನದ ನಿರೀಕ್ಷೆ
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್(Paris Olympics)ನಲ್ಲಿ ಭಾರತದ ಕೊನೆಯ ಚಿನ್ನದ ಪದಕ ಭರವಸೆಯಾಗಿ ಉಳಿದಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಇಂದು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಟ್ರ್ಯಾಕ್ ಆ್ಯಂಡ್ ಫೀಲ್ಡ್ನಲ್ಲಿ ಐತಿಹಾಸಿಕ ಪದಕ ಗೆದ್ದ ನೀರಜ್ ಈ ಬಾರಿಯೂ ಚಿನ್ನಕ್ಕೆ ಗುರಿ ಇರಿಸಲಿ ಎನ್ನುವುದು ದೇಶವಾಸಿಗಳ ಹಾರೈಕೆ. ಫೈನಲ್ ಪಂದ್ಯ ರಾತ್ರಿ 11:55ಕ್ಕೆ ಅರಂಭವಾಗಲಿದೆ.
ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ದೂರ ಜಾವೆಲಿನ್ ಎಸೆದು ನೇರವಾಗಿ ಫೈನಲ್ ಪ್ರವೇಶಿಸಿದ್ದರು. ನೀರಜ್ ಅವರೇ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಹೀಗಾಗಿ ಫೈನಲ್ನಲ್ಲಿಯೂ ಅವರ ಮೇಲೆ ನಿರೀಕ್ಷೆ ಇರಿಸಲಾಗಿದೆ. ಜರ್ಮನಿಯ ಜೂಲಿಯನ್ ವೆಬ್ಬರ್, ಪಾಕಿಸ್ತಾನದ ಅರ್ಷದ್ ನದೀಮ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.