ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics) ಭಾರತದ ಪುರುಷರ ಹಾಕಿ ತಂಡ ಅಮೋಘ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ಪದಕದ ಆಸೆ ಜೀವಂತವಾಗಿರಿಸಿದೆ. ಕೇವಲ 10 ಮಂದಿ ಆಟಗಾರರನ್ನು ಒಳಗೊಂಡ ಹರ್ಮನ್‌ಪ್ರೀತ್ ಸಿಂಗ್ ಪಡೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್(India vs Great Britain) ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-2 ಗೋಲುಗಳ ಅಂತರದಿಂದ ಮಗುಚಿ ಹಾಕಿ ಈ ಸಾಧನೆಗೈದಿತು.
4 ಕ್ವಾರ್ಟರ್ ಮುಕ್ತಾಯದ ವೇಳೆ 1-1 ಗೋಲುಗಳಿಂದ ಪಂದ್ಯ ಟೈಗೊಂಡ ಕಾರಣ ಫಲಿತಾಂಶ ನಿರ್ಣಾಯಕ್ಕೆ ಫೆನಾಲ್ಟಿ ಶೂಟ್ಔಟ್ ಮೊರೆಹೋಗಲಾಯಿತು. ಇಲ್ಲಿ ಭಾರತ ಮೇಲುಗೈ ಸಾಧಿಸಿ ಜಯಭೇರಿ ಮೊಳಗಿಸಿತು.ಕಳೆದ ಟೋಕಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಯೂ ಭಾರತ ತಂಡ ಬ್ರಿಟನ್ ತಂಡವನ್ನೇ ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಪೆನಾಲ್ಟಿ ಶೂಟೌಟ್ನಲ್ಲಿ ಭಾರತದ ಪರ ಹರ್ಮನ್‌ಪ್ರೀತ್, ಲಲಿತ್, ಸುಖಜೀತ್, ಅಭಿಷೇಕ್ ಮತ್ತು ರಾಜ್‌ಕುಮಾರ್ ಗೋಲು ಬಾರಿಸಿದರು. ಬ್ರಿಟನ್ ಪರ ಜೇಮಸ್ ಆಲ್ಬೆ, ವಾಲಸ್ ಗೋಲು ಬಾರಿಸಿದರು.
ರೆಡ್ ಕಾರ್ಡ್ ಪಡೆದ ಅಮಿತ್
ಎದುರಾಳಿ ತಂಡದ ಆಟಗಾರ ಕಲ್ನಾನ್‌ನ ಮುಖಕ್ಕೆ ಹಾಕಿ ಸ್ಟಿಕ್ ತಾಗಿಸಿದ ಪರಿಣಾಮ ಅಮಿತ್‌ಗೆ ಅಂಪೈರ್ ರೆಡ್ ಕಾರ್ಡ್ ನೀಡಿದರು. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಭಾರತ ಕೇವಲ 10 ಮಂದಿ ಆಟಗಾರರೊಂದಿಗೆ ಪಂದ್ಯವನ್ನಾಡಿತು. ಮೊದಲ ಕ್ವಾರ್ಟರ್ನಲ್ಲಿಯೇ ಭಾರತಕ್ಕೆ ಈ ಆಘಾತ ಎದುರಾಯಿತು. ಈ ಕ್ವಾರ್ಟರ್ನಲ್ಲಿ ಉಭಯ ತಂಡಗಳಿಗೆ ಗೋಲು ಬಾರಿಸುವ ಹಲವು ಅವಕಾಶ ಇತ್ತಾದರೂ ಕೂಡ ಇದನ್ನು ಸದುಪಯೋಗಪಡಿಸುವಲ್ಲಿ ವಿಫಲರಾದರು.
ಇದನ್ನೂ ಓದಿ Paris Olympics: ವಿಕ್ಟರ್ ವಿರುದ್ಧ ಲಕ್ಷ್ಯ ಸೇನ್ಗೆ ಒಲಿಯಲಿ ಗ್ರೇಟ್ ವಿಕ್ಟರಿ; ಇಂದು ಸೆಮಿ ಫೈನಲ್
ಮಿಂಚಿದ ಶ್ರೀಜೇಶ್
ದ್ವಿತೀಯ ಕ್ವಾರ್ಟರ್ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ಇನ್ನೇನು ದ್ವಿತೀಯ ಕ್ವಾರ್ಟರ್ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಮೂರನೇ ಕ್ವಾರ್ಟರ್ ಮುಕ್ತಾಯಕ್ಕೆ 4 ನಿಮಿಷವಿರುವಾಗ ಬ್ರಿಟನ್ಗೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಕೂಡ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ವಿದಾಯದ ಒಲಿಂಪಿಕ್ಸ್ ಆಡುತ್ತಿರುವ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ತಡೆಗೋಡೆಯಂತೆ ನಿಂತು ಹಲವು ಗೋಲುಗಳನ್ನು ತಡೆದದ್ದು ಪಂದ್ಯದ ಆಕರ್ಷಣೆಗಳಲ್ಲಿ ಒಂದಾಗಿತ್ತು. ಪೆನಾಲ್ಟಿ ಶೂಟೌಟ್ನಲ್ಲಿಯೂ ಗೋಲುಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೂರನೇ ಕ್ವಾರ್ಟರ್ನಲ್ಲಿಯೂ ಇತ್ತಂಡಗಳ ಬಲಿಷ್ಠ ರಕ್ಷಣಾತ್ಮಕ ಆಟದಿಂದಾಗಿ ಗೋಲು ದಾಖಲಾಗಲಿಲ್ಲ. ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದರೂ ಕೂಡ ಉಭಯ ತಂಡಗಳಿಗೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. 1-1 ಗೋಲುಗಳಿಂದ ಟೈಗೊಂಡಿತು. ಟೋಕಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ನಲ್ಲೂ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 3-1 ಗೋಲ್ಗಳ ಅಂತರದಿಂದ ಗೆದ್ದು ಸೆಮಿಪೈನಲ್ ಪ್ರವೇಶಿಸಿತ್ತು.