ಪ್ಯಾರಿಸ್: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಲಕ್ಷ್ಯ ಸೇನ್(Lakshya Sen) ಭಾನುವಾರ ನಡೆದ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ, ವಿಶ್ವದ ಖ್ಯಾತ ಶಟ್ಲರ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್(Viktor Axelsen) ವಿರುದ್ಧ 20-22 21-14 ನೇರ ಗೇಮ್ಗಳ ಅಂತರದಿಂದ ಸೋಲು ಕಂಡು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರೂ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಆಡಲಿದ್ದಾರೆ.
ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದ ಮೊದಲ ಗೇಮ್ನಲ್ಲಿ ಎದುರಾಳಿ ವಿಕ್ಟರ್ ಅಕ್ಸೆಲ್ಸೆನ್ 2 ಅಂಕಗಳಿಸಿದರೂ ಖಾತೆ ತೆರೆಯದ ಲಕ್ಷ್ಯ ಸೇನ್ ಆ ಬಳಿಕ ಫಿನಿಕ್ಸ್ನಂತೆ ಎದ್ದು ಬಂದು ಮುನ್ನಡೆ ಸಾಧಿಸಿದರು. 8 ಅಂಕ ಗಳಿಸುವ ತನಕ ಉಭಯ ಆಟಗಾರರು ಸಮಾನವಾಗಿ ಸಾಗಿದರು. ಈ ವೇಳೆ ಸೇನ್ ಸತತವಾಗಿ ಅಂಕಗಳಿಸಿ ಇನ್ನೇನು ಒಂದು ಗೆಲುವು ಸಾಧಿಸುತ್ತಾರೆ ಎನುವಷ್ಟರಲ್ಲಿ 3 ಅಂಕ ಹಿನ್ನಡೆಯಲ್ಲಿದ್ದ ಅಕ್ಸೆಲ್ಸೆನ್ ಆಕ್ರಮಣಕಾರಿ ಆಟದ ಮೂಲಕ ಗೆಲುವು ಸಾಧಿಸಿದರು. ಗೆಲುವಿನ ಅಂತರ 22-20.
ದ್ವಿತೀಯ ಗೇಮ್ನಲ್ಲಿ ಆರಂಭದಿಂದಲೇ ಬಲಿಷ್ಠ ಹೊಡೆತಗಳ ಮೂಲಕ ಆಕ್ರಮಣಕಾರಿ ಆಟವಾಡಿದ ಸೇನ್ 7 ಅಂಕ ಗಳಿಸುವ ತನಕ ಎದುರಾಳಿಗೆ ಅಂಕವನ್ನೇ ಬಿಟ್ಟುಕೊಡದೆ ಪ್ರಾಬಲ್ಯ ಮರೆದರು. ಅವರ ಆಟವನ್ನು ನೋಡುವಾಗ ಈ ಗೆಮ್ ಗೆದ್ದು 1-1 ಸಮಬಲ ಸಾಧಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಯಿತು. ಉತ್ತಮ ಸ್ಥಿತಿಯಲ್ಲಿದ್ದ ಸೇನ್ ದೀಢಿರ್ ಕುಸಿತ ಕಂಡು ಸತತವಾಗಿ ಅಂಕ ಬಿಟ್ಟುಕೊಟ್ಟು ಹಿನ್ನಡೆ ಅನುಭವಿಸಿ ಸೋಲು ಕಂಡರು. ಇದು ಅಕ್ಸೆಲ್ಸೆನ್ ವಿರುದ್ಧ ಸೇನ್ಗೆ ಎದುರಾದ 8ನೇ ಸೋಲು.
ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಈಗಾಗಲೇ ಹಲವು ಪದಕ ಗೆದ್ದಿರುವ, 2 ಬಾರಿಯ ಚಾಂಪಿಯನ್ ಆಗಿದ್ದ ಅಕ್ಸೆಲ್ಸೆನ್ ವಿರುದ್ಧ ಸೇನ್ ಗೆಲುವು ಸಾಧಿಸುವುದು ಕಷ್ಟ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಈ ನಿರೀಕ್ಷೆಯಂತೆ ಲಕ್ಷ್ಯ ಸೋಲು ಕಂಡರು. ಈ ಹಿಂದೆ ಅಕ್ಸೆಲ್ಸೆನ್ ವಿರುದ್ಧ ಸೇನ್ ಆಡಿದ್ದ 8 ಪಂದ್ಯಗಳ ಪೈಕಿ 7ರಲ್ಲಿ ಸೋಲು ಕಂಡಿದ್ದರು.
ಲವ್ಲಿನಾಗೆ ಸೋಲು
ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದಿದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್(Lovlina Borgohain) ಅವರು ಇಂದು(ಭಾನುವಾರ) ನಡೆದ ಮಹಿಳಾ 75 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ವಿರುದ್ಧ 4-1 ಅಂತರದಿಂದ ಸೋಲು ಕಂಡು ತಮ್ಮ ಒಲಿಂಪಿಕ್ಸ್ ಅಭಿಯಾನ ಮುಗಿಸಿದರು. ಇವರ ನಿರ್ಗಮನದೊಂದಿಗೆ ಬಾಕ್ಸಿಂಗ್ನಲ್ಲಿ ಭಾರತ ಸ್ಪರ್ಧೆ ಕೂಡ ಕೊನೆಗೊಂಡಿತು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಲವ್ಲಿನಾ 69 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಕಳೆದ 16ರ ಸುತ್ತಿನ ಬಾಕ್ಸಿಂಗ್ ಹೋರಾಟದಲ್ಲಿ ಲವ್ಲಿನಾ ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆದರೆ ಕ್ವಾರ್ಟರ್ ಫೈನಲ್ನಲ್ಲಿ ಇದೇ ಹೋರಾಟ ಮುಂದುವರಿಸುವಲ್ಲಿ ವಿಫಲರಾದರು.