ಪ್ಯಾರಿಸ್: ಇದೇ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ(Paris Olympics) ಸ್ಪರ್ಧಿಸುತ್ತಿರುವ ಲಕ್ಷ್ಯ ಸೇನ್(Lakshya Sen) ಅವರು ಇಂದು ನಡೆಯುವ ಪುರುಷರ ವಿಭಾಗದ ಬ್ಯಾಡ್ಮಿಂಟನ್ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಅವರು ಇಂದು ಖ್ಯಾತ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಒಲಿಂಪಿಕ್ ಕೂಟದ ಬ್ಯಾಡ್ಮಿಂಟನ್‌ನಲ್ಲಿ ಪುರುಷರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮೊದಲ ಶಟ್ಲರ್ ಎನಿಸಿಕೊಂಡಿರುವ ಲಕ್ಷ್ಯ ಸೇನ್ ಅವರು ಈ ಬಾರಿ ಗೆದ್ದು ಬಂದ ಹಾದಿಯನ್ನು ಮತ್ತು ಅವರ ಉತ್ಕೃಷ್ಟಮಟ್ಟದ ಆಟವನ್ನು ನೋಡುವಾಗ ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ಮಾಡಬಹುದು. ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಮತ್ತು ವಿಮಲ್‌ಕುಮಾರ್ ಗರಡಿಯಲ್ಲಿ ಪಳಗಿದ ಈ 22 ವರ್ಷದ ಲಕ್ಷ್ಯ ಸೇನ್ ಕಳೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ತೀನ್ ಚೆನ್ ಅವರೆದುರು ಮೊದಲ ಗೇಮ್ ಕಳೆದುಕೊಂಡೂ ಆ ಬಳಿಕ ಗೆದ್ದು ಬಂದ ರೀತಿ ಅಮೋಘವಾಗಿತ್ತು. ಇದೇ ರೀತಿ ಇಂದು ಕೂಡ ಗೆಲುವು ಸಾಧಿಸಿಲಿ ಎನ್ನುವುದು ಭಾರತೀಯ ಕ್ರೀಡಾಭಿಮಾನಿಗಳ ಹಾರೈಕೆ.
ಮುಖಾಮುಖಿ
ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಈಗಾಗಲೇ ಹಲವು ಪದಕ ಗೆದ್ದಿರುವ, 2 ಬಾರಿಯ ಚಾಂಪಿಯನ್ ಹಾಗೂ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ವಿಕ್ಟರ್ ಅಕ್ಸೆಲ್ಸೆನ್ ಮತ್ತು ಲಕ್ಷ್ಯ ಸೇನ್ ಇದುವರೆಗೂ ಒಟ್ಟು 8 ಬಾರಿ ವಿವಿಧ ಟೂರ್ನಿಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಗರಿಷ್ಠ 7 ಪಂದ್ಯಗಳನ್ನು ಅಕ್ಸೆಲ್ಸೆನ್ ಗೆದ್ದು ಬೀಗಿದ್ದಾರೆ. ಸೇನ್ ಕೇವಲ ಒಂದು ಬಾರಿ ಮಾತ್ರ ಗೆಲುವು ಕಂಡಿದ್ದಾರೆ. ಈ ಗೆಲುವು 2022ರ ಜರ್ಮನ್ ಓಪನ್ ಪಂದ್ಯಾವಳಿಯಲ್ಲಿ ಒಲಿದಿತ್ತು. ಈ ಅಂಕಿ ಅಂಶಗಳನ್ನು ನೋಡುವಾಗ ಅಕ್ಸೆಲ್ಸೆನ್ ಅವರೇ ಗೆಲ್ಲುವ ಫೇವರಿಟ್ ಆಗಿ ಗೋಚರಿಸಿದರೂ ಕೂಡ ಸೇನ್ ಈ ಬಾರಿ ಅಷ್ಟು ಸುಲಭದಲ್ಲಿ ಶರಣಾಗುವ ಸಾಧ್ಯತೆ ಕಡಿಮೆ. ಒಟ್ಟಾರೆ ಈ ಪಂದ್ಯ ರೋಚಕವಾಗಿ ಸಾಗುವುದರಲ್ಲಿ ಯಾವುದೇ ಅನುಮಾನ ಬೇಡ. ಸೋತರೆ ಕಂಚಿನ ಪದಕಕ್ಕಾಗಿ ಪ್ಲೇ ಆಫ್ ಸ್ಪರ್ಧೆಯಲ್ಲಿ ಆಡಬೇಕು. ಗೆದ್ದರೆ ಬೆಳ್ಳಿ ಅಥವಾ ಚಿನ್ನ ಖಚಿತ.
ಗ್ರೇಟ್ ಬ್ರಿಟನ್ ಮಣಿಸಿ ಸೆಮಿಫೈನಲ್ ಪ್ರವೇಶಿಸಲಿ ಭಾರತ ಹಾಕಿ ತಂಡ
ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫುಲ್ ಜೋಶ್ನಲ್ಲಿರುವ ಭಾರತ(Hockey India) ಪುರುಷರ ಹಾಕಿ ತಂಡ ಇಂದು ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ(Paris Olympics) ಗ್ರೇಟ್ ಬ್ರಿಟನ್(hockey india vs great britain) ವಿರುದ್ಧ ಆಡಲಿದೆ. ಈ ಪಂದ್ಯವನ್ನು ಕೂಡ ಗೆದ್ದು ಸೆಮಿಫೈನಲ್ ಪ್ರವೇಶಿಸುವುದು ಹರ್ಮನ್‌ಪ್ರೀತ್ ಸಿಂಗ್ ಪಡೆಯ ಯೋಜನೆಯಾಗಿದೆ.
ಇದನ್ನೂ ಓದಿ Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ಭಾರತದ ಅಥ್ಲೀಟ್ಗಳ ಸ್ಪರ್ಧೆಗಳ ವಿವರ ಇಲ್ಲಿದೆ
ಸ್ಯಾರಸ್ಯವೆಂದರೆ ಕಳೆದ ಟೋಕಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ನಲ್ಲೂ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 3-1 ಗೋಲ್ಗಳ ಅಂತರದಿಂದ ಗೆದ್ದು ಸೆಮಿಪೈನಲ್ ಪ್ರವೇಶಿಸಿತ್ತು. ಈ ಬಾರಿಯೂ ಇದೇ ರೀತಿಯ ಫಲಿತಾಂಶ ಮರುಕಳಿಸಿ ಭಾರತ ಸೆಮಿ ಟಿಕೆಟ್ ಪಡೆಯಲಿ ಎನ್ನುವುದು ಭಾರತೀಯರ ಹಾರೈಕೆ.
ಭಾರತದ ಪ್ರದರ್ಶನ ನೋಡುವಾಗ ಈ ಬಾರಿಯೂ ಪದಕವೊಂದನ್ನು ಗೆಲ್ಲುವುದು ಖಚಿತ ಎನ್ನಬಹುದು. ಕೊನೆಯ ಒಲಿಂಪಿಕ್ಸ್ ಆಡುತ್ತಿರುವ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರಂತು ತಮ್ಮ ಎಲ್ಲ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ತಡೆಗೋಡೆಯಂತೆ ನಿಂತು ಗೋಲ್ಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅದರಲ್ಲೂ 52 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ಮಣಿಸಿದ್ದು ಭಾರತಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ಹರ್ಮನ್‌ಪ್ರೀತ್ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಉತ್ತಮ. ರಕ್ಷಣಾ ವಿಭಾಗದಲ್ಲಿ ಅಮಿತ್ ರೋಹಿದಾಸ್ ಮತ್ತು ಜರ್ಮನ್‌ಪ್ರೀತ್ ಉತ್ತಮ ಫಾರ್ಮ್ನಲ್ಲಿದ್ದಾರೆ.