ಪ್ಯಾರಿಸ್: ಭಾರತದ ತಾರಾ ಟೇಬಲ್ ಟೆನಿಸ್ ಪಟು ಮಣಿಕಾ ಬಾತ್ರಾ(Manika Batra) ಅವರ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಅಭಿಯಾನ ಅಂತ್ಯ ಕಂಡಿದೆ. ಮಹಿಳಾ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಎದುರಿಸಿದ್ದಾರೆ. ಒಲಿಂಪಿಕ್ ಇತಿಹಾಸದಲ್ಲೇ ಟೇಬಲ್ ಟೆನಿಸ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಟಿಟಿ ಪಟು ಎಂಬ ಖ್ಯಾತಿಗೆ ಪಾತ್ರರಾದದ್ದು ಮಾತ್ರ ಅವರ ಪಾಲಿನ ಸಾಧನೆಯಾಗಿದೆ.
29 ವರ್ಷದ ಮಣಿಕಾ ಬುಧವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತನಗಿಂತ ಮೇಲಿನ ಶ್ರೇಯಾಂಕದ ಜಪಾನ್ನ ಮಿಯು ಹಿರಾನೋ(Miu Hirano) ವಿರುದ್ಧ 4-1(11-6, 11-9, 12-14, 11-8, 11-6) ಅಂತರದಲ್ಲಿ ಸೋಲು ಕಂಡರು. ವಿಶ್ವ ಶ್ರೇಯಾಂಕದಲ್ಲಿ 28ನೇ ಸ್ಥಾನ ಹೊಂದಿರುವ ಮಣಿಕಾ ಅವರು 13 ಶ್ರೇಯಾಂಕದ ಮಿಯು ಹಿರಾನೋ ಅವರ ಬಲಿಷ್ಠ ಹೊಡೆತಗಳಿಗೆ ತಡೆಯೊಡ್ಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿ ಸೋಲು ಕಂಡರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 2ನೇ ಸುತ್ತಿನಲ್ಲಿ ಮುಗ್ಗರಿಸಿದ್ದ ಮಣಿಕಾ ಈ ಬಾರಿ ಪ್ರೀ ಕ್ವಾರ್ಟರ್ ಫೈನಲ್ಗೇರುವಲ್ಲಿ ಸಫಲರಾದದ್ದು ಎಂಬುದಷ್ಟೇ ಅವರ ಪಾಲಿಗೆ ಸಮಾಧಾನಕರ ಸಂಗತಿ.
ಆರಂಭಿಕ ಗೇಮ್ನಲ್ಲಿ ಸೋಲು ಕಂಡ ಮಣಿಕಾ, 2ನೇ ಗೇಮ್ನಲ್ಲಿ ಆರಂಭಿಕ ಹಂತದಲ್ಲಿ ಮುನ್ನಡೆ ಸಾಧಿಸಿದರೂ ಕೂಡ ಕೆಲ ತಪ್ಪುಗಳಿಂದ ಈ ಗೇಮ್ ಕೂಡ ಕಳೆದುಕೊಂಡರು. ಮೂರನೇ ಗೇಮ್ನಲ್ಲಿ ತಿರುಗಿ ಬಿದ್ದ ಮಣಿಕಾ 14-12 ಅಂತರದಿಂದ ಈ ಗೇಮ್ ಗೆದ್ದು ಪಂದ್ಯವನ್ನು ಜೀವಂತವಿರಿಸಿದರು. ಈ ಗೇಮ್ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. 8-6 ಮುನ್ನಡೆ ಸಾಧಿಸಿದ್ದ ಮಣಿಕಾ ಇನ್ನೇನು ಗೆಲುವು ಸಾಧಿಸುತ್ತಾರೆ ಎನ್ನುವಷ್ಟರಲ್ಲಿ ಹಿರಾನೋ ಆಕ್ರಮಣಕಾರಿ ಆಟದ ಮೂಲಕ ಅಂಕ ಗಳಿಸಿ ತೀವ್ರ ಪೈಪೋಟಿ ನೀಡಿದರು. 2 ಬಾರಿ ಅಂಕಗಳು ಟೈಗೊಂಡಿತು. ಅಂತಿಮವಾಗಿ ಮಣಿಕಾ ಯಶಸ್ಸು ಸಾಧಿಸಿದರು.
ಇದನ್ನೂ ಓದಿ Paris Olympics: ಒಲಿಂಪಿಕ್ಸ್‌ನಲ್ಲಿ ನಾಳೆ ಭಾರತದ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ; 4 ಪದಕ ನಿರೀಕ್ಷೆ!
ನಾಲ್ಕನೇ ಗೇಮ್ ಕೂಡ ಅತ್ಯಂತ ರೋಚಕವಾಗಿ ಸಾಗಿತು. ಉಭಯ ಆಟಗಾರ್ತಿಯರು ಅಂಕ ಗಳಿಕೆಗಾಗಿ ಹಾವು ಏಣಿ ಆಟದಂತೆ ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಒಮ್ಮೆ ಮಣಿಕಾ ಮುನ್ನಡೆ ಸಾಧಿದರೆ, ಮತ್ತೊಮ್ಮೆ ಹಿರಾನೋ ಮುನ್ನಡೆ ಸಾಧಿಸುತ್ತಿದ್ದರು. ಅಂತಿಮವಾಗಿ ಜಪಾನ್ ಆಟಗಾರ್ತಿಯ ಕೈ ಮೇಲಾಯಿತು. ಅಂತಿಮ 5ನೇ ಗೇಮ್ನಲ್ಲಿಯೂ ಜಪಾನ್ ಆಟಗಾರ್ತಿ ಪ್ರಾಬಲ್ಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಭಾರತದ ಅಗ್ರ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರ್ತಿ ಶ್ರೀಜಾ ಅಕುಲಾ ಮಾತ್ರ ಟೆನಿಸ್ನಲ್ಲಿ ಭಾರತಕ್ಕೆ ಪದಕ ಭರವಸೆಯಾಗಿ ಉಳಿದುಕೊಂಡಿದ್ದಾರೆ. ಇಂದು(ಬುಧವಾರ) ನಡೆದ ಮಹಿಳೆಯರ ಸಿಂಗಲ್ಸ್ 32ರ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಝೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸಿ 16 ರ ರೌಂಡ್‌ಗೆ ಪ್ರವೇಶಿಸಿದ್ದಾರೆ. ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಸಿಂಗಾಪುರದ ಜಿಯಾನ್ ಝೆಂಗ್ ಅವರನ್ನು 9-11, 12-10, 11-4, 11-5, 10-12, 12-10 ಅಂಕಗಳಿಂದ ಹಿಮ್ಮೆಟಿಸಿದರು.
ಸೋಲಿನ ಬಳಿಕ ಕಮ್ಬ್ಯಾಕ್
ಮೊದಲ ಸೆಟ್‌ನಲ್ಲಿ ಶ್ರೀಜಾ ಸೋಲು ಕಂಡರು. ಆದರೆ, ದ್ವಿತೀಯ ಸೆಟ್‌ನಲ್ಲಿ ತೀವ್ರ ಪೈಪೋಟಿ ನಡೆಸಿ ಗೆಲುವಿನ ಕಮ್ಬ್ಯಾಕ್ ಮಾಡುವ ಮೂಲಕ 1-1 ಸಮಬಲ ಸಾಧಿಸಿದರು. ಗೆಲುವಿನ ಅಂತರ 12-10. ಮೂರನೇ ಸೆಟ್‌ನಲ್ಲಿ ಮತ್ತು ನಾಲ್ಕನೇ ಸೆಟ್‌ನಲ್ಲಿ ಅತ್ಯಂತ ಜೋಶ್ನಿಂದ ಆಡಿದ ಶ್ರೀಜಾ ಬರ್ಜರಿ ಗೆಲುವು ಸಾಧಿಸಿ ಭಾರೀ ಮುನ್ನಡೆ ಸಾಧಿಸಿದರು. 5ನೇ ಸೆಟ್‌ನಲ್ಲಿ ತೀವ್ರ ಹೋರಾಟ ನಡೆಸಿದರೂ ಸ್ವಲ್ಪ ಸಮಸ್ಯೆ ಎದುರಿಸಿ ಸಣ್ಣ ಅಂತರದಿಂದ ಮತ್ತೆ ಸೋಲು ಕಂಡರು. ಅಂತಿಮ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಕಠಿಣ ಪೈಪೋಟಿ ಎದುರಾದರೂ ಕೂಡ ಇದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿ ಗೆಲುವಿನ ನಗೆ ಬೀರಿದರು. ಗೆಲುವಿನ ಅಂತರ 9-11, 12-10, 11-4, 11-5, 10-12, 12-10.