ಪ್ಯಾರಿಸ್: ಅತಿ ದೊಡ್ಡ ಕ್ರೀಡಾಕೂಟವಾದ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಆರಂಭಕ್ಕೆ ಇನ್ನು 2 ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಈ ಕ್ರೀಡಾಕೂಟಕ್ಕೆ ಉಗ್ರರ ದಾಳಿಯ ಭೀತಿ ಎದುರಾಗಿದ್ದ ಕಾರಣ ಪ್ಯಾರಿಸ್ನಲ್ಲಿ ಹಿಂದೆಂದೂ ಕಾಣದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ಫ್ರಾನ್ಸ್ನೊಂದಿಗೆ ಭಾರತದ ಯೋಧರು ಕೂಡ ಕೈಜೋಡಿಸಿದ್ದಾರೆ. ಇದೀಗ ಹಮಾಸ್(Hamas) ಭಯೋತ್ಪಾದಕರಿಂದ(hamas terrorist) ಭೀಕರ ದಾಳಿಯ ಬೆದರಿಕೆ ಬಂದಿದೆ.
ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಮುಸುಕುಧಾರಿ ಒಲಿಂಪಿಕ್ಸ್ ವೇಳೆ ಫ್ರಾನ್ಸ್ ಅಧ್ಯಕ್ಷರನ್ನು ಹತ್ಯೆ ಮಾಡುವುದಾಗಿ ಮತ್ತು ಫ್ರಾನ್ಸ್ನಲ್ಲಿ ರಕ್ತದೋಕುಳಿ ಹರಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಫ್ರಾನ್ಸ್ನಲ್ಲಿ ಮತ್ತಷ್ಟು ಭದ್ರತೆ ಕೈಗೊಳ್ಳಲಾಗಿದೆ. ಪ್ಯಾರಿಸ್ನ ಕ್ರೀಡಾ ಗ್ರಾಮದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಂಘಟಕರು ನಿರ್ಧರಿಸಿದ್ದಾರೆ. ಪ್ಯಾರಿಸ್ ಪೊಲೀಸ್ ಮುಖ್ಯಸ್ಥ ಲಾರೆಂಟ್ ನುನೆಜ್ ಅವರು ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟಕ್ಕೆ ಸಂಬಂಧಿಸಿ ಮಾತನಾಡಿದ್ದು, ನಾವು ಉಗ್ರರ ಬೆದರಿಕೆಯ ಬಗ್ಗೆ ಕಳವಳ ಹೊಂದಿದ್ದೇವೆ. ವಿಶೇಷವಾಗಿ ಇಸ್ಲಾಮಿಕ್ ಉಗ್ರವಾದಿಗಳು, ಪ್ಯಾಲೆಸ್ಟೀನಿಯನ್ ಪರ ಚಳವಳಿಯಿಂದ ಕಡಿಮೆ-ತೀವ್ರತೆಯ ಬೆದರಿಕೆಯ ಬಗ್ಗೆಯೂ ನಾವು ವಿಶೇಷ ಕಾಳಜಿ ವಹಿಸುತ್ತೇವೆ. ಕ್ರೀಡಾಪಟುಗಳು ಆತಂಕಪಡಬೇಕಿಲ್ಲ ಎಂದು ಹೇಳಿದ್ದಾರೆ.
ಭಯೋತ್ಪಾದನಾ ದಾಳಿ ತಡೆ ಭದ್ರತಾ ಕಾರ್ಯಕ್ಕಾಗಿ ಭಾರತೀಯ ಸೇನೆಯಲ್ಲಿ ತರಬೇತುಗೊಂಡ ಶ್ವಾನದಳವನ್ನು ನಿಯೋಜಿಸಲಾಗಿದೆ. ಈ ಶ್ವಾನಪಡೆಯ ಸಾಮರ್ಥ್ಯ ಪರೀಕ್ಷೆ ನಡೆದದ್ದು ಬೆಂಗಳೂರಿನಲ್ಲಿ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ವಿಶೇಷ ಕಮಾಂಡೊ ಪಡೆಯ ಭಾರತೀಯ ಕೆ9 (ಕೆನೈನ್) ಹತ್ತು ಶ್ವಾನಗಳ ಪಡೆಯನ್ನು ಪ್ಯಾರಿಸ್‌ಗೆ ಕಳುಹಿಸಲಾಗಿದೆ. ಬೆಂಗಳೂರು ಸಮೀಪದ ತರಳುವಿನಲ್ಲಿರುವ ಸಿಆರ್‌ಪಿಎಫ್ ಶ್ವಾನ ತಳಿ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಈ ಶ್ವಾನಪಡೆಯ ಸಾಮರ್ಥ್ಯ ಪರೀಕ್ಷೆ ನಡೆಸಿದ ಬಳಿಕ ಪ್ಯಾರಿಸ್‌ಗೆ ಕಳುಹಿಸಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿರುವ ಭದ್ರತಾ ಪಡೆಗಳೊಂದಿಗೆ ಈ ಶ್ವಾನಪಡೆಯು ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ Paris Olympics: ಪ್ಯಾರಿಸ್ ಒಲಿಂಪಿಕ್ಸ್ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ
ಈ ಶ್ವಾನಗಳಿಗೆ ಹತ್ತು ವಾರಗಳ ಕಾಲ ವಿಶೇಷ ತರಬೇತಿ ನೀಡಲಾಗಿದೆ. ಸಿಎಪಿಎಫ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಗಳಿಂದ ಈ ಶ್ವಾನ ಮತ್ತು ನಿರ್ವಹಾಕರನ್ನು ಆಯ್ಕೆ ಮಾಡಲಾಗಿದೆ. ಈ ಶ್ವಾನಪಡೆಯಲ್ಲಿರುವ ಬೆಲ್ಜಿಯನ್ ಮೆಲಿನೊಸ್ ತಳಿಯು ಪ್ರಮುಖವಾಗಿದೆ. ಬಾಂಬ್ ಪತ್ತೆ ಕಾರ್ಯಾಚರಣೆಯಲ್ಲಿ ಅತ್ಯಂತ ಚುರುಕಾದ ತಳಿ ಇದಾಗಿದೆ.
ಪ್ಯಾರಿಸ್ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್ ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.