ಪ್ಯಾರಿಸ್: ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಿಸ್ತೂಲ್ ದೋಷದಿಂದ ಹಿನ್ನಡೆ ಅನುಭವಿಸಿದ್ದ ಶೂಟರ್ ಮನು ಭಾಕರ್(Manu Bhaker) ಇದೀಗ ಪ್ಯಾರಿಸ್(Paris Olympics Shooting) ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಪದಕವೊಂದನ್ನು ಗೆದ್ದು ಸಂಭ್ರಮಿಸಿದ್ದಾರೆ. 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್ ಪಂದ್ಯದಲ್ಲಿ 221.7 ಅಂಕ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ. ಕೊರಿಯಾದ ಶೂಟರ್ಗಳಾದ ಓಹ್ ಯೇ ಜಿನ್(243.2), ಕಿಮ್ ಯೆಜಿ(241.3) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸುಮಾ ಶಿರೂರ್ ಕೊನೆಯ ಬಾರಿಗೆ ಫೈನಲ್ ತಲುಪಿದ್ದರು. ಆದರೆ ಅವರಿಂದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವರು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಮನು ಭಾಕರ್ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶೂಟಿಂಗ್ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎನ್ನುವ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದರು.
ಅಂದು ನಿರಾಸೆ… ಇಂದು ಖುಷಿ
ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್ ಕೂಟವಾಗಿತ್ತು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಅಂದಿನ ನಿರಾಸೆಯನ್ನು ಈಗ ಪ್ಯಾರಿಸ್ನಲ್ಲಿ ಪದಕ ಗೆಲ್ಲುವ ಮೂಲಕ ನೀಗಿಸಿಕೊಂಡರು.
ನಿರೀಕ್ಷೆಯಂತೆ ಪದಕ ಗೆದ್ದ ಮನು
ಹರಿಯಾಣದ 22 ವರ್ಷದ ಮನು ಭಾಕರ್ ಕಳೆದ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಅಂಕ ಕಲೆ ಹಾಕಿ 3ನೇ ಸ್ಥಾನದೊಂದಿಗೆ ಫೈನಲ್ಗೆ ಪ್ರವೇಶಿಸಿದ್ದರು. ಈ ಬಾರಿಯ ಒಲಿಂಪಿಕ್ಸ್ ಪದಕ ನಿರೀಕ್ಷೆಯ ಕ್ರೀಡಾಪಟುಗಳಲ್ಲಿ ಮನು ಭಾಕರ್ ಕೂಡ ಕಾಣಿಸಿಕೊಂಡಿದ್ದರು. ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಪದಕ ಗೆದ್ದು ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.