Site icon Vistara News

Paris Olympics: ಫೈನಲ್​ ಪ್ರವೇಶಿಸಿ ಐತಿಹಾಸಿಕ ಪದಕ ಖಾತ್ರಿಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್

ರಾಜಮಾರ್ಗ ಅಂಕಣ Paris Olympics

Paris Olympics: Star Wrestler Vinesh Phogat enters maiden Olympic final

ಪ್ಯಾರಿಸ್​: ಭಾರತದ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು​ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ನಡೆಸಿ ನಡು ರಸ್ತೆಯಲ್ಲೇ ಪೊಲೀಸರಿಂದ ಲಾಠಿ ಏಟು ತಿಂದು ಬಂಧನಕ್ಕೆ ಒಳಗಾಗಿದ್ದ, ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ​ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಫೈನಲ್​ ಪ್ರವೇಶಿಸುವ ಮೂಲಕ ದೇಶಕ್ಕೆ ಐತಿಹಾಸಿಕ ಪದಕವೊಂದನ್ನು ಖಾತ್ರಿಪಡಿಸಿದ್ದಾರೆ.

ಮಂಗಳವಾರ ರಾತ್ರಿ ನಡೆದ ಮಹಿಳೆಯರ 50 ಕೆಜಿ ಕುಸ್ತಿ ಸೆಮಿಫೈನಲ್​ ಪಂದ್ಯದಲ್ಲಿ ಯುಸ್ನಿಲಿಸ್ ಗುಜ್ಮಾನ್(Yusneylys Guzman) ಅವರನ್ನು 5-0 ಅಂತರದಿಂದ ಮಣಿಸಿ ಈ ಸಾಧನೆ ಮಾಡಿದರು. ಈ ಮೂಲಕ ವಿನೇಶ್ ಫೋಗಟ್ ಒಲಿಂಪಿಕ್ ಇತಿಹಾಸದಲ್ಲಿ ಫೈನಲ್‌ ಪ್ರವೇಶಿಸಿ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಫೈನಲ್​ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರೂ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿನೇಶ್ ಒಲಿಂಪಿಕ್ಸ್​ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಇದು ವಿನೇಶ್​ ಅವರ ಮೂರನೇ ಒಲಿಂಪಿಕ್ಸ್​ ಟೂರ್ನಿಯಾಗಿದೆ.

ಸುಸಾಕಿಗೆ ಸೋಲುಣಿಸಿದ ಮೊದಲ ಕುಸ್ತಿಪಟು


ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್​ ಅವರು ಮೂರು ಬಾರಿಯ ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತೆ ಉಕ್ರೇನ್​ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್​ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದಿದ್ದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ, ನಾಲ್ಕು ಬಾರಿಯ ವಿಶ್ವ ಚಾಂಪಿಯನ್​, ಸೋಲನ್ನೇ ಕಾಣದ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ಸುಸಾಕಿ ಅವರಿಗೆ ಮೊದಲ ಸೋಲಿನ ರುಚಿ ತೋರಿಸಿದರು.

ಇದನ್ನೂ ಓದಿ Paris Olympics 2024 : ಕಂಚು ಕಳೆದುಕೊಂಡ ಲಕ್ಷ್ಯ ಸೇನ್​​; 2008ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್​ನಲ್ಲಿ ಪದಕವಿಲ್ಲ

ಸಸಾಕಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕಂಡ ಮೊದಲ ಆಘಾತಕಾರಿ ಸೋಲು ಇದಾಗಿದೆ. ಈ ಪಂದ್ಯಕ್ಕೂ ಮುನ್ನ 82 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಸುಸಾಕಿ ಎಲ್ಲ ಪಂದ್ಯವನ್ನು ಗೆದ್ದು ಬೀಗಿದ್ದರು. ಇದೀಗ ಇವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್​ ಹಾಕುವಲ್ಲಿ ಭಾರತೀಯ ಕುಸ್ತಿಪಟು ಯಶಸ್ಸು ಕಂಡಿದ್ದಾರೆ. ಈ ಗೆಲುವು ಸಾಧಿಸಿದಾಗಲೇ ವಿನೇಶ್​ ಈ ಬಾರಿ ಪದಕ ಗೆಲ್ಲುವುದು ಖಚಿತ ಎಂದು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಂತೆ ಅವರು ಫೈನಲ್​ ಪ್ರವೇಶಿಸಿ ಪದಕವೊಂದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ Paris Olympics: ನಾಳೆ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧೆಗಳ ವಿವರ ಹೀಗಿದೆ

ಪ್ರಶಸ್ತಿ ಹಿಂದಿರುಗಿಸಿದ್ದ ವಿನೇಶ್​

ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಕಳೆದ ವರ್ಷ ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿ ಕೂಡ ವಿನೇಶ್​ ಅವರೇ ಆಗಿದ್ದರು.

ಪ್ರತಿಭಟನೆಗೆ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಸಹಕರಿಸದೇ ಇದ್ದಾಗ ಪ್ರಧಾನಿ ಮೋದಿಗೆ ಪತ್ರ ಬರೆದು ತಮಗೆ ಲಭಿಸಿದ್ದ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ(Kartavya Path) ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದರು. 

Exit mobile version