ಪ್ಯಾರಿಸ್: ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ತೊಡೆತಟ್ಟಿ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ(Kartavya Path) ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದ ಕುಸ್ತಿಪಟು ವಿನೇಶ್ ಫೋಗಟ್(Vinesh Phogat), ಪ್ಯಾರಿಸ್ ಒಲಿಂಪಿಕ್ಸ್(Paris Olympics) 50 ಕೆಜಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿಸಿದ್ದಾರೆ. ಈ ಮೂಲಕ ಪದಕ ಭರವಸೆಯೊಂದನ್ನು ಮೂಡಿಸಿದ್ದಾರೆ.
ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ ಉಕ್ರೇನ್ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದಿದ್ದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಗೆಲುವು ಕಂಡಾಗಲೇ ವಿನೇಶ್ ಈ ಬಾರಿ ಪದಕ ಗೆಲ್ಲುವುದು ಖಚಿತ ಎಂದು ನಿರ್ಧರಿಸಲಾಗಿತ್ತು. ಇದೀಗ ಸೆಮಿ ಹಂತಕ್ಕೇರಿರುವ ಅವರು ಪದಕವೊಂದನ್ನು ಖಾತ್ರಿ ಪಡಿಸಿದ್ದಾರೆ. ಸುಸಾಕಿ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕಂಡ ಮೊದಲ ಸೋಲು ಇದಾಗಿದೆ. 82 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಸುಸಾಕಿ ಎಲ್ಲ ಪಂದ್ಯವನ್ನು ಗೆದ್ದು ಬೀಗಿದ್ದರು. ಇದೀಗ ಇವರ ಗೆಲುವಿನ ನಾಗಾಲೋಟಕ್ಕೆ ಭಾರತೀಯ ಕುಸ್ತಿಪಟು ಬ್ರೇಕ್ ಹಾಕುವಲ್ಲಿ ಯಶಸ್ಸು ಕಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೇ ಕೆಲವೇ ದಿನ ಬಾಕಿ ಇರುವಾಗ ಮ್ಯಾಡ್ರಿಡ್ನಲ್ಲಿ ನಡೆದಿದ್ದ ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್(Grand Prix) ಕುಸ್ತಿ ಟೂರ್ನಿಯಲ್ಲಿ ವಿನೇಶ್ ಚಿನ್ನದ ಪದಕ ಗೆದ್ದು ಬೀಗಿದ್ದರು. 50 ಕೆಜಿ ವಿಭಾಗದಲ್ಲಿ ವಿನೇಶ್ ಒಲಿಂಪಿಕ್ಸ್ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ಅವರು 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು.
ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಕಳೆದ ವರ್ಷ ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿ ಕೂಡ ವಿನೇಶ್ ಅವರೇ ಆಗಿದ್ದರು.