ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಾಲಿಂಪಿಕ್ಸ್(Paris Paralympics) ಕ್ರೀಡಾಕೂಟಕ್ಕೆ ನಾಳೆ ಅಧಿಕೃತ ಚಾಲನೆ ಸಿಗಲಿದೆ. ಭಾರತದಿಂದ ದಾಖಲೆಯ 84 ಸ್ಪರ್ಧಿಗಳು ಈ ಬಾರಿ ಭಾಗವಹಿಸಲಿದ್ದಾರೆ. ಕಳೆದ ಟೋಕಿಯೊದಲ್ಲಿ 19 ಪದಕ ಗೆದ್ದಿದ್ದ ಭಾರತ ಈ ಬಾರಿ 25 ಪದಕ ಗುರಿಯನ್ನಿಟ್ಟುಕೊಂಡಿದೆ. ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕೆನೊಯಿಂಗ್, ಸೈಕ್ಲಿಂಗ್, ಬ್ಲೈಂಡ್ ಜುಡೊ, ಪವರ್ ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಸೇರಿದಂತೆ 12 ಕ್ರೀಡೆಗಳಲ್ಲಿ ಭಾರತ ಕ್ರೀಡಾಪಟುಗಳು ಕಣಕ್ಕೆ ಇಳಿಯಲಿದ್ದಾರೆ. ಪದಕ ಫೇವರಿಟ್ ಎನಿಸಿಕೊಂಡಿರುವ ಅಗ್ರ-10 ಕ್ರೀಡಾಪಟುಗಳ ಪರಿಚಯ ಇಲ್ಲಿದೆ.
ಸುಮಿತ್ ಅಂಟಿಲ್ (ಜಾವೆಲಿನ್)
ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 3 ಸಲ ವಿಶ್ವದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದ ಸುಮಿತ್ ಅಂಟಿಲ್ ಈ ಬಾರಿಯ ಪದಕ ಭರವಸೆಯ ಕ್ರೀಡಾಪಟುಗಳಲ್ಲಿ ಅಗ್ರಗಣ್ಯನಾಗಿ ಕಾಣಿಸಿಕೊಂಡಿದ್ದಾರೆ. ಎಫ್64 ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಸುಮಿತ್ ಸತತ 2 ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 2022ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲೂ ಚಿನ್ನ ಗೆದ್ದ ಸಾಧನೆ ಇವರದ್ದಾಗಿದೆ. 2015ರಲ್ಲಿ ಸಂಭವಿಸಿದ ರಸ್ತೆ ಅಪಘಾತಲ್ಲಿ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರು. ಸುಮಿತ್ ಅಂಟಿಲ್ ಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್ ಭಾಗ್ಯಶ್ರೀ ಜಾಧವ್ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಶೀತಲ್ ದೇವಿ (ಆರ್ಚರಿ)
ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಬಿಲ್ಗಾರ್ತಿ ಶೀತಲ್ ದೇವಿ (17 ವರ್ಷ) ಈ ಬಾರಿಯ ಪ್ಯಾರಾಲಿಂಪಿಕ್ಸ್ ಭಾರತ ತಂಡದ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು. 2 ಕೈಗಳಿಲ್ಲದ ಅವರು ಕಾಲಿನಿಂದಲೇ ಬಿಲ್ಲು–ಬಾಣ ಹಿಡಿದು ಸ್ಪರ್ಧಿಸುತ್ತಾರೆ. ಕಳೆದ ವರ್ಷ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ವೈಯಕ್ತಿಕ ಕಾಂಪೌಂಡ್ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದಿದ್ದರು. ಹೀಗಾಗಿ ಇವರ ಮೇಲೆ ಪದಕ ನಿರೀಕ್ಷೆ ಮಾಡಲಾಗಿದೆ. ಇದು ಅವರ ಚೊಚ್ಚಲ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ. ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ.
ಕೃಷ್ಣ ನಗರ್ (ಬ್ಯಾಡ್ಮಿಂಟನ್)
ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಶಟ್ಲರ್ ಕೃಷ್ಣನಗರ್, ಈ ಬಾರಿಯೂ ಸ್ಪರ್ಧಿಸುತ್ತಿದ್ದು, ಮತ್ತೊಂದು ಚಿನ್ನದ ಕಾತರದಲ್ಲಿದ್ದಾರೆ. ಈ ವರ್ಷ ಚಿನ್ನ ಸೇರಿ ಒಟ್ಟಾರೆ 4 ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಪದಕ ಸಾಧನೆ ಮಾಡಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲೂ 3 ಬಾರಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಅವನಿ ಲೇಖರ (ಶೂಟಿಂಗ್)
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಅವಳಿ ಪದಕ ಸಾಧನೆ ಮಾಡಿದ್ದ ತಾರಾ ಶೂಟರ್ ಅವನಿ ಲೇಖರ ಈ ಬಾರಿಯೂ ಚಿನ್ನದ ನಿರೀಕ್ಷೆಯಲ್ಲಿದ್ದಾರೆ. ರಾಜಸ್ಥಾನದ ಅವನಿ ಟೋಕಿಯೋದಲ್ಲಿ 10 ಮೀ. ಏರ್ ರೈಫಲ್‌ನಲ್ಲಿ ಚಿನ್ನ ಹಾಗೂ 50 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ಇದೀಗ ಅವನಿ ಪ್ಯಾರಿಸ್ ಗೇಮ್ಸ್‌ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.
ಇದನ್ನೂ ಓದಿ Paris Paralympics : ಪ್ಯಾರಾಲಿಂಪಿಕ್ಸ್‌ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ
ಸುಹಾಸ್ ಯತಿರಾಜ್ (ಬ್ಯಾಡ್ಮಿಂಟನ್)
ಹಾಸನ ಮೂಲದ ಐಎಎಸ್ ಅಧಿಕಾರಿ, ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಕನ್ನಡಿಗ ಸುಹಾಸ್ ಯತಿರಾಜ್(Suhas Lalinakere Yathiraj) ಈ ಬಾರಿ ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಪುರುಷರ ಸಿಂಗಲ್ಸ್ ಎಸ್ಎಲ್4 ವಿಭಾಗದಲ್ಲಿ ಸ್ಪರ್ಧಿಸುವ ಸುಹಾಸ್, ವಿಶ್ವಚಾಂಪಿಯನ್‌ಶಿಪ್, ಏಷ್ಯನ್ ಚಾಂಪಿಯನ್ ಶಿಪ್, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮರಿಯಪ್ಪನ್ ತಂಗವೇಲು (ಹೈಜಂಪ್)
29 ವರ್ಷದ ತಮಿಳುನಾಡು ಮೂಲದ, ಭಾರತದ ಪ್ಯಾರಾ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಕಳೆದ 2 ಪ್ಯಾರಾಲಿಂಪಿಕ್ಸ್‌ಗಳಲ್ಲೂ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 2016ರಲ್ಲಿ ಚಿನ್ನ ಗೆದ್ದಿದ್ದ ಅವರು, ಟೋಕಿಯೋದಲ್ಲಿ ಬೆಳ್ಳಿ ಜಯಿಸಿದ್ದರು. ಇದೀಗ ಹ್ಯಾಟ್ರಿಕ್ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವಚಾಂಪಿಯನ್‌ಶಿಪ್ ಚಿನ್ನ, ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ಗೆದ್ದ ಹಿರಿಮೆ ತಂಗವೇಲು ಅವರದ್ದು.
ಮನೋಜ್ (ಬ್ಯಾಡ್ಮಿಂಟನ್)
ವಿಶ್ವಚಾಂಪಿಯನ್ ಶಿಪ್‌ನಲ್ಲಿ 3 ಚಿನ್ನ ಸೇರಿ ಬರೋ ಬ್ಬರಿ 10 ಪದಕ ಸಾಧನೆ ಮಾಡಿರುವ ಮನೋಜ್ ಸರ್ಕಾರ್, ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸಲ್ಲಿ ಕಂಚು ಜಯಿಸಿದ್ದರು. ಇದೀಗ ಪ್ಯಾರಿಸ್‌ನಲ್ಲಿ ಪದಕದ ಬಣ್ಣವನ್ನು ಬದಲಿಸುವ ನಿರೀಕ್ಷೆಯಲ್ಲಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಸೇರಿ 3 ಪದಕ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಸೇರಿ 2 ಪದಕ ಗೆದ್ದಿರುವ ಮನೋಜ್ ಪ್ಯಾರಿಸ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
ಮನೀಷ್ ನರ್ವಾಲ್(ಶೂಟಿಂಗ್)
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಶೂಟರ್ ಮನೀಷ್ ನರ್ವಾಲ್ ಮೇಲೆ ಈ ಬಾರಿ ಪ್ಯಾರಿಸ್ನಲ್ಲಿಯೂ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. 2021ರ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಸ್‌ಎಚ್1 ವಿಭಾಗದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.
ನಿಶಾದ್ ಕುಮಾರ್ (ಹೈಜಂಪ್)
ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್ನಲ್ಲಿ ಪುರುಷರ 847 ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ನಿಶಾದ್ ಕುಮಾರ್ ಮತ್ತೊಂದು ಪದಕ ನಿರೀಕ್ಷೆಯಲ್ಲಿದ್ದಾರೆ. 2023, 2024ರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಸತತ 2 ಬಾರಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿರುವ ಸತತ 2ನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುವ ಕಾತರದಲ್ಲಿದ್ದಾರೆ.
ಮಾನಸಿ ಜೋಶಿ (ಬ್ಯಾಡ್ಮಿಂಟನ್)
ಭಾರತದ ಪ್ಯಾರಾ ಶಟ್ಲರ್ ಮಾನಸಿ ಜೋಶಿ, ಪ್ಯಾರಿಸ್‌ನಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 35 ವರ್ಷದ ಅನುಭವಿ ಮಹಿಳಾ ಶಟ್ಲರ್ ಜೋಶಿ, 2019ರಲ್ಲಿ ಚಿನ್ನ ಸೇರಿ ಈ ವರೆಗೂ 7 ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಸಾಧನೆ ಮಾಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 3, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 1 ಪದಕ ಗೆದ್ದಿದ್ದಾರೆ.