ಮುಂಬಯಿ: ಈ ಬಾರಿಯ ಐಪಿಎಲ್ ಇಂಜುರಿ ಪ್ರೀಮಿಯರ್ ಲೀಗ್ ಆಗಿ ಪರಿವರ್ತನೆಗೊಂಡಿದೆ. ಗಾಯದ ಕಾರಣಕ್ಕೆ ಹಲವಾರು ಆಟಗಾರರು ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರ ಪಟ್ಟಿಗೆ ಕನ್ನಡಿಗ ಹಾಗೂ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರೂ ಸೇರಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಅವರು ಈ ಬಾರಿ ಆಡುವುದಿಲ್ಲ ಎಂದು ಪ್ರಕಟಗೊಂಡ ಹಿನ್ನೆಲೆಯಲ್ಲಿ ವೇಗದ ಬೌಲರ್ ಸಂದೀಪ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಸಂದೀಪ್ ಶರ್ಮಾ ಅವರು ಹಿರಿಯ ಬೌಲರ್ ಹಾಗೂ 10 ವರ್ಷ ಐಪಿಎಲ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. 104 ಪಂದ್ಯಗಳಲ್ಲಿ 114 ವಿಕೆಟ್ ಕೂಡ ಉರುಳಿಸಿದ್ದಾರೆ. ಅದರೆ, 2023ರ ಐಪಿಎಲ್ ಹರಾಜಿನಲ್ಲಿ ಅವರನ್ನು ಯಾವುದೇ ತಂಡ ಖರೀದಿ ಮಾಡಿಲಿಲ್ಲ. ಇದೀಗ ಅವರಿಗೆ ಮತ್ತೆ ಅದೃಷ್ಟ ಖುಲಾಯಿಸಿದೆ. ರಾಜಸ್ಥಾನ್ ತಂಡ 50 ಲಕ್ಷ ರೂಪಾಯಿ ಮೂಲ ಬೆಲೆಗೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಪ್ರಸಿದ್ದ್ ಕೃಷ್ಣ ಗಾಯದ ಸಮಸ್ಯೆಯಿಂದ ಕಳೆದ ಹಲವು ದಿನಗಳಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಗಾಯದ ಹಿನ್ನೆಲೆಯಲ್ಲಿ ಅವರು ಭಾರತ ತಂಡಕ್ಕೆ ಆಯ್ಕೆಯಾಗುವ ಹಲವು ಅವಕಾಶಗಳನ್ನು ಕೂಡ ಕಳೆದುಕೊಂಡಿದ್ದರು.
ನಿತೀಶ್ ರಾಣಾ ಕೆಕೆಆರ್ ನಾಯಕ
ಮುಂಬಯಿ ಮೂಲದ ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ಗಾಯದ ಸಮಸ್ಯೆ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಅವರು ಯಾವಾಗ ಸಂಪೂರ್ಣ ಫೀಟ್ ಆಗಿ ಆಡುವರು ಎಂಬುದೂ ಗೊತ್ತಿಲ್ಲ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಎಡಗೈ ಬ್ಯಾಟರ್ ನಿತೀಶ್ ರಾಣಾಗೆ ಕೆಕೆಆರ್ ತಂಡದ ನಾಯಕತ್ವ ನೀಡಲಾಗಿದೆ. 2022ರಲ್ಲಿ ಶ್ರೇಯಸ್ ಅಯ್ಯರ್ ತಂಡದ ನಾಯಕರಾಗಿದ್ದರು. ಆದರೆ, ಅವರು ಈ ಬಾರಿ ಯಾವಾಗ ತಂಡ ಸೇರಿಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲದ ಕಾರಣ ತಾತ್ಕಾಲಿಕ ನಾಯಕರಾಗಿ ನಿತೀಶ್ ರಾಣಾಗೆ ಅವಕಾಶ ನೀಡಲಾಗಿದೆ.
ನಿತೀಶ್ ರಾಣಾ 2018ರಿಂದ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಎಡಗೈ ಬ್ಯಾಟರ್ ಪ್ರತಿಯೊಂದು ಆವೃತ್ತಿಯಲ್ಲೂ 300ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಅದೇ ರೀತಿ ಅವರಿಗೆ ದೇಶಿಯ ಕ್ರಿಕೆಟ್ನಲ್ಲಿ ಡೆಲ್ಲಿ ತಂಡ ನಾಯಕತ್ವ ವಹಿಸಿದ ಅನುಭವವಿದೆ. ಅದೇ ರೀತಿ ಶ್ರೀಲಂಕಾ ವಿರುದ್ಧದ ತವರಿನ ಸರಣಿಯ ವೇಳೆ ನಿತೀಶ್ ರಾಣಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
ಶ್ರೇಯಸ್ ಅಯ್ಯರ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದ ವೇಳೆಗೆ ಬೆನ್ನು ನೋವಿಗೆ ಒಳಗಾಗಿದ್ದರು. ಹೀಗಾಗಿ ಕೋಲ್ಕೊತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ವಿದೇಶಿ ಆಟಗಾರರಾದ ಆ್ಯಂಡ್ರೆ ರಸೆಲ್, ಸುನೀಲ್ ನರೈನ್ ಹಾಗೂ ನ್ಯೂಜಿಲ್ಯಾಂಡ್ನ ವೇಗದ ಬೌಲರ್ ಟಿಮ್ ಸೌಥಿ ಕೋಲ್ಕೊತಾ ತಂಡದಲ್ಲಿದ್ದಾರೆ. ಆದರೆ ಅವರಿಗೆ ನಾಯಕತ್ವ ನೀಡದೆ ರಾಣಾಗೆ ವಹಿಸಲಾಗಿದೆ.
ಶ್ರೇಯಸ್ ಅಯ್ಯರ್ ಸದ್ಯಕ್ಕೆ ಲಭ್ಯವಿಲ್ಲದ ಹೊರತಾಗಿಯೂ ಟೂರ್ನಿಯ ಕೊನೇ ಹಂತದಲ್ಲಿ ಸುಧಾರಿಸಿಕೊಂಡು ತಂಡ ಸೇರಬಹುದು ಎಂಬ ವಿಶ್ವಾಸವನ್ನು ಕೆಕೆಆರ್ ಮ್ಯಾನೇಜ್ಮೆಂಟ್ ಹೊಂದಿದೆ. ಹೀಗಾಗಿ ರಾಣಾಗೆ ತಾತ್ಕಾಲಿಕ ನಾಯಕತ್ವ ವಹಿಸಿದೆ. ನಾಯಕತ್ವ ಬದಲಾವಣೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಶ್ರೇಯಸ್ ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳುವ ವಿಶ್ವಾಸವಿದೆ. ಅದೇ ರೀತಿ ನಿತೀಶ್ ರಾಣಾ ಅವರ ನೇತೃತ್ವದಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡಲಿದ ಎಂದು ಹೇಳಿದ್ದಾರೆ.
ಹೆಡ್ಕೋಚ್ ಚಂದ್ರಕಾಂತ್ ಪಾಟೀಲ್ ಹಾಗೂ ತಂಡದ ಹಿರಿಯ ತರಬೇತಿ ಸಿಬ್ಬಂದಿಯ ನೆರವಿನಿಂದ ನಿತೀಶ್ ರಾಣಾ ಉತ್ತಮ ಸಾಧನೆ ಮಾಡುವ ವಿಶ್ವಾಸ ನಮಗಿದೆ ಎಂಬುದಾಗಿ ಪ್ರಕಟಣೆಯಲ್ಲಿ ಬರೆದಿದ್ದಾರೆ. ಕೋಲ್ಕೊತಾ ನೈಟ್ ರೈಡರ್ಸ್ ತಂಡ ಏಪ್ರಿಲ್ 1ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬಳಗಕ್ಕೆ ಎದುರಾಗಲಿದೆ.