Site icon Vistara News

PBKS v DC: ಡೆಲ್ಲಿಗೆ ಸೋಲಿನ ಡಿಚ್ಚಿ ಕೊಟ್ಟ ಪಂಜಾಬ್​ ಕಿಂಗ್ಸ್

Sam Curran didn't always score quickly but hung in there

ಚಂಡೀಗಢ: ಸ್ಯಾಮ್​ ಕರನ್(63) ಮತ್ತು ಲಿವಿಂಗ್​ಸ್ಟೋನ್(38*) ಪ್ರಚಂಡ ಬ್ಯಾಟಿಂಗ್​ ಸಾಹಸದಿಂದ ಡೆಲ್ಲಿ ಕ್ಯಾಪಿಟಲ್ಸ್(PBKS v DC)​ ಎದುರಿನ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ 4 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2024) ತಾನಾಡಿದ ಮೊದ​ಲ ಪಂದ್ಯದಲ್ಲೇ ಗೆಲುವಿನ ಶುಭಾರಂಭ ಕಂಡಿದೆ.

ಇಲ್ಲಿನ ಮುಲ್ಲಾನ್ಪುರ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಐಪಿಎಲ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಇಂಪ್ಯಾಕ್ಟ್​ ಪ್ಲೇಯರ್​ ಅಭಿಷೇಕ್ ಪೊರೆಲ್ ಅವರ ವಿಸ್ಫೋಟಕ ಬ್ಯಾಟಿಂಗ್​ ನೆರವಿನಿಂದ 9 ವಿಕೆಟ್​ಗೆ 174 ರನ್​ ಬಾರಿಸಿತು. ಜಬಾಬಿತ್ತ ಪಂಜಾಬ್​ ಕಿಂಗ್ಸ್​(Punjab Kings) ಸ್ಯಾಮ್​ ಕರನ್ ಅವರ ಅರ್ಧಶತಕದ ಹೋರಾಟದಿಂದ 19.2 ಓವರ್​ನಲ್ಲಿ 6 ವಿಕೆಟ್​ಗೆ 177 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್​ ವೇಳೆ ನಾಯಕ ಶಿಖರ್​ ಧವನ್ ಮತ್ತು ಜಾನಿ ಬೇರ್​ಸ್ಟೋ ಪಂಜಾಬ್​ಗೆ ಉತ್ತಮ ಆರಂಭ ನೀಡಿದರು. ಖಲೀಲ್​ ಅಹ್ಮದ್​ ಎಸೆದ ಮೊದಲ ಓವರ್​ನಲ್ಲಿಯೇ 17 ರನ್​ ಕಲೆಹಾಕಿದರು. ಮುಂದಿನ 2 ಓವರ್​ನಲ್ಲಿಯೂ ಉತ್ತಮ ರನ್​ ಹರಿದು ಬಂತು. ಹೀಗಾಗಿ ತಂಡಕ್ಕೆ ಮೂರು ಓವರ್​ ಮುಕ್ತಾಯಕ್ಕೆ 10ರ ಸರಾಸರಿಯಲ್ಲಿ ವಿಕೆಟ್​ ನಷ್ಟವಿಲ್ಲದೆ 34 ರನ್​ ಒಟ್ಟುಗೂಡಿತು. ಆದರೆ ನಾಲ್ಕನೇ ಓವರ್​ನ ಮೊದಲ ಎಸೆತದಲ್ಲೇ ಜಾನಿ ಬೇರ್​ಸ್ಟೋ(9) ವಿಕೆಟ್​ ಪತನಗೊಂಡಿತು. ಬಳಿಕ ಶಿಖರ್​ ಧವನ್​(22) ಮತ್ತು ಪ್ರಭಾಸಿಮ್ರಾನ್ ಸಿಂಗ್(26) ಕೂಡ ಸತತವಾಗಿ ವಿಕೆಟ್​ ಕಳೆದುಕೊಂಡರು. ಈ ವೇಳೆ ಪಂಜಾಬ್ ಕೊಂಚ ಸಂಕಷ್ಟಕ್ಕೆ ಸಿಲುಕಿತು.

ಕರನ್​ ಅರ್ಧಶತಕ


84 ಕ್ಕೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಇಂಗ್ಲೆಂಡ್​ನ ಆಲ್​ರೌಂಡರ್​ ಸ್ಯಾಮ್​ ಕರನ್​ ಜವಾಬ್ದಾರಿಯುತ ಆಟವಾಡಿ ಅರ್ಧಶತಕ ಬಾರಿಸುವ ಮೂಲಕ ನೆರವಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಇಂಗ್ಲೆಂಡ್​ನವರೇ ಆದ ಲಿಯಾಮ್​ ಲಿವಿಂಗ್​ಸ್ಟೋನ್​ ಉತ್ತಮ ಸಾಥ್​ ನೀಡಿದರು. ಉಭಯ ಆಟಗಾರರು ಸೇರಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಕರನ್ 47 ಎಸೆತಗಳಿಂದ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 63 ರನ್​ ಬಾರಿಸಿದರು. ಲಿವಿಂಗ್​ಸ್ಟೋನ್ ಅಜೇಯ 38 ರನ್​ ಗಳಿಸಿದರು. ಅವರ ಈ ಬಿರುಸಿನ ಬ್ಯಾಟಿಂಗ್​​ ಇನಿಂಗ್ಸ್​ನಲ್ಲಿ 3 ಸಿಕ್ಸರ್​ ಮತ್ತು 2 ಬೌಂಡರಿ ದಾಖಲಾಯಿತು.

ಇದನ್ನೂ ಓದಿ IPL 2024 : ಸಂಜು ಬಳಗದ ಸವಾಲು ಮೀರುವುದೇ ರಾಹುಲ್ ಪಡೆ?

ಹರ್ಷಲ್​ಗೆ ಚಳಿ ಬಿಡಿಸಿದ ಅಭಿಷೇಕ್​


ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಪರ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಅಭಿಷೇಕ್ ಪೊರೆಲ್ ಬಿರುಸಿನ ಬ್ಯಾಟಿಂಗ್​ ಮೂಲಕ ಪಂಜಾಬ್​ ಬೌಲರ್​ಗಳ ಬೆವರಿಳಿಸಿದರು. ಅದರಲ್ಲೂ ಹರ್ಷಲ್​ ಪಟೇಲ್​ ಅವರ ಅಂತಿಮ ಓವರ್​ನಲ್ಲಿ 2 ಸಿಕ್ಸರ್​ ಮತ್ತು ಮೂರು ಬೌಂಡರಿ ಬಾರಿಸಿ 24 ರನ್ ಕಸಿದರು. ಒಂದು ವೈಡ್​ ಸೇರಿ ಈ ಓವರ್​ನಲ್ಲಿ 25 ರನ್​ ಹರಿದುಬಂತು. ​ಅಭಿಷೇಕ್​ ಪಂಜಾಬ್​ ಪಾಲಿಗೆ ದೊಡ್ಡ ಇಂಪ್ಯಾಕ್ಟ್ ಆದರು. ಕೇವಲ 10 ಎಸೆತಗಳಿಂದ 32 ರನ್​ ಬಾರಿಸಿ ಅಜೇಯರಾಗಿ ಉಳಿದರು. ಆದರೆ ಪಂದ್ಯ ಸೋತ ಕಾರಣ ಇವರ ಬ್ಯಾಟಿಂಗ್​ ಪ್ರದರ್ಶನ ವ್ಯರ್ಥವಾಯಿತು.

ಕಾರು ಅಪಘಾತಕ್ಕೆ ಒಳಗಾಗಿ 15 ತಿಂಗಳ ಬಳಿಕ ಐಪಿಎಲ್‌(IPL 2024) ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದ ರಿಷಭ್‌ ಪಂತ್‌(Rishabh Pant) 2 ಬೌಂಡರಿ ಬಾರಿಸಿ 18 ರನ್​ ಗಳಿಸಿದರು. ಪಂತ್​ ಮೈದಾನಕ್ಕೆ ಬರುವ ವೇಳೆ ನೆರದಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ವೆಲ್​ಕಮ್​ ಮಾಡಿದರು. ಆಸ್ಟ್ರೇಲಿಯಾದ ಬ್ಯಾಟರ್​ಗಳಾದ ಡೇವಿಡ್​ ವಾರ್ನರ್(29)​ ಮತ್ತು ಶಾನ್​ ಮಾರ್ಷ್(20) ಮೊದಲ ವಿಕೆಟ್​ಗೆ 39 ರನ್​ ಒಟ್ಟುಗೂಡಿಸಿದರು.​ ಮಧ್ಯಮ ಕ್ರಮಾಂಕದಲ್ಲಿ ಶೈ ಹೋಪ್‌ ತಲಾ 2 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ 33 ರನ್​ ಕಲೆಹಾಕಿದರು. ಇವರದ್ದೇ ಡೆಲ್ಲಿ ಪರ ಅತ್ಯಧಿಕ ಗಳಿಗೆ. ಪಂಜಾಬ್​ ಪರ ಬೌಲಿಂಗ್​ನಲ್ಲಿ ಹರ್ಷಲ್​ ಪಟೇಲ್​ ಮತ್ತು ಅರ್ಶ್​ದೀಪ್​ ಸಿಂಗ್​ ತಲಾ 2 ವಿಕೆಟ್​ ಕಿತ್ತರು. ​ಹರ್ಷಲ್​ ಪಟೇಲ್ ವಿಕೆಟ್​ ಕಿತ್ತರೂ ಕೂಡ ದುಬಾರಿ ಎನಿಸಿಕೊಂಡರು.

Exit mobile version