ಗುವಾಹಟಿ: ಬುಧವಾರದ ಸಣ್ಣ ಮೊತ್ತದ ಐಪಿಎಲ್(IPL 2024) ಮೇಲಾಟದಲ್ಲಿ ಪಂಜಾಬ್ ಕಿಂಗ್ಸ್(PBKS vs RR) ತಂಡ ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ 5 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಲಕ್ನೋ ಸೋಲಿನಿಂದ ಪ್ಲೇ ಆಫ್ ಪ್ರವೇಶಿಸಿದ ಕಾರಣ ಸಂಜು ಪಡೆಗೆ ಈ ಸೋಲು ಯಾವುದೇ ಪರಿಣಾಮ ಬೀರಲಿಲ್ಲ. ಒಂದೊಮ್ಮೆ ಡೆಲ್ಲಿ ವಿರುದ್ಧ ಲಕ್ನೋ ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದರೆ, ಈ ಸೋಲು ರಾಜಸ್ಥಾನ್ಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿತ್ತು.
ರಾಜಸ್ಥಾನ್ ತಂಡಕ್ಕೆ 2ನೇ ತವರಾದ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 65ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ವೈಫಲ್ಯ ಕಂಡು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 144 ರನ್ ಗಳಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್(Punjab Kings) ಕೂಡ ಒಂದು ಹಂತದಲ್ಲಿ ಆಘಾತ ಎದುರಿಸಿ ಬಳಿಕ ಚೇತರಿಕೆ ಹಾದಿ ಹಿಡಿದು 18.5 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಪ್ಲೇ ಆಫ್ ರೇಸ್ನಿಂದ ಈಗಾಗಲೇ ಹೊರಬಿದ್ದಿರುವ ಕಾರಣ ಪಂಜಾಬ್ಗೆ ಈ ಗೆಲುವು ಕೇವಲ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರುವಲ್ಲಿ ಮಾತ್ರ ಸಹಾಯ ಮಾಡಿತು. ಹಾಲಿ ಚಾಂಪಿಯನ್ ಕೊನೆಯ ಸ್ಥಾನಕ್ಕೆ ಕುಸಿಯಿತು. ಸದ್ಯ ಪಂಜಾಬ್ 9ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ತನ್ನ ಅಂತಿಮ ಲೀಗ್ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಮೇ 19ರಂದು ನಡೆಯಲಿದೆ.
ಚೇಸಿಂಗ್ ವೇಳೆ ಪಂಜಾಬ್ ಕೂಡ ಅಗ್ರ ಕ್ರಮಾಂಕದ ಆಟಗಾರರನ್ನು ಅಗ್ಗಕ್ಕೆ ಕಳೆದುಕೊಂಡು ರಾಜಸ್ಥಾನ್ ತಂಡದ ಹಾಗೆ ಆರಂಭಿಕ ಆಘಾತಕ್ಕೆ ಸಿಲುಕಿತು. ಪ್ರಭಾಸಿಮ್ರಾನ್ ಸಿಂಗ್(6) ಮತ್ತು ಜಾನಿ ಬೇರ್ಸ್ಟೋ(14) ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ, ಈ ಬಾರಿಯ ಐಪಿಎಲ್ನಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಸಂಚಲನ ಸೃಷ್ಟಿಸಿದ್ದ ಶಶಾಂಕ್ ಸಿಂಗ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. 36 ರನ್ಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್, ಚೇತರಿಕೆ ಕಾಣುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ರೀಲಿ ರೋಸೊ(22) ವಿಕೆಟ್ ಕೂಡ ಕಳೆದುಕೊಂಡಿತು. ತಂಡದ ಮೊತ್ತ 50 ಗಡಿ ದಾಟುವ ಮುನ್ನ 4 ವಿಕೆಟ್ ಕಳೆದುಕೊಂಡು ಮತ್ತಷ್ಟು ತೀವ್ರ ಸಂಕಟಕ್ಕೆ ಒಳಗಾಯಿತು.
ಇದನ್ನೂ ಓದಿ IPL 2024: ಆರ್ಸಿಬಿ ಪಂದ್ಯದ ವೇಳೆ ಕಳಪೆ ಆಹಾರ ವಿತರಣೆ: ಕೆಎಸ್ಸಿಎ ವಿರುದ್ಧ ಎಫ್ಐಆರ್
ಅರ್ಧಶತಕ ಬಾರಿಸಿದ ಕರನ್
ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನೆರವಾದದ್ದು ನಾಯಕ ಸ್ಯಾಮ್ ಕರನ್ ಮತ್ತು ಜಿತೇಶ್ ಶರ್ಮ. ಉಭಯ ಆಟಗಾರರು ತಾಳ್ಮೆಯುತ ಬ್ಯಾಟಿಂಗ್ ನಡೆಸಿ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದರು. 5ನೇ ವಿಕೆಟ್ಗೆ 63 ರನ್ ಒಟ್ಟುಗೂಡಿಸಿದರು. ಈ ಉಪಯುಕ್ತ ಜತೆಯಾಟದ ಸಹಾಯದಿಂದ ಪಂಜಾಬ್ ಗೆಲುವಿನ ದಡ ಸೇರಿತು. ಜಿತೇಶ್ ಶರ್ಮ 20 ಎಸೆತಗಳಿಂದ 22 ರನ್ ಬಾರಿಸಿ ಪರಾಗ್ಗೆ ವಿಕೆಟ್ ಒಪ್ಪಿಸಿದರು. ಕರನ್ ಅಜೇಯರಾಗಿ ಉಳಿದು ಅರ್ಧಶತಕ ಬಾರಿಸಿದರು. ಇದು ಅವರ ಈ ಆವೃತ್ತಿಯ 2ನೇ ಅರ್ಧಶತಕವಾಗಿದೆ. ಒಟ್ಟು 41 ಎಸೆತ ಎದುರಿಸಿದ ಕರನ್ 63* ರನ್ ಬಾರಿಸಿದರು. ಈ ವೇಳೆ ಇವರ ಬ್ಯಾಟ್ನಿಂದ 5 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು.
ರಾಜಸ್ಥಾನ್ಗೆ ಆಸರೆಯಾದ ಪರಾಗ್-ಅಶ್ವಿನ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್(4) ಜಾಸ್ ಬಟ್ಲರ್ ಅನುಪಸ್ಥಿತಿಯಲ್ಲಿ ಆಡಲಿಳಿದ ಕೊಹ್ಲರ್-ಕಾಡ್ಮೋರ್(18), ನಾಯಕ ಸಂಜು ಸ್ಯಾಮ್ಸನ್(18), ಧೃವ್ ಜುರೇಲ್(0), ರೋಮನ್ ಪೋವೆಲ್(4) ಬ್ಯಾಟಿಂಗ್ ವೈಫಲ್ಯ ಕಂಡು ಪೆವಿಲಿಯನ್ ಪರೇಡ್ ನಡೆಸಿದರು. ರಿಯಾನ್ ಪರಾಗ್(48) ಮತ್ತು ಆರ್.ಅಶ್ವಿನ್(28) ಅವರ ಅಸಾಮಾನ್ಯ ಬ್ಯಾಟಿಂಗ್ನಿಂದಾಗಿ ತಂಡ 100 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ಸು ಕಂಡಿತು. ಪಂಜಾಬ್ ಪರ 2 ವಿಕೆಟ್ ಪಡೆದ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನ ಪಡೆದರು. ಉಳಿದಂತೆ ಕರನ್, ಮತ್ತು ರಾಹುಲ್ ಚಹರ್ ತಲಾ 2 ವಿಕೆಟ್ ಉರುಳಿಸಿದರು.