ಹೈದರಾಬಾದ್: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ(66) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ಸನ್ರೈರ್ಸ್ ಹೈದರಾಬಾದ್(PBKS vs SRH) ತಂಡ ತವರಿನಲ್ಲೇ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಹೈದರಾಬಾದ್ ಈ ಗೆಲುವಿನೊಂದಿಗೆ 17 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ರಾತ್ರಿ ನಡೆಯುವ ಪಂದ್ಯದಲ್ಲಿ ರಾಜಸ್ಥಾನ್ ತಂಡ ಕೆಕೆಆರ್ ವಿರುದ್ಧ ಗೆದ್ದರೆ ಹೈದರಾಬಾದ್ ಮೂರನೇ ಸ್ಥಾನಕ್ಕೆ ಕುಸಿದು ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಆಡಲಿದೆ. ಎಲಿಮಿನೇಟರ್ ಪಂದ್ಯ ಬುಧವಾರ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಬ್ಯಾಟಿಂಗ್ ಸ್ನೇಹಿಯಾದ ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ 5 ವಿಕೆಟ್ಗೆ 214 ರನ್ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆದರೆ ಈ ಮೊತ್ತ ಹೈದರಾಬಾದ್ ತಂಡವನ್ನು ಕಟ್ಟಿ ಹಾಕಲು ಸಾಕಾಗಲಿಲ್ಲ. ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ 19.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 215 ಬಾರಿಸಿ ತವರಿನಲ್ಲಿ ವಿಜಯ ಪತಾಕೆ ಹಾರಿಸಿತು. ಉಭಯ ತಂಡಗಳ ಜಿದ್ದಾಜಿದ್ದಿನ ಬ್ಯಾಟಿಂಗ್ ಪರಾಕ್ರಮದಿಂದಾಗಿ ಈ ಪಂದ್ಯದಲ್ಲಿ ಒಟ್ಟು 429 ರನ್ ದಾಖಲಾಯಿತು.
ಹೆಡ್ ಕ್ಲೀನ್ ಬೌಲ್ಡ್
ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾದ ಟ್ರಾವಿಸ್ ಹೆಟ್ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಹೆಡ್ ಅವರು ಅರ್ಶದೀಪ್ ಸಿಂಗ್ ಅವರ ಮೊದಲ ಎಸೆತಲ್ಲೇ ಕ್ಲೀನ್ ಬೌಲ್ಡ್ ಆದರು. ಹೆಡ್ ವಿಕೆಟ್ ಬಿದ್ದರೂ ಕೂಡ ವಿಚಲಿತರಾಗದ ಅಭಿಷೇಕ್ ಶರ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಪಂಜಾಬ್ ಬೌಲರ್ಗಳ ಮೇಲೆರಗಿ ಸತತ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ತಮ್ಮ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು.
ಅಭಿಷೇಕ್ ಶರ್ಮ ಅವರಿಗೆ ಮತ್ತೊಂದು ತುದಿಯಲ್ಲಿ ರಾಹುಲ್ ತ್ರಿಪಾಠಿ ಕೂಡ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ಸೇರಿಕೊಂಡು ದ್ವಿತೀಯ ವಿಕೆಟ್ಗೆ 72 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಮೊತ್ತವನ್ನು ಈ ಜೋಡಿ ಕೇವಲ 4.6 ಓವರ್ನಲ್ಲಿ ಬಾರಿಸಿದರು. ತಿಪಾಠಿ 18 ಎಸೆತ ಎದುರಿಸಿ 33(4 ಬೌಂಡರಿ, 2 ಸಿಕ್ಸರ್) ಬಾರಿಸಿದರು.
ಮತ್ತೆ ಸಿಡಿದ ಅಭಿಷೇಕ್ ಶರ್ಮ
ಮೂರನೇ ವಿಕೆಟ್ಗೂ ಅಭಿಷೇಕ್, ನಿತೀಶ್ ರೆಡ್ಡಿ ಜತೆಗೂಡಿ ಮತ್ತೊಂದು ಅರ್ಧಶತಕದ ಜತೆಯಾಟ ನಡೆಸಿ ಗಮನಸೆಳೆದರು. ಸಿಕ್ಸರ್ಗಳ ಸುರಿಮಳೆ ಸುರಿಸಿದ ಅಭಿಷೇಕ್ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರನಾಗಿ ಹೊರಮೊಮ್ಮಿದರು. ಇದೇ ವೇಳೆ 37 ಸಿಕ್ಸರ್ ಬಾರಿಸಿರುವ ವಿರಾಟ್ ಕೊಹ್ಲಿಯ ದಾಖಲೆ ಪತನಗೊಂಡಿತು. ಒಟ್ಟು 28 ಎಸೆತ ಎದುರಿಸಿದ ಅಭಿಷೇಕ್ ಬರೋಬ್ಬರಿ 6 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಸಿ 66 ರನ್ ಬಾರಿಸಿದರು. 51 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇದು ಈ ಆವೃತ್ತಿಯ 3ನೇ ಅರ್ಧಶತಕವಾಗಿದೆ.
ಇದನ್ನೂ ಓದಿ RCB vs CSK: ಆನ್ಲೈನ್ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್ಸಿಬಿ-ಚೆನ್ನೈ ಪಂದ್ಯ
ಅಭಿಷೇಕ್ ವಿಕೆಟ್ ಪತನದ ಬಳಿಕ ಉತ್ತಮವಾಗಿ ಆಡುತ್ತಿದ್ದ ನಿತೀಶ್ ರೆಡ್ಡಿ 37 ರನ್ಗೆ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಶಾಬಾಜ್ ಅಹ್ಮದ್ 3 ರನ್ಗೆ ವಿಕೆಟ್ ಕೈಚೆಲ್ಲಿದರು. ಈ ವೇಳೆ ಹೈದರಾಬಾದ್ ಕೊಂಚ ಆತಂಕಕ್ಕೆ ಸಿಲುಕಿತು. ಇದೇ ವೇಳೆ ಹೆನ್ರಿಚ್ ಕ್ಲಾಸೆನ್ ಜವಾಬ್ದಾರಿಯು ಬ್ಯಾಟಿಂಗ್ ನಡೆಸಿ 42 ರನ್ ಬಾರಿಸಿದರು. ಅಂತಿಮವಾಗಿ ಅಬ್ದುಲ್ ಸಮದ್(11*) ಮತ್ತು ಸನ್ವೀರ್ ಸಿಂಗ್(6*) ಅಜೇಯ ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್ ಬ್ಯಾಟರ್ಗಳು ಬೃಹತ್ ಮೊತ್ತ ಪೇರಿಸಿದರೂ ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಾರದ ಕಾರಣ ಸೋಲಿಗೆ ತುತ್ತಾದರು.
ಪ್ರಭಾಸಿಮ್ರಾನ್ ಅರ್ಧಶತಕ ವ್ಯರ್ಥ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಂಜಾಬ್ ಕೂಡ ಅತ್ಯಂತ ಜೋಶ್ನಲ್ಲಿ ಬ್ಯಾಟಿಂಗ್ ನಡೆಸಿತು. ಆರಂಭಿಕ ಆಟಗಾರರಾದ ಅಥರ್ವ ತೈಡೆ ಮತ್ತು ಪ್ರಭಾಸಿಮ್ರಾನ್ ಸಿಂಗ್ 10 ಸರಾಸರಿಯಲ್ಲಿ ರನ್ ಗಳಿಸಿ ಮೊದಲ ವಿಕೆಟ್ಗೆ 97 ರನ್ ಒಟ್ಟುಗೂಡಿಸಿದರು. ಅಥರ್ವ ತೈಡೆ 46 ರನ್ ಬಾರಿಸಿದರೆ, ಪ್ರಭಾಸಿಮ್ರಾನ್ 71 ರನ್(7 ಬೌಂಡರಿ, 4 ಸಿಕ್ಸರ್) ಬಾರಿಸಿದರು. ಆ ಬಳಿಕ ಬಂದ ರೀಲಿ ರೋಸೊ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 4 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 47 ರನ್ ಗಳಿಸಿ ಔಟಾದರು. ಈ ಮೂಲಕ ಕೇವಲ 3 ರನ್ ಅಂತರದಿಂದ ಅರ್ಧಶಕ ವಂಚಿತರಾದರು.
5 ನೇ ಕ್ರಮಾಂಕದಲ್ಲಿ ಆಡಲಿಳಿದ ಜಿತೇಶ್ ಶರ್ಮ ಕೇವಲ 15 ಎಸೆತಗಳಿಂದ ಅಜೇಯ 32 ರನ್ ಬಾರಿಸಿ ತಂಡದ ಬೃಹತ್ ಮೊತಕ್ಕೆ ಕಾರಣರಾದರು. ಹೈದರಾಬಾದ್ ಪರ ಎಡಗೈ ವೇಗಿ ಟಿ ನಟರಾಜ್ 33 ರನ್ಗೆ 2 ವಿಕೆಟ್ ಉರುಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ ಮತ್ತು ವಿಜಯಕಾಂತ್ ವ್ಯಾಸಕಾಂತ್ ತಲಾ ಒಂದು ವಿಕೆಟ್ ಪಡೆದರು.