ಇಸ್ಲಾಮಾಬಾದ್: ಭಾರತದಲ್ಲಿ ನಡೆಯಲಿರುವ, ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ (World Cup 2023) ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) 15 ಸದಸ್ಯರ ತಂಡವನ್ನು ಘೋಷಿಸಿದೆ. ಗಾಯದ ಸಮಸ್ಯೆಯಿಂದ ವೇಗಿ ನದೀಮ್ ಶಾ ಬದಲಿಗೆ ಹಸನ್ ಅಲಿಗೆ ಆಯ್ಕೆ ಸಮಿತಿಯು ಮಣೆ ಹಾಕಿದೆ. ಆದರೆ, ನದೀಮ್ ಶಾ ಅನುಪಸ್ಥಿತಿಯು ಪಾಕಿಸ್ತಾನಕ್ಕೆ ದುಬಾರಿ ಆಗಲಿದೆ ಎಂದೇ ಹೇಳಲಾಗುತ್ತಿದೆ.
ಸ್ಟಾರ್ ಬ್ಯಾಟರ್ ಬಾಬರ್ ಅಜಂ ಅವರಿಗೆ ಫಖರ್ ಜಮಾನ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್ ಸಾಥ್ ನೀಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಪಾಕಿಸ್ತಾನವು ಆಲ್‌ರೌಂಡರ್‌ಗೆ ಮಣೆ ಹಾಕಿದೆ. ಶದಾಬ್ ಖಾನ್ ಹಾಗೂ ಮೊಹಮ್ಮದ್ ನವಾಜ್ ಸ್ಪಿನ್ ಶಕ್ತಿಯಾಗಿದ್ದರೆ, ಇವರಿಗೆ ಇಫ್ತಿಕಾರ್ ಅಹ್ಮದ್ ಕೂಡ ಸಾಥ್ ನೀಡಲಿದ್ದಾರೆ.
🚨 Our squad for the ICC World Cup 2023 🚨#WeHaveWeWill | #CWC23 pic.twitter.com/pJjOOncm56
— Pakistan Cricket (@TheRealPCB) September 22, 2023
ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿಗಳ ವಿಭಾಗವಂತೂ ಬಲಿಷ್ಠವಾಗಿದೆ. ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಸೀಂ ಅವರು ವೇಗದ ಬೌಲಿಂಗ್ ವಿಭಾಗ ನೋಡಿಕೊಳ್ಳಲಿದ್ದಾರೆ. ಅಷ್ಟೇನೂ ಫಾರ್ಮ್‌ನಲ್ಲಿ ಇಲ್ಲದ ಹಸನ್ ಅಲಿಯು ಹೇಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಸೂಪರ್ 4 ಪಂದ್ಯದ ವೇಳೆ ನದೀಮ್ ಶಾ ಗಾಯಗೊಂಡಿದ್ದರು.
ಅಕ್ಟೋಬರ್ 5ರಿಂದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಪಾಕಿಸ್ತಾನವು ಮೊದಲ ಪಂದ್ಯವನ್ನು ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಈಗಾಗಲೇ ಆಸ್ಟ್ರೇಲಿಯಾ ಹಾಗೂ ನೆದರ್ಲೆಂಡ್ಸ್ ತಂಡಗಳು ಭಾರತಕ್ಕೆ ಆಗಮಿಸಿದ್ದು, ಅಭ್ಯಾಸ ಆರಂಭಿಸಿವೆ. ಅಕ್ಟೋಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಇದನ್ನೂ ಓದಿ: World Cup 2023 : ನೆದರ್ಲೆಂಡ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಆಯ್ಕೆಗೊಂಡ ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಬಾಯ್!
ಹೀಗಿದೆ ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶದಾಬ್ ಖಾನ್ (ಉಪ ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮ ಮಿರ್, ಮೊಹಮ್ಮದ್ ವಸೀಂ. ಮೀಸಲು ಆಟಗಾರರಾಗಿ ಅಬ್ರಾರ್ ಅಹ್ಮದ್, ಜಮಾನ್ ಖಾನ್ ಹಾಗೂ ಮೊಹಮ್ಮದ್ ಹ್ಯಾರಿಸ್ ಪ್ರಯಾಣ ಬೆಳೆಸಲಿದ್ದಾರೆ.