ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಐಪಿಎಲ್ 2023ರ (IPL 2023) ಲೀಗ್ ಹಂತದ ಕೊನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿ ಹಾಲಿ ಆವೃತ್ತಿಯ ಅಭಿಯಾನ ಕೊನೆಗೊಳಿಸಿತು. ಇದುವರೆಗೆ ಒಂದೇ ಒಂದು ಟ್ರೋಫಿ ಗೆಲ್ಲದ ಕಾರಣ ಹೇಗಾದರೂ ಮಾಡಿ ಫೈನಲ್ಗೇರುವ ಉದ್ದೇಶ ಹೊಂದಿದ್ದ ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಇದರಿಂದ ನಿರಾಸೆ ಎದುರಾಗಿತ್ತು.
61 ಎಸೆತಗಳಲ್ಲಿ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನವೂ ಈ ಪಂದ್ಯದಲ್ಲಿ ವ್ಯರ್ಥಗೊಂಡಿತ್ತು. ಗುಜರಾತ್ ಟೈಟನ್ಸ್ ತಂಡ ಐದು ಎಸೆತಗಳು ಬಾಕಿ ಇರುವಾಗಲೇ 198 ರನ್ಗಳನ್ನು ಬೆನ್ನಟ್ಟಿ ಗೆದ್ದಿತ್ತು. ಇದರೊಂದಿಗೆ 16 ಆವೃತ್ತಿಯಲ್ಲಿ ಆಡಿದರೂ ಆರ್ಸಿಬಿಗೆ ಐಪಿಎಲ್ ಪ್ರಶಸ್ತಿ ಕನಸಾಗಿಯೇ ಉಳಿಯಿತು. ತಂಡದ ಮಾತು ಬದಿಗಿಡಲಿ. ಸ್ಟಾರ್ ಆಟಗಾರ ವಿರಾಟ್ಗೆ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾತನಾಡಿ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟರ್ ಕೆವಿನ್ ಪೀಟರ್ಸನ್, ಕೊಹ್ಲಿ ಆರ್ಸಿಬಿ ಫ್ರಾಂಚೈಸಿ ತೊರೆದು ತಮ್ಮ ತವರಿನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡರೆ ಟ್ರೋಫಿ ಗೆಲ್ಲಬಹುದು ಎಂದು ಹೇಳಿದ್ದಾರೆ.
ತಮ್ಮ ತವರಿನ ತಂಡ ಡೆಲ್ಲಿ ಕ್ಯಾಪಿಟಲ್ಸ್ ಕಡೆಗೆ ಹೋಗುವುದಕ್ಕೆ ವಿರಾಟ್ ಕೊಹ್ಲಿಗೆ ಸಮಯ ಬಂದಿದೆ. ತಕ್ಷಣದಲ್ಲೇ ಹೋಗಿ ಮುಂದಿನ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲಬಹುದು ಎಂದು ಪೀಟರ್ಸನ್ ಟ್ವೀಟ್ ಮಾಡಿದ್ದಾರೆ.
ಪೀಟರ್ಸನ್ ಅವರ ಹೇಳಿಕೆಗೆ ಟ್ವಿಟರ್ನಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವು ಕಟ್ಟರ್ ಆರ್ಸಿಬಿ ಅಭಿಮಾನಿಗಳು ಇಂಗ್ಲೆಂಡ್ ಕ್ರಿಕೆಟಿಗನ ಸಲಹೆಗೆ ಟೀಕೆ ವ್ಯಕ್ತಪಡಿಸಿದರು. ಅನೇಕರು ವಿರಾಟ್ ಕೊಹ್ಲಿ ಈ ಸಲಹೆಗೆ ಕಿವಿಗೊಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : IPL 2023: ಐಪಿಎಲ್ ಪ್ರದರ್ಶನ ಕಂಡು ಫಾಫ್ ಡು ಪ್ಲೆಸಿಸ್ಗೆ ಮತ್ತೆ ರಾಷ್ಟ್ರೀಯ ತಂಡದ ಪರ ಆಡುವಂತೆ ಕರೆ
ವಿರಾಟ್ ಕೊಹ್ಲಿ 2008ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಐಪಿಎಲ್ನಲ್ಲಿ ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ 34ರ ಹರೆಯದ ವಿರಾಟ್ ಹೆಸರಿನಲ್ಲಿದೆ. ಸುಮಾರು 230 ಪಂದ್ಯಗಳನ್ನು ಆಡಿರುವ ಕೊಹ್ಲಿ, 7,000 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಹೊಂದಿದ್ದಾರೆ.
ವಿರಾಟ್ ಕೊಹ್ಲಿಗೆ ಗಾಯದ ಆತಂಕ
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ. ಅವರು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಮೊಣಕಾಲು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ಗೆ ತಯಾರಾಗಬೇಕಾಗಿದ್ದ ಟೀಮ್ ಇಂಡಿಯಾಗೆ ಆತಂಕ ಎದುರಾಗಿದೆ. ವಿಶ್ವದ ಅತ್ಯಂತ ಫಿಟ್ ಅಥ್ಲೀಟ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ಒಳಗಾಗುವುದು ಕಡಿಮೆ. ತಮ್ಮ ವೃತ್ತಿ ಕ್ರಿಕೆಟ್ನಲ್ಲಿ ನಾಲ್ಕು ಪಂದ್ಯಗಳನ್ನು ಗಾಯದ ಸಮಸ್ಯೆಯಿಂದ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಗಾಯಗೊಂಡರೂ ಅವರ ಪುನಶ್ಚೇತನ ಅತ್ಯಂತ ವೇಗವಾಗಿರುವ ಕಾರಣ ಟೆಸ್ಟ್ ಚಾಂಪಿಯನ್ಷಿಪ್ ಮೊದಲು ಸುಧಾರಿಸಿಕೊಳ್ಳಬಹುದು ಎನ್ನಲಾಗಿದೆ.
ಮುಂದಿನ ತಿಂಗಳು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಡಬೇಕಾಗಿದೆ. ಈ ತಂಡದ ಮಧ್ಯಮ ಕ್ರಮಾಂಕದ ಹೊಣೆ ವಿರಾಟ್ ಕೊಹ್ಲಿ ಹೆಗಲಮೇಲಿದೆ. ಹೀಗಾಗಿ ಅವರು ಗಾಯಗೊಂಡರೆ ಟೀಮ್ ಇಂಡಿಯಾಗೆ ಹಿನ್ನಡೆ ಉಂಟಾಗಬಹುದು.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುವಾಗ ಮೊಣಕಾಲಿಗೆ ಗಾಯವಾಗಿತ್ತು. ತಕ್ಷಣ ಅವರು ಮೈದಾನದಿಂದ ಹೊರನಡೆದಿದ್ದರು. ಆ ಬಳಿಕ ಅವರು ಆಡಲು ಮೈದಾನಕ್ಕೆ ಇಳಿದಿರಲಿಲ್ಲ. ಅಲ್ಲದೆ, ಸೋಲಿನ ಹತಾಶೆಯಲ್ಲಿ ನೀರಿನ ಬಾಟಲ್ ಅನ್ನು ನೆಲಕ್ಕೆ ಎಸೆಯುವುದು ನೇರ ಪ್ರಸಾರ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿತ್ತು. ಆದರೆ, ಕೊನೆಯಲ್ಲಿ ಅವರು ಎದುರಾಳಿ ತಂಡದ ಆಟಗಾರರನ್ನು ಅಭಿನಂದಿಸಲು ಮೈದಾನಕ್ಕೆ ಇಳಿದಿದ್ದರು.