ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಕಡೆಯಿಂದ ಆಟಗಾರರನ್ನು ಬಿಡುಗಡೆ ಮಾಡುವಾಗ ತಪ್ಪು ಮಾಡುವ ಅತ್ಯಂತ ದುರದೃಷ್ಟಕರ ತಂಡಗಳಲ್ಲಿ ಒಂದಾಗಿದೆ. ಯಾಕೆಂದರೆ ಆರ್ಸಿಬಿ ಕೈ ಬಿಟ್ಟ ಆಟಗಾರರು ಮುಂದಿನ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹಲವು ಉದಾಹರಣೆಗಳಿವೆ. ಮುಂದಿನ ಋತುವಿನಲ್ಲಿ ಯಾವ ಆಟಗಾರ ಪರಿಣಾಮಕಾರಿಯಾಗಬಹುದು ಎಂದು ಊಹಿಸಲು ಆರ್ಸಿಬಿ ಮ್ಯಾನೇಜ್ಮೆಂಟ್ ಸತತವಾಗಿ ವಿಫಲವಾಗಿದೆ. ಹೀಗಾಗಿ ಆ ಆಟಗಾರರೆಲ್ಲರೂ ಇತರ ಫ್ರಾಂಚೈಸಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2024 ರ (IPL 2024) ಹರಾಜಿಗೆ ಮುಂಚಿತವಾಗಿ, ಆರ್ಸಿಬಿ ಜೋಶ್ ಹೇಜಲ್ವುಡ್ , ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ಅವರನ್ನು ಬಿಡುಗಡೆ ಮಾಡಿದೆ. ಇದು ಆರ್ಸಿಬಿ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿಯಿಂದ ಹೊರಕ್ಕೆ ಹೋಗಿ ಉತ್ತಮವಾಗಿ ಪ್ರದರ್ಶನ ನೀಡಿದ ಆಟಗಾರರು ಯಾರು ಎಂಬುದನ್ನು ನೋಡೋಣ.
ಕೆಎಲ್ ರಾಹುಲ್
ಕೆಎಲ್ ರಾಹುಲ್ ಅವರನ್ನು 2016ರಲ್ಲಿ ಆರ್ಸಿಬಿ ಖರೀದಿಸಿತ್ತು. ಅವರು 14 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ 397 ರನ್ ಗಳಿಸಿದ್ದರು. ಭುಜದ ಗಾಯದಿಂದಾಗಿ ಕೆಎಲ್ 2017ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. 2018 ರ ಐಪಿಎಲ್ ಋತುವಿನಲ್ಲಿ ಅವರು ಉಳಿಸಿಕೊಳ್ಳುವ ಪಟ್ಟಿಯ ಇರಲಿಲ್ಲ. ನಂತರ ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಆಯ್ಕೆ ಮಾಡಿತು. ಅವರು 14 ಪಂದ್ಯಗಳಲ್ಲಿ ಆರು ಅರ್ಧಶತಕಗಳೊಂದಿಗೆ 158.41 ಸ್ಟ್ರೈಕ್ ರೇಟ್ನಲ್ಲಿ 659 ರನ್ ಗಳಿಸಿದರು. 14 ಪಂದ್ಯಗಳಲ್ಲಿ 129.34 ಸ್ಟ್ರೈಕ್ ರೇಟ್ನೊಂದಿಗೆ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 670 ರನ್ ಗಳಿಸುವ ಮೂಲಕ ಅವರು 2020 ರಲ್ಲಿ ‘ಆರೆಂಜ್ ಕ್ಯಾಪ್’ ಗೆದ್ದರು.
ಕ್ರಿಸ್ ಗೇಲ್
ಆರ್ಸಿಬಿ ತಂಡದ ಜನಪ್ರಿಯ ಆಟಗಾರ ಮತ್ತು ಸ್ಟಾರ್ ಬ್ಯಾಟರ್ ಕ್ರಿಸ್ ಗೇಲ್ ಆ ತಂಡಕ್ಕಾಗಿ ಅನೇಕ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಲವಾರು ಅಸಾಧಾರಣ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ . ಅವರು ತಂಡಕ್ಕಾಗಿ 19 ಅರ್ಧಶತಕಗಳು ಮತ್ತು 5 ಶತಕಗಳು ಸೇರಿದಂತೆ 43.33 ಸರಾಸರಿಯಲ್ಲಿ 3,163 ರನ್ ಗಳಿಸಿದ್ದಾರೆ. ಆದರೆ 2018ರಲ್ಲಿ ಅವರನ್ನು ಆರ್ಸಿಬಿ ಕೈಬಿಟ್ಟಿತು.
ಗೇಲ್ 2018 ರಲ್ಲಿ ಕೆಎಲ್ ರಾಹುಲ್ ಅವರೊಂದಿಗೆ ಪಂಜಾಬ್ ಸೇರಿದರು. ಅವರು ತಮ್ಮ ಸಹಜ ಆಟವನ್ನು ಆಡಿದರು ಮತ್ತು ತಮ್ಮ ಪವರ್ ಹಿಟ್ಟಿಂಗ್ ಸಾಮರ್ಥ್ಯದಿಂದ ಬೌಲರ್ಗಳನ್ನು ದಂಡಿಸಿದರು. 11 ಪಂದ್ಯಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿದಂತೆ 368 ರನ್ ಗಳಿಸಿದರು. ಮುಂದಿನ ವರ್ಷ ಅವರು 13 ಪಂದ್ಯಗಳಲ್ಲಿ 153.60 ಸ್ಟ್ರೈಕ್ ರೇಟ್ನೊಂದಿಗೆ 490 ರನ್ ಗಳಿಸಿದರು.
ಶೇನ್ ವ್ಯಾಟ್ಸನ್
2016ರ ಐಪಿಎಲ್ ಹರಾಜಿನಲ್ಲಿ ಶೇನ್ ವ್ಯಾಟ್ಸನ್ ಅವರನ್ನು ಆರ್ಸಿಬಿ 9.5 ಕೋಟಿ ರೂ.ಗೆ ಖರೀದಿಸಿತ್ತು. ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ 2016 ರ ಐಪಿಎಲ್ನಲ್ಲಿ 16 ಪಂದ್ಯಗಳಲ್ಲಿ 133.58 ಸ್ಟ್ರೈಕ್ ರೇಟ್ನೊಂದಿಗೆ 179 ರನ್ ಗಳಿಸಿದ್ದರು. ಅವರು 8.98 ಎಕಾನಮಿ ರೇಟ್ನಲ್ಲಿ 20 ವಿಕೆಟ್ಗಳನ್ನು ಪಡೆದರು. ಅವರು 2017ರಲ್ಲಿ ರನ್ ಮತ್ತು ವಿಕೆಟ್ ಪಡೆಯಲು ಹೆಣಗಾಡಿದರು. ಲೀಗ್ನ ಹತ್ತನೇ ಆವೃತ್ತಿಯಲ್ಲಿ ಅವರ ಕಳಪೆ ಪ್ರದರ್ಶನದ ನಂತರ, ಆರ್ಸಿಬಿ ಮುಂದಿನ ಋತುವಿಗೆ ವ್ಯಾಟ್ಸನ್ ಅವರ ಒಪ್ಪಂದವನ್ನು ವಿಸ್ತರಿಸಲಿಲ್ಲ. 2018ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಅವರನ್ನು 4 ಕೋಟಿ ರೂ.ಗೆ ಖರೀದಿಸಿತು. ವ್ಯಾಟ್ಸನ್ 15 ಪಂದ್ಯಗಳಲ್ಲಿ 2 ಶತಕ ಮತ್ತು ಅರ್ಧಶತಕ ಸೇರಿದಂತೆ 154.59 ಸ್ಟ್ರೈಕ್ ರೇಟ್ನಲ್ಲಿ 555 ರನ್ ಗಳಿಸಿದರು.
ಯಜುವೇಂದ್ರ ಚಹಲ್
ಯಜುವೇಂದ್ರ ಚಹಲ್ 2014 ರ ಮೆಗಾ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಸೇರಿಕೊಂಡರು. ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ ಆಡಿದ ಚಾಹಲ್ 14 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಪಡೆಯುವ ಮೂಲಕ ತಮ್ಮ ಸ್ಪಿನ್ ಮೂಲಕ ಎಲ್ಲರ ಗಮನ ಸೆಳೆದರು. ಐಪಿಎಲ್ 2022 ರಲ್ಲಿ ಆರ್ಸಿಬಿ ಚಹಲ್ ಅವರನ್ನು ಬಿಡುಗಡೆ ಮಾಡಿದರೆ, ರಾಜಸ್ಥಾನ್ ರಾಯಲ್ಸ್ ಅವರನ್ನು 6.5 ಕೋಟಿ ರೂ.ಗೆ ಖರೀದಿಸಿತು. ಅವರು 2022 ರಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು, 17 ಪಂದ್ಯಗಳಲ್ಲಿ 7.75 ಎಕಾನಮಿಯಲ್ಲಿ 27 ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಗೆದ್ದರು.
ಇದನ್ನೂ ಓದಿ : IPL 2024 : ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಟಾಪ್ 5 ದುಬಾರಿ ಆಟಗಾರರು ಇವರು
ಕ್ವಿಂಟನ್ ಡಿ ಕಾಕ್
ಐಪಿಎಲ್ 2019 ಕ್ಕೆ ಮುಂಚಿತವಾಗಿ ಆರ್ಸಿಬಿ ತಂಡ ಕ್ವಿಂಟನ್ ಡಿ ಕಾಕ್ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ಗೆ ಮಾರಾಟ ಮಾಡಿತು. ಅವರು ಮುಂಬೈ ಇಂಡಿಯನ್ಸ್ ಪರ ತಮ್ಮ ಅತ್ಯಧಿಕ ರನ್ ಗಳಿಸಿದರು. 2019 ರಲ್ಲಿ, ಅವರು 16 ಪಂದ್ಯಗಳಲ್ಲಿ 35.26 ಸರಾಸರಿಯಲ್ಲಿ 529 ರನ್ ಗಳಿಸಿದರು. 2020ರಲ್ಲಿ 16 ಪಂದ್ಯಗಳಲ್ಲಿ 35.92ರ ಸರಾಸರಿಯಲ್ಲಿ 503 ರನ್ ಗಳಿಸಿದ್ದರು.