Site icon Vistara News

IOC Session 2023: ಭಾರತದಲ್ಲಿಯೇ 2036ರ ಒಲಿಂಪಿಕ್ಸ್‌ ಖಚಿತ; ಮೋದಿ ಮಹತ್ವದ ಘೋಷಣೆ!

PM Modi expressed shock at the loss of lives in an attack on a Gaza hospital

ಮುಂಬೈ: ಕ್ರಿಕೆಟ್‌, ಕಬಡ್ಡಿ, ಹಾಕಿ, ಶೂಟಿಂಗ್‌ ಸೇರಿ ಹಲವು ಕ್ರೀಡೆಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತದಲ್ಲಿ ಒಲಿಂಪಿಕ್ಸ್‌ ನಡೆಯಬೇಕು ಎಂಬುದು ದೇಶದ ನಾಗರಿಕರ ಬಹು ವರ್ಷಗಳ ಕನಸಾಗಿದೆ. ಆದರೆ, ಈ ಕನಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರೆಕ್ಕೆ-ಪುಕ್ಕ ನೀಡಿದ್ದಾರೆ. 2036ರ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸುವ ದಿಸೆಯಲ್ಲಿ ಭಾರತ ಬಿಡ್‌ (IOC Session 2023) ಮಾಡಲಿದೆ ಎಂದು ನರೇಂದ್ರ ಮೋದಿ (Narendra Modi) ನೀಡಿದ ಹೇಳಿಕೆಯು ಮಹತ್ವ ಪಡೆದಿದೆ.

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಸೆಂಟರ್‌ನಲ್ಲಿ ಶನಿವಾರದಿಂದ (ಅಕ್ಟೋಬರ್‌ 14) ಆರಂಭವಾದ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ 141ನೇ ಅಧಿವೇಶನ (IOC) ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. “ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜಿಸಲು ನಾವೆಲ್ಲ ಕಾಯುತ್ತಿದ್ದೇವೆ. ನಮ್ಮ ದೇಶದಲ್ಲಿ ಒಲಿಂಪಿಕ್ಸ್‌ ನಡೆಯಬೇಕು ಎಂಬುದು 140 ಕೋಟಿ ಜನರ ಕನಸಾಗಿದೆ. 2036ರ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಭಾರತದಲ್ಲಿಯೇ ಆಯೋಜಿಸಲು ಸಕಲ ಪ್ರಯತ್ನ ಮಾಡಲಾಗುವುದು” ಎಂದು ಮೋದಿ ಹೇಳಿದ್ದಾರೆ. ಆ ಮೂಲಕ 2036ರ ಒಲಿಂಪಿಕ್ಸ್‌ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವುದನ್ನು ದೃಢಪಡಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಒಲಿಂಪಿಕ್‌ ಸಮಿತಿಯ ಅಧಿವೇಶನ ಭಾರತದ ಹೆಮ್ಮೆ

ಐಒಸಿ ಅಧಿವೇಶನವು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ವೋಚ್ಚ ಸಂಸ್ಥೆಯಾಗಿದೆ. ಇದು ಒಲಿಂಪಿಕ್ ಚಾರ್ಟರ್ ಅನ್ನು ಅಳವಡಿಸಿಕೊಳ್ಳುವುದು ಅಥವಾ ಪರಿಷ್ಕರಿಸುವುದು, ಐಒಸಿ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಹಾಗೂ ಒಲಿಂಪಿಕ್ಸ್‌ನ ಆತಿಥೇಯ ನಗರವನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹೊಂದಿರುತ್ತದೆ.

ಕತಾರ್, ಜೋರ್ಡಾನ್, ಮೊನಾಕೊ, ಲಕ್ಸಂಬರ್ಗ್ ಮತ್ತು ಭೂತಾನ್ ದೇಶಗಳ ಮುಖ್ಯಸ್ಥರು, ಗ್ರೇಟ್ ಬ್ರಿಟನ್ ಮತ್ತು ಲಿಕ್ಟನ್ ಸ್ಟೈನ್‌ನ ರಾಜಮನೆತನದ ಸದಸ್ಯರೊಂದಿಗೆ ಈ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಲಿಂಪಿಕ್ಸ್ ಕ್ರೀಡೆಯಲ್ಲಿ ಈಜು ವಿಭಾಗದಲ್ಲಿ ಏಳು ಬಾರಿ ಪದಕ ವಿಜೇತ ಕಿರ್ಸ್ಟಿ ಕೊವೆಂಟ್ರಿ, ಎರಡು ಬಾರಿ ಒಲಿಂಪಿಕ್ ಪೋಲ್ ವಾಲ್ಟ್ ಚಿನ್ನದ ಪದಕ ವಿಜೇತೆ ಯೆಲೆನಾ ಇಸೆನ್‌ಬಾಯೆವಾ, ಒಲಿಂಪಿಕ್ 10,000 ಮೀಟರ್ ವಿಭಾಗದ ಎರಡು ಬಾರಿ ಬೆಳ್ಳಿ ಪದಕ ವಿಜೇತರು ಮತ್ತು ಕೀನ್ಯಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷರಾದ ಪಾಲ್ ತುರ್ಗಾಟ್, ಒಲಿಂಪಿಕ್ ಪೋಲ್ ವಾಲ್ಟ್ ಚಿನ್ನದ ಪದಕ ವಿಜೇತರಾದ ಸೆರ್ಗೆಯ್ ಬುಬ್ಕಾ ಮತ್ತು ಒಲಿಂಪಿಕ್ ಶೂಟಿಂಗ್ ಚಾಂಪಿಯನ್ ಅಭಿನವ್ ಬಿಂದ್ರಾ, ಒಲಿಂಪಿಕ್ 1500 ಮೀ ಚಾಂಪಿಯನ್ ಮತ್ತು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷರಾದ ಸೆಬಾಸ್ಟಿಯನ್ ಕೋ ಮತ್ತು ಫಿಫಾ ಅಧ್ಯಕ್ಷರಾದ ಗಿಯಾನಿ ಇನ್ಫಾಂಟಿನೊ ಕೂಡ ಹಾಜರಿದ್ದರು.

Exit mobile version