ನವದೆಹಲಿ: ಲಕ್ಷದ್ವೀಪ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಸಚಿವರು ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದಕ್ಕೆ ದೇಶದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಲೆಬ್ರಿಟಿಗಳು ಸೇರಿ ಎಲ್ಲರೂ ದೇಶ ಹಾಗೂ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ. ಈ ಅಭಿಯಾನಕ್ಕೆ ಈಗ ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗಿಯಾದ ಮೊಹಮ್ಮದ್ ಶಮಿ ಅವರು ಕೂಡ ಕೈಜೋಡಿಸಿದ್ದಾರೆ. “ನರೇಂದ್ರ ಮೋದಿ ಅವರು ದೇಶಕ್ಕಾಗಿ ದುಡಿಯುತ್ತಿದ್ದು, ಅವರ ಪರ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.
ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೊಹಮ್ಮದ್ ಶಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ನಾವು ನಮ್ಮ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಇದರಿಂದ ದೇಶವು ಏಳಿಗೆ ಹೊಂದುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ನಾವು ಕೂಡ ಅವರಿಗೆ ಬೆಂಬಲ ನೀಡಬೇಕು. ದೇಶದ ಪ್ರವಾಸೋದ್ಯಮದ ಏಳಿಗೆಗೆ ಕೈಜೋಡಿಸಬೇಕು” ಎಂದು ಎಎನ್‌ಐ ಜತೆ ಮಾತನಾಡುವಾಗ ತಿಳಿಸಿದ್ದಾರೆ.
Mohammed Shami said, "we should promote our own tourism. No matter which way India moves forward, the PM is trying to make our country move forward so we should also support it". (ANI). pic.twitter.com/y6WiJCMQKx
— Mufaddal Vohra (@mufaddal_vohra) January 8, 2024
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಕಳೆದ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು. ಆರಂಭದಲ್ಲಿ ಶಮಿ ಅವರ ಹೆಸರು ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಶಮಿ ಈ ಬಾರಿ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗರಾಗಿದ್ದಾರೆ.
ಇದನ್ನೂ ಓದಿ: National Sports Awards: ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ್ ಶಮಿ
‘ಈ ಪ್ರಶಸ್ತಿ ಪಡೆಯುವುದೇ ಪ್ರತಿಯೊಬ್ಬ ಭಾರತೀಯ ಆಟಗಾರರ ಜೀವನದ ಕನಸಾಗಿರುತ್ತದೆ. ನಾನು ಕೂಡ ಪ್ರಶಸ್ತಿ ಪಡೆಯಬೇಕೆಂಬ ಕನಸು ಕಂಡಿದ್ದೆ. ಇದೀಗ ನನಗೂ ಪ್ರಶಸ್ತಿ ಸಿಕ್ಕಿರುವುದು ಸಂತಸ ನೀಡಿದೆ’ ಎಂದು ಶಮಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಎಎನ್ಐಗೆ ತಿಳಿಸಿದ್ದಾರೆ. ಭಾರತ ತಂಡವು ವಿಶ್ವಕಪ್ ಫೈನಲ್‌ನಲ್ಲಿ ಸೋಲನುಭವಿಸಿದ ಬಳಿಕ ಆಟಗಾರರಿಗೆ ಮೋದಿ ಆತ್ಮಸ್ಥೈರ್ಯ ತುಂಬಿದ್ದರು. ನರೇಂದ್ರ ಮೋದಿ ಅವರು ಮೊಹಮ್ಮದ್ ಶಮಿ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದರು. ಈ ವಿಡಿಯೊ ಭಾರಿ ವೈರಲ್ ಆಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ