ಟ್ರಿನಿಡಾಡ್: ಶುಕ್ರವಾರ ನಡೆದ ಟಿ20 ವಿಶ್ವಕಪ್ನ ‘ಸಿ’ ವಿಭಾಗದ ಪಂದ್ಯದಲ್ಲಿ ಅಫಘಾನಿಸ್ತಾನ(PNG vs AFG) ತಂಡ ಪಪುವಾ ನ್ಯೂ ಗಿನಿಯಾ ವಿರುದ್ಧ 7 ವಿಕೆಟ್ ಅಂತರದ ಗೆಲುವು ಸಾಧಿಸುವ ಮೂಲಕ ಸೂಪರ್-8 ಹಂತಕ್ಕೆ ಪ್ರವೇಶ ಪಡೆದಿದೆ. ಅಫಘಾನಿಸ್ತಾನ ಗೆಲುವಿನಿಂದ ನ್ಯೂಜಿಲ್ಯಾಂಡ್(New Zealand) ತಂಡ ಟೂರ್ನಿಯಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿದೆ.
ಇಲ್ಲಿನ ಟರೂಬದಲ್ಲಿರುವ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಪುವಾ ನ್ಯೂ ಗಿನಿಯಾ ತಂಡ ಫಜಲ್ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ಅವರ ಘಾತಕ ದಾಳಿಗೆ ನಲುಗಿ 95 ರನ್ಗೆ ಸರ್ವಪತನ ಕಂಡಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಅಫಘಾನಿಸ್ತಾನ 15.1 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 101 ರನ್ ಬಾರಿಸಿ ಗೆಲುವು ದಾಖಲಿಸಿತು. ಅತ್ತ ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ನ್ಯೂಜಿಲ್ಯಾಂಡ್ ಈ ಬಾರಿ ಲೀಗ್ನಿಂದಲೇ ಹೊರಬಿದ್ದ ಅವಮಾನಕ್ಕೆ ಸಿಲುಕಿತು.
ಚೇಸಿಂಗ್ ವೇಳೆ ಆಫ್ಘಾನ್ ಕೂಡ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಇಬ್ರಾಹಿಂ ಜದ್ರಾನ್(0) ಮತ್ತು ರಹಮಾನುಲ್ಲಾ ಗುರ್ಬಾಜ್(11) ವಿಕೆಟ್ ಬೇಗನೆ ಕಳೆದುಕೊಂಡಿತು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಗುಲ್ಬದಿನ್ ನೈಬ್ ಅಜೇಯ 49 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇವಲ ಒಂದು ರನ್ ಹಿನ್ನಡೆಯಲ್ಲಿ ಅರ್ಧಶತಕ ಬಾರಿಸುವ ಅವಕಾಶ ಕಳೆದುಕೊಂಡರು.
ಇದನ್ನೂ ಓದಿ T20 World Cup : ಒಮನ್ ವಿರುದ್ಧ 8 ವಿಕೆಟ್ ಜಯ ಗಳಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಪುವಾ ನ್ಯೂ ಗಿನಿಯಾ ಪರ ಕಿಪ್ಲಿನ್ ಡೋರಿಗಾ(27) ಹೊರತು ಪಡಿಸಿ ಉಳಿದೆಲ್ಲರು ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಡೋರಿಗಾ ಅವರ ಸಣ್ಣ ಮಟ್ಟಿನ ಬ್ಯಾಟಿಂಗ್ ಹೋರಾಟದಿಂದ ತಂಡದ ಮೊತ್ತ ಕನಿಷ್ಠ 100 ಸನಿಹಕ್ಕೆ ಬಂದಿತು. ಕಳೆದ 2 ಪಂದ್ಯಗಳಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ್ದ ಫಜಲ್ಹಕ್ ಫಾರೂಕಿ ಅವರ ಘಾತಕ ಬೌಲಿಂಗ್ ದಾಳಿ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಈ ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 16 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉಳಿದಂತೆ ನವೀನ್ ಉಲ್ ಹಕ್ 4 ರನ್ಗೆ 2 ವಿಕೆಟ್ ಪಡೆದರು.
ಇಂಗ್ಲೆಂಡ್ಗೆ ಭರ್ಜರಿ ಗೆಲುವು
ತಡರಾತ್ರಿ ನಡೆದ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಒಮಾನ್ ವಿರುದ್ಧ ಭರ್ಜರಿ 8 ವಿಕೆಟ್ಗಳ ಗೆಲುವು ದಾಖಲಿಸಿ ಸೂಪರ್-8 ಪ್ರವೇಶದ ಆಸೆಯನ್ನು ಜೀವಂತವಿರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಒಮಾನ್ ಕೇವಲ 47 ರನ್ಗೆ ಆಲೌಟ್ ಆಯಿತು. ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 3.1 ಓವರ್ಗಳಲ್ಲಿ ಅಂದರೆ 19 ಎಸೆತಗಳಲ್ಲಿ 2 ವಿಕೆಟ್ಗೆ 50 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.