ಬರ್ಮಿಂಗ್ಹಮ್ : ಭಾರತದ ಮಹಿಳಾ ಕುಸ್ತಿಪಟು ಪೂಜಾ ಸಿಹಾಗ್ ಕಾಮನ್ವೆಲ್ತ್ ಗೇಮ್ಸ್‌ನ ೭೬ ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತದಿಂದ ತೆರಳಿದ್ದ ಆರು ಮಹಿಳಾ ಕುಸ್ತಿಪಟುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಪದಕಗಳನ್ನು ಗೆದ್ದುಕೊಂಡಂತಾಗಿದೆ. ಶನಿವಾರ ರಾತ್ರಿ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಆಸ್ಟ್ರೇಲಿಯಾದ ನವೊಮಿ ಡಿ ಬ್ರೂನಿ ವಿರುದ್ಧ ೧೧-೦ ಅಂಕಗಳಿಂದ ಜಯ ಸಾಧಿಸಿದ ಪೂಜಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಪೂಜಾ ಅವರು ಕಾಮನ್ವೆಲ್ತ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಆರನೇ ಮಹಿಳಾ ಕುಸ್ತಿಪಟು. ಈ ಹಿಂದೆ ಸಾಕ್ಷಿ ಮಲಿಕ್ ಹಾಗೂ ವಿನೇಶ್ ಫೋಗಾಟ್ ಬಂಗಾರದ ಪದಕ ಗೆದ್ದಿದ್ದರೆ, ಅನ್ಶು ಮಲಿಕ್ ಬೆಳ್ಳಿ ಗೆದ್ದಿದ್ದರು. ಪೂಜಾ ಗೆಹ್ಲೋಟ್ ಹಾಗೂ ದಿವ್ಯಾ ಕಾಕ್ರನ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಪೂಜಾ ಸಿಹಾಗ್ ಅವರ ಕಂಚಿನ ಪದಕದ ಸೇರ್ಪಡೆಯೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೩೫ಕ್ಕೆ ಏರಿಕೆಯಾಗಿದೆ. ಇದರಲ್ಲಿ ೧೨ ಚಿನ್ನದ ಪದಕಗಳಾದರೆ, ೧೧ ಬೆಳ್ಳಿ ಹಾಗೂ ೧೨ ಕಂಚಿನ ಪದಕಗಳು ಸೇರಿಕೊಂಡಿವೆ. ಭಾರತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ೫೭ ಚಿನ್ನ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನ, ೪೯ ಚಿನ್ನ ಗೆದ್ದಿರುವ ಇಂಗ್ಲೆಂಡ್ ಎರಡನೇ ಸ್ಥಾನ, ೨೦ ಚಿನ್ನ ಗೆದ್ದಿರುವ ಕೆನಡಾ ಮೂರನೇ ಸ್ಥಾನ ಹಾಗೂ ೧೭ ಚಿನ್ನ ಗೆದ್ದಿರುವ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ನಲ್ಲಿ ಬಂಗಾರದ ಹ್ಯಾಟ್ರಿಕ್ ಸಾಧನೆ ಮಾಡಿದ ವಿನೇಶ್ ಫೋಗಾಟ್