Site icon Vistara News

Pooja Vastrakar: ಮೋದಿ ವಿರೋಧಿ ಪೋಸ್ಟ್​ಗಾಗಿ ಕ್ಷಮೆ ಯಾಚಿಸಿದ ಟೀಮ್​ ಇಂಡಿಯಾ ಆಟಗಾರ್ತಿ​ ಪೂಜಾ ವಸ್ತ್ರಾಕರ್

Pooja Vastrakar

ಮುಂಬಯಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳು ಕೂಡ ತಮ್ಮ ಪ್ರತಿ ಪಕ್ಷಗಳ ನಾಯಕ ಬಗ್ಗೆ ಟೀಕೆ ಮತ್ತು ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ಮಧ್ಯೆ ಭಾರತ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್​ ಪೂಜಾ ವಸ್ತ್ರಾಕರ್(Pooja Vastrakar) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ, ವಿದೇಶಾಂಗ ಸಚಿವ ಜೈ ಶಂಕರ್, ನಿರ್ಮಲಾ ಸೀತಾರಾಮನ್‌, ರಾಜ್​ನಾಥ್ ಸಿಂಗ್, ನಿತೀನ್​ ಗಡ್ಕರಿ, ಅನುರಾಗ್​ ಠಾಕೂರ್​ ಸೇರಿ ಇತರ ಬಿಜೆಪಿ ನಾಯಕರನ್ನು ಲೇವಡಿ ಮಾಡುವ ಫೋಸ್ಟ್​ ಒಂದನ್ನು ಮಾಡಿ ತೀವ್ರ ಚರ್ಚೆಗೆ ಗುರಿಯಾದ ಬಳಿಕ ಕ್ಷಮೆಯಾಚಿಸಿದ್ದಾರೆ.

‘ವಸೂಲಿ ಟೈಟಾನ್ಸ್’ ಶೀರ್ಷಿಕೆಯ ಪೋಸ್ಟ್ ಅನ್ನು ಪೂಜಾ ವಸ್ತ್ರಾಕರ್ ಅವರು ತಮ್ಮ ಇನ್​ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಇಂಪ್ಯಾಕ್ಟ್​ ಪ್ಲೇಯರ್​ ಇಡಿ ಎಂದು ಬರೆದು ನಗುತ್ತಿರುವ ಎಮೊಜಿಯನ್ನು ಹಾಕಿದ್ದರು. ಈ ಪೋಸ್ಟ್​ಗೆ ಸಂಬಂಧಿಸಿ ಪೂಜಾ ವಸ್ತ್ರಾಕರ್ ವಿರುದ್ಧ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಬೆಂಬಲ ಸೂಚಿಸಿದ್ದರು. ಈ ಪೋಸ್ಟ್​ನ ತೀವ್ರತೆ ಅರಿತ ಪೂಜಾ ಹಾಯ್, ನನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಆಕ್ಷೇಪಾರ್ಹ ಚಿತ್ರವನ್ನು ಪೋಸ್ಟ್ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇದು ನಾನು ಮಾಡಿದ ಪೋಸ್ಟ್​ ಅಲ್ಲ, ನನ್ನ ಫೋನ್ ನನ್ನ ಕೈಯಲ್ಲಿಲ್ಲದ ಸಮಯದಲ್ಲಿ ಇದು ನಡೆದಿದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಅತ್ಯಂತ ಗೌರವ ನೀಡುತ್ತೇನೆ. ಇದರಿಂದ ಉಂಟಾದ ನೋವಿಗೆ ಕ್ಷಮೆಯಾಚಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Women’s T20 World Cup: ಸೆಮಿ ಫೈನಲ್​ ಪಂದ್ಯದಿಂದ ಹೊರಬಿದ್ದ ಪೂಜಾ ವಸ್ತ್ರಾಕರ್

ಪೂಜಾ ಅವರು ಪೋಸ್ಟ್ ಮಾಡಿದ ಚಿತ್ರವನ್ನು ಮೂಲತಃ ಹರಿಯಾಣ ಕಾಂಗ್ರೆಸ್ ಮಾರ್ಚ್​ 28 ರಂದು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿತ್ತು. ಇದೇ ಫೋಟೊ ಪೂಜಾ ಅವರ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕಾಣಸಿಕೊಂಡಿತ್ತು. ಅವರು ಉದ್ದೇಶ ಪೂರ್ವಕವಾಗಿಯೇ ಈ ಪೋಸ್ಟ್​ ಮಾಡಿದ್ದಾ? ಅಥವಾ ಬೇರೆಯವರು ಇವರ ಇನ್​ಸ್ಟಾ ಖಾತೆಯಿಂದ ಈ ಪೋಸ್ಟ್​ ಮಾಡಿದ್ದಾರಾ ಎನ್ನುವುದು ಮಾತ್ರ ನಿಗೂಢವಾಗಿದೆ.

ಪೂಜಾ ಅವರು ಭಾರತ ಪರ 30 ಏಕದಿನ ಮತ್ತು 50 ಟಿ20, 4 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ 77 ವಿಕೆಟ್​ ಕಬಳಿಸಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಇವರು ಒಟ್ಟು 970 ರನ್​ ಬಾರಿಸಿದ್ದಾರೆ. ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಆಟಗಾರ್ತಿಯಾಗಿದ್ದಾರೆ.

ಚುನಾವಣೆ ಯಾವಾಗ?

ಏಪ್ರಿಲ್‌ 19ರಂದು 102 ಕ್ಷೇತ್ರಗಳು ಕ್ಷೇತ್ರಗಳಿಗೆ ಮತದಾನ ನಡೆಯುವ ಮೂಲಕ ಏಳು ಹಂತದ ಚುನಾವಣೆಗೆ ನಾಂದಿ ಹಾಡಲಾಗುತ್ತದೆ. ಬಳಿಕ ಏಪ್ರಿಲ್‌ 26ರಂದು ನಡೆಯುವ 2ನೇ ಹಂತದಲ್ಲಿ 89 ಕ್ಷೇತ್ರ, ಮೇ 7ರ 3ನೇ ಹಂತದಲ್ಲಿ 94 ಕ್ಷೇತ್ರ, ಮೇ 13ರಂದು ನಡೆಯುವ 4ನೇ ಹಂತದಲ್ಲಿ 96 ಕ್ಷೇತ್ರ, ಮೇ 20ರ 5ನೇ ಹಂತದಲ್ಲಿ 49 ಕ್ಷೇತ್ರ, ಮೇ 25ರಂದು ನಡೆಯುವ 6ನೇ ಹಂತದಲ್ಲಿ 57 ಕ್ಷೇತ್ರ ಮತ್ತು ಜೂನ್‌ 1ರ 7ನೇ ಹಂತದಲ್ಲಿ 57 ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

Exit mobile version