ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics 2024) ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡದ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ (PR Sreejesh) ಅವರು ಆಗಸ್ಟ್ 11 ರಂದು ಕೇರಳದ ಸಾಂಪ್ರದಾಯಿಕ ದಿರಸು ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಪೋಟೋ ತೆಗಿಸಿಕೊಂಡಿದ್ದಾರೆ. 1972ರ ಬಳಿಕ ಇದೇ ಮೊದಲ ಬಾರಿಗೆ ಸತತ ಎರಡನೇ ಬಾರಿಗೆ ಒಲಿಂಪಿಕ್ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಪಾಲಿಗೆ ಗೋಲ್ಕೀಪರ್ ಶ್ರೀಜೇಶ್ ಸ್ಟಾರ್ ಎನಿಸಿದ್ದರು. ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್ ಮತ್ತು ಸ್ಪೇನ್ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ 36 ವರ್ಷದ ಆಟಗಾರ ಎದುರಾಳಿಗಳ ಹಲವಾರು ಗೋಲ್ ಪ್ರಯತ್ನಗಳನ್ನು ತಡೆದಿದ್ದರು. ಹೀಗಾಗಿ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿತ್ತು.
ಪಂದ್ಯಾವಳಿಯ ನಂತರ ಶ್ರೀಜೇಶ್ ಕ್ರೀಡೆಯಿಂದ ನಿವೃತ್ತರಾಗಿದ್ದಾರೆ. ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಪ್ಯಾರಿಸ್ನಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಭಾರತದ ಜಂಟಿ ಧ್ವಜಧಾರಿಯಾಗಿ ನಡೆಯಲಿದ್ದಾರೆ. ಆದಾಗ್ಯೂ, ಅದಕ್ಕೂ ಮೊದಲು, ಅವರು ಸಾಂಪ್ರದಾಯಿಕ ಮುಂಡು ಧರಿಸಿ ಐಫೆಲ್ ಟವರ್ ಮುಂದೆ ಪೋಸ್ ನೀಡಿದರು. ಈ ವೇಳೆ ಸೂಪರ್ಹಿಟ್ ಮಲಯಾಳಂ ಚಲನಚಿತ್ರ ಆವೇಶಮ್ ನ ಪ್ರಸಿದ್ಧ ಹೇಳಿಕೆ ‘ಎಡಾ ಮೋನೆ’ ಯನ್ನೂ ಹೇಳಿದರು.
ನಿವೃತ್ತಿಯ ಕುರಿತು ಶ್ರೀಜೇಶ್ ಹೇಳಿದ್ದೇನು?
ನಿವೃತ್ತಿಯ ಬಗ್ಗೆ ಮಾತನಾಡಿದ ಶ್ರೀಜೇಶ್, ಆಟದ ಅಗ್ರಸ್ಥಾನಕ್ಕೆ ಹೋಗಲು ಬಯಸುತ್ತೇನೆ ಮತ್ತು ನಾನು ಆಟವನ್ನು ಏಕೆ ತೊರೆಯುತ್ತಿದ್ದಾರೆ ಎಂದು ಜನರನ್ನು ಕೇಳುವಂತೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಗೆಲುವಿನ ನಂತರ, ನಾನು ನಿವೃತ್ತರಾಗಬೇಕೆಂದು ಯಾರೂ ಬಯಸಲಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಾನು ಮೊದಲೇ ಹೇಳಿದಂತೆ ನನ್ನ ತರಬೇತುದಾರ ಹೇಳಿದಂತೆ ಮಾಡಿದ್ದೇನೆ. ನಾನು ಉತ್ತಮ ಫಾರ್ಮ್ನಲ್ಲಿ ಇರುವಾಗಲೇ ನಿವೃತ್ತಿ ಪಡೆದರೆ ಯಾಕೆ ತೆಗೆದುಕೊಂಡೆ ಎಂದು ಜನರು ಕೇಳುತ್ತಾರೆ. ಇದು ಪರಿಪೂರ್ಣ ಮಾರ್ಗ ಎಂದು ನಾನು ಭಾವಿಸುತ್ತೇನೆ. ಆದರೆ, ನನ್ನ ತಂಡವು ನನಗೆ ಅತ್ಯುತ್ತಮ ವಿದಾಯವನ್ನು ನೀಡಿದೆ ಎಂದು ನಾನು ಭಾವಿಸುತ್ತೇನೆ” ಎಂದು ಕಂಚಿನ ಪದಕ ಗೆದ್ದ ನಂತರ ಪಿಆರ್ ಶ್ರೀಜೇಶ್ ಹೇಳಿದ್ದಾರೆ.
ಇದನ್ನೂ ಓದಿ: Vinesh Phogat : ವಿನೇಶ್ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್ ಗಂಗೂಲಿ ಆಗ್ರಹ
ತಂಡದಲ್ಲಿ ಯಾರಾದರೂ ತಮ್ಮ ಸ್ಥಾನ ತುಂಬುತ್ತಾರೆ ಎಂಬ ವಿಶ್ವಾಸವನ್ನು ಶ್ರೀಜೇಶ್ ಹೊಂದಿದ್ದಾರೆ. “ನನ್ನ ಜಾಗವನ್ನು ಖಂಡಿತವಾಗಿಯೂ ತುಂಬುತ್ತಾರೆ. ಎಲ್ಲಾ ಕ್ರೀಡೆಗಳಲ್ಲಿಯೂ ಹಾಗೆಯೇ, ಹಿಂದೆ ಸಚಿನ್ ತೆಂಡೂಲ್ಕರ್ ಇದ್ದರು ಮತ್ತು ಈಗ ವಿರಾಟ್ ಕೊಹ್ಲಿ ಇದ್ದಾರೆ, ಆದರೆ ನಾಳೆ ಯಾರಾದರೂ ಅವರ ಸ್ಥಾನ ತುಂಬುತ್ತಾರೆ. ಆದ್ದರಿಂದ, ಶ್ರೀಜೇಶ್ ನಿನ್ನೆ ಅಲ್ಲಿದ್ದರು, ಆದರೆ ನಾಳೆ ಅವರ ಸ್ಥಾನವನ್ನು ಯಾರಾದರೂ ತೆಗೆದುಕೊಳ್ಳುತ್ತಾರೆ” ಎಂದು ಶ್ರೀಜೇಶ್ ಹೇಳಿದ್ದಾರೆ.
ಸ್ವದೇಶಕ್ಕೆ ಮರಳಿದ ನಂತರ ಶ್ರೀಜೇಶ್ ಕೋಚ್ ಆಗಿ ತಮ್ಮ ಹೊಸ ಪಾತ್ರ ವಹಿಸಿಕೊಳ್ಳುವ ನಿರೀಕ್ಷೆಯಿದೆ.