Site icon Vistara News

Praggnanandhaa: ಹೆತ್ತವರ ಜತೆ ಮೋದಿ ಭೇಟಿಯಾದ ಪ್ರಜ್ಞಾನಂದ; ಚೆಸ್​ ಬೋರ್ಡ್​ ಮುಂದೆಯೇ ಉಭಯ ಕುಶಲೋಪರಿ

PM Narendra Modi Meets R Praggnanandhaa

ನವದೆಹಲಿ: ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು 2023ರ ಫಿಡೆ ಚೆಸ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆದ ಆರ್. ಪ್ರಜ್ಞಾನಂದ(Praggnanandhaa) ಮತ್ತು ಅವರ ತಂದೆ-ತಾಯಿ ಗುರುವಾರ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಭೇಟಿಯಾದರು. ಈ ವೇಳೆ ವಿಶ್ವಕಪ್​ನಲ್ಲಿ ತಾವು ಗೆದ್ದ ಬೆಳ್ಳಿಯ ಪದಕವನ್ನು ಮೋದಿ ಅವರಿಗೆ ಹೆಮ್ಮೆಯಿಂದ ತೋರಿಸಿದ್ದಾರೆ. ಮೋದಿ ಅವರ ಭೇಟಿಯ ಫೋಟೊಗಳು ವೈರಲ್ ಆಗಿದೆ.


ಮೋದಿ ಜತೆ ಮಾತುಕತೆ

ಪ್ರಧಾನಿ ಮೋದಿ ಅವರು ಪ್ರಜ್ಞಾನಂದ ಮತ್ತು ಅವರ ತಂದೆ ರಮೇಶ್‌ ಬಾಬು(Rameshbabu) ಹಾಗೂ ತಾಯಿ ನಾಗಲಕ್ಷ್ಮೀ(Nagalakshmi) ಅವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಮಗನ ಸಾಧನೆಗೆ ಬೆನ್ನುಲುಬಾಗಿ ನಿಂತ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮೋದಿ ಮತ್ತು ಪ್ರಜ್ಞಾನಂದ ಅವರ ನಡುವಿನ ಮಾತುಕತೆ ವೇಳೆ ಟೇಬಲ್​ನಲ್ಲಿ ಬೆಸ್ಟ್​ ಬೋರ್ಡ್ ಇರಿಸಿದ್ದು ಮತ್ತಷ್ಟು ಗಮನಸೆಳೆಯಿತು.


ಜೀವನದ ಸ್ಮರಣೀಯ ಕ್ಷಣ

ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು ನನ್ನ ಜೀವನ ಸ್ಮರಣೀಯ ಕ್ಷಣ. ಅದರಲ್ಲೂ ಅವರ ನಿವಾಸದಲ್ಲಿ ಭೇಟಿಯಾಗಿರುವು ಹೆಮ್ಮೆಯ ವಿಚಾರ. ಅವರ ಆತ್ಮವಿಶ್ವಾಸ ಮಾತುಗಳು ಸದಾ ನನಗೆ ಸ್ಫೂರ್ತಿ ತುಂಬಲಿದೆ ಎಂದು ಪ್ರಜ್ಞಾನಂದ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.


ಟ್ವೀಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದ ಮೋದಿ

ಪ್ರಜ್ಞಾನಂದ ಅವರು ವಿಶ್ವಕಪ್​ನಲ್ಲಿ ದ್ವಿತೀಯ ಸ್ಥಾನ ಪಡೆದಾಗ ಮೋದಿ ಟ್ವೀಟ್​ ಮೂಲಕ ಅಭಿನಂದಿಸಿದ್ದರು. “ವಿಶ್ವದ ಅಗ್ರಸ್ಥಾನಿಯ ವಿರುದ್ಧ ನೀವು ಮೂರು ದಿನಗಳ ಕಾಲ ನಡೆಸಿದ ಹೋರಾಟವೇ ನಿಮ್ಮ ಗೆಲುವು. ಫಿಡೆ ವಿಶ್ವಕಪ್​ನಲ್ಲಿ ನೀಡಿದ ಗಮನಾರ್ಹ ಪ್ರದರ್ಶನಕ್ಕೆ ನಮಗೆ ಹೆಮ್ಮೆ ಇದೆ. ಇಡೀ ದೇಶವೇ ನಿಮ್ಮ ಸಾಧನೆಯನ್ನು ಕೊಂಡಾಡಿದೆ. ನಿಮ್ಮ ಅಸಾಧಾರಣ ಕೌಶಲ್ಯ ಜಗತ್ತಿಗೆ ಪರಿಚಯವಾಗಿದೆ. ಇದು ಸಣ್ಣ ಸಾಧನೆಯಲ್ಲ. ಛಲದಿಂದ ಮುನ್ನಗ್ಗಿ ಮುಂದಿನ ಪಂದ್ಯಗಳಲ್ಲಿ ಗೆಲುವು ಖಚಿತ. ಮುಂದಿನ ಎಲ್ಲ ಪಂದ್ಯಗಳಿಗೂ ಶುಭ ಹಾರೈಸುತ್ತೇನೆ” ಎಂದು ಮೋದಿ ಟ್ವಿಟರ್​ನಲ್ಲಿ ಪ್ರಜ್ಞಾನಂದ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ Praggnanandhaa: ತವರಿಗೆ ಮರಳಿದ ಪ್ರಜ್ಞಾನಂದಗೆ ಅದ್ಧೂರಿ ಸ್ವಾಗತ


ಸೋತರೂ ಭಾರತೀಯರ ಹೃದಯ ಗೆದ್ದ ಪ್ರಜ್ಞಾನಂದ

ಗುರುವಾರ ನಡೆದಿದ್ದ ಫೈನಲ್​ ಪಂದ್ಯದ ಟೈ ಬ್ರೇಕರ್​ನ ಮೊದಲ ಸೆಟ್​ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿ, ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರೂ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್‌ ಕಾರ್ಲ್‌ಸನ್‌ ಗೆದ್ದು ವಿಶ್ವ ಕಿರೀಟ ತಮ್ಮದಾಗಿಸಿಕೊಂಡರು. ಪ್ರಜ್ಞಾನಂದ ಅವರು ವಿಶ್ವನಾಥನ್‌ ಆನಂದ್‌ ಬಳಿಕ ಚೆಸ್‌ ವಿಶ್ವಕಪ್‌ನಲ್ಲಿ ಫೈನಲ್​ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಭಾರತಕ್ಕೆ ವಿಶ್ವಕಪ್​ ಗೆದ್ದಿದ್ದರು. ಆದರೆ ಪ್ರಜ್ಞಾನಂದ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಸೋತರೂ ಕೊಟ್ಯಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version