Site icon Vistara News

PAK vs SA: ಪಾಕಿಗೆ ಬೀಳಲಿ ಮತ್ತೊಂದು ಸೋಲಿನ ಚಡಿ ಏಟು; ಹರಿಣಗಳು ಎದುರಾಳಿ

South Africa

ಚೆನ್ನೈ: ಹ್ಯಾಟ್ರಿಕ್​ ಸೋಲು ಕಂಡಿರುವ ಪಾಕಿಸ್ತಾನ(Pakistan vs South Africa) ಮತ್ತು 4 ಪಂದ್ಯಗಳಲ್ಲಿ 300 ಪ್ಲಸ್​ ಮೊತ್ತ ಪೇರಿಸಿ ಗೆಲುವು ದಾಖಲಿಸಿದ ಬಲಿಷ್ಠ ದಕ್ಷಿಣ ಆಫ್ರಿಕಾ ಶುಕ್ರವಾರ ಚೆನ್ನೈಯಲ್ಲಿ(Chennai) ಮುಖಾಮುಖಿಯಾಗಲಿದೆ. ಸೆಮಿಫೈನಲ್​ ಪ್ರವೇಶಕ್ಕೆ ಮಹತ್ವ ಪಡೆದಿರುವ ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಗೆಲುವು ಅತ್ಯಗತ್ಯವಾಗಿದೆ. ಸೋತರೆ ಸೆಮಿ ಹಾದಿ ದುರ್ಗಮಗೊಳ್ಳಲಿದೆ.

ಗೆಲುವಿನ ಲಯಕ್ಕೆ ಮರಳುವುದೇ ಪಾಕ್​?

ವಿಶ್ವಕಪ್​ಗೆ ಬರುವಾಗ ತಾನೇ ಬಲಿಷ್ಠ, ನಮ್ಮನ್ನು ಸೋಲಿಸುವ ತಂಡ ಬೇರೊಂದಿಲ್ಲ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನ ದುರ್ಬಲ ತಂಡದ ವಿರುದ್ಧವೂ ಹೀನಾಯ ಸೋಲು ಕಂಡಿದೆ. ಕಳೆದ ಪಂದ್ಯದಲ್ಲಿ ಆಫ್ಘನ್​ ವಿರುದ್ಧ 8 ವಿಕೆಟ್​ಗಳ ಸೋಲು ಕಂಡದ್ದು ಇದಕ್ಕೋಂದು ನಿದರ್ಶನ. ಈಗಾಗಲೇ ಟೀಕೆಗಳ ಸುರಿಮಳೆಯನ್ನು ಕೇಳಿರುವ ನಾಯಕ ಬಾಬರ್​ ಅಜಂ ಈ ಪಂದ್ಯದಲ್ಲಿ ತಂಡವನ್ನು ಗೆಲುವಿನ ಟ್ರ್ಯಾಕ್​ಗೆ ತಂದರೇ ಎನ್ನುವುದು ಪಂದ್ಯದ ಕುತೂಹಲ. ಸೋತರೆ ವಿಶ್ವಕಪ್ ಬಳಿಕ ಅವರು ನಾಯಕತ್ವ ಪಟ್ಟ ಕಳೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈಗಾಗಲೇ ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯೂ ಚಿಂತಿಸಿಯಾಗಿದೆ.

ಹರಿಣಗಳು ಬಲಿಷ್ಠ

ಮೂರು ಶತಕ ಬಾರಿಸಿದ ಕ್ವಿಂಟನ್ ಡಿ ಕಾಕ್​, ಮಧ್ಯಮ ಕ್ರಮಾಂಕದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸುತ್ತಿರುವ ಹೆನ್ರಿಚ್​ ಕ್ಲಾಸೆನ್​, ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲ ಡೇವಿಡ್​ ಮಿಲ್ಲರ್​, ಹಂಗಾಮಿ ನಾಯಕ ಐಡೆನ್​ ಮಾರ್ಕ್ರಮ್​, ಅಂತಿಮ ಹಂತದಲ್ಲಿ ಸಿಡಿದು ನಿಲ್ಲುವ ಬೌಲರ್​ ಮಾರ್ಕೊ ಜಾನ್ಸನ್​ ಇವರೆಲ್ಲ ದಕ್ಷಿಣ ಆಫ್ರಿಕಾದ ಬಲ. ಇವರನ್ನೆಲ್ಲ ಕಟ್ಟಿ ಹಾಕುವುದು ಅಷ್ಟೂ ಸುಲಭವಲ್ಲ. ಅಲ್ಲದೆ ಈ ತಂಡದಲ್ಲಿ ಸ್ಪೆಶಲಿಸ್ಟ್ ಸ್ಪಿನ್ನರ್ ಕೇಶವ್​ ಮಹರಾಜ್​ ಬ್ಯಾಟಿಂಗ್​ ಮತ್ತು ಬೌಲಿಂಗ್ ಎರಡಲ್ಲೂ ಎದುರಾಳಿಗಳಿಗಡ ಚಮಕ್​ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದಲ್ಲದೆ ಚೆನ್ನೈ ಸ್ಪಿನ್​ ಟ್ರ್ಯಾಕ್​ ಆಗಿರುವುದರಿಂದ ಇವರಿಗೆ ಹೆಚ್ಚಿನ ಅವಕಾಶಗಳಿವೆ.​

ಇದನ್ನೂ ಓದಿ Wasim Akram: ಪಾಂಡ್ಯ ಇಲ್ಲದಿದ್ದರೂ ಭಾರತ ಬಲಿಷ್ಠ; ಶಮಿಗೆ ಇನ್ನು ಸ್ಥಾನ ಖಚಿತ ಎಂದ ಪಾಕ್​ ಮಾಜಿ ವೇಗಿ

ಪಿಚ್​ ರಿಪೋರ್ಟ್

ಚೆನ್ನೈಯ ಚಿದಂಬರಂ(MA Chidambaram Stadium) ಸ್ಟೇಡಿಯಂನ ಪಿಚ್​ ಸಂಪೂರ್ಣ ಸ್ಪಿನ್​ ಸ್ನೇಹಿಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ತಬ್ರೇಜ್‌ ಶಮ್ಸಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಹೀಗಾದರೆ ಇವರಿಗಾಗಿ ಜೆರಾಲ್ಡ್ ಕೋಟ್ಜಿ ಜಾಗ ಬಿಡಬೇಕು. ಪಾಕ್​ ತಂಡದಲ್ಲಿ ವಿಕೆಟ್​ ಕೀಳಬಲ್ಲ ಸ್ಪಿನ್ ಬೌಲರ್​ಗಳಿಲ್ಲ. ಕೇವಲ ವೇಗಿಗಳೇ ಇವರ ಪ್ರಮುಖ ಅಸ್ತ್ರ. ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಸ್ಪಿನ್ನ ಬೌಲರ್​ಗಳಾಗಿದ್ದರೂ ಹೇಳಿಕೊಳ್ಳುವಂತ ಪ್ರದರ್ಶನ ತೋರುತಿಲ್ಲ.

ಹವಾಮಾನ ವರದಿ

ಚೆನ್ನೈಯಲ್ಲಿ ಮಧ್ಯಾಹ್ನದ ತಾಪಮಾನವು ಸುಮಾರು 33 ಡಿಗ್ರಿಗಳಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಜೆಯ ವೇಳೆ ಸ್ವಲ್ಪ ಮೋಡ ಕವಿದ ವಾತಾವರಣವಿದ್ದರೂ ತಾಪ ಅಧಿಕವಾಗಿಯೇ ಇರಲಿದೆ. ಮಳೆಯ ಯಾವುದೇ ಸಾಧ್ಯತೆ ಇಲ್ಲ ಆದರೆ, ಇಬ್ಬನಿ ಸಮಸ್ಯೆ ಖಚಿತ ಎಂದು ತಿಳಿಸಿದೆ.

ಸಂಭಾವ್ಯ ತಂಡ

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಸ್ಸಿ ವಾನ್ ಡರ್​ ಡುಸೆನ್, ಐಡೆನ್ ಮಾರ್ಕ್ರಮ್(ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್​ಗಿಡಿ, ಜೆರಾಲ್ಡ್ ಕೋಟ್ಜಿ/ತಬ್ರೇಜ್‌ ಶಮ್ಸಿ.

ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್-ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್.

Exit mobile version