Site icon Vistara News

ಕನ್ನಡಿಗ ಬೋಪಣ್ಣಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ

Rohan Bopanna

ಬೆಂಗಳೂರು: ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯಲ್ಲಿ(Australian Open 2024) ಅಭೂತಪೂರ್ವ ಸಾಧನೆ ತೋರಿ ಪರುಷರ ಡಬಲ್ಸ್​ನಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗ ರೋಹನ್​ ಬೋಪಣ್ಣ(Rohan Bopanna) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

“ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್‌ ಆಟಗಾರ, ಕನ್ನಡಿಗ ರೋಹನ್‌ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ. ಈ ಪ್ರಶಸ್ತಿ ಗೆಲುವಿನೊಂದಿಗೆ ಅವರು ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ದಾಖಲೆ ಬರೆದಿರುವುದು ವಿಶೇಷ”.

ಇದನ್ನೂ ಓದಿ Australian Open 2024: ಐತಿಹಾಸಿಕ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದ ಕನ್ನಡಿಗ ರೋಹನ್​ ಬೋಪಣ್ಣ

“ವಯಸ್ಸು ಬರೀ ಅಂಕಿಗಳಿಗಷ್ಟೇ ಸೀಮಿತ, ಸಾಧನೆಯ ಹಂಬಲ ದೊಡ್ಡದೆಂಬ ಮಾತು ಇವರ ಆಟ ನೋಡಿದವರಿಗೆ ಅನ್ನಿಸದೆ ಇರಲಾರದು. ಇಂತಹ ಇನ್ನಷ್ಟು ದಾಖಲೆಗಳು ರೋಹನ್ ಬೋಪಣ್ಣನವರಿಂದ ಮೂಡಿಬರಲೆಂದು ಆಶಿಸುತ್ತೇನೆ” ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ. 43 ನೇ ವಯಸ್ಸಿನ ಬೋಪಣ್ಣ ಕೊಡಗು ಮೂಲದವರಾಗಿದ್ದಾರೆ.

ಶನಿವಾರ ನಡೆದ ಜಿದ್ದಾಜಿದ್ದಿನ ಪುರುಷರ ಡಬಲ್ಸ್​ ಫೈನಲ್​(Australian Open Men’s Doubles Final) ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌(Matthew Ebden) ಸೇರಿಕೊಂಡು ಇಟಲಿಯ ಸಿಮೋನ್​ ಬೊಲೆಲ್ಲಿ-ಆ್ಯಂಡ್ರಿಯಾ ವಸಸ್ಸೊರಿ ವಿರುದ್ಧ 7-6(7-0), 7-5 ನೇರ ಸೆಟ್​ಗಳಿಂದ ಗೆಲುವು ಸಾಧಿಸಿದರು. ಟೆನಿಸ್​ ಓಪನ್​ ಯುಗದಲ್ಲಿ ಗ್ರ್ಯಾನ್‌ ಸ್ಲಾಮ್‌ ಟ್ರೋಫಿ ಗೆದ್ದ ಅತಿ ಹಿರಿಯ ಟೆನಿಸಿಗ ಎಂಬ ಹಿರಿಮೆಗೆ ರೋಹನ್ ಬೋಪಣ್ಣ ಪಾತ್ರರಾದರು.

ಪ್ರಶಂಸೆ ವ್ಯಕ್ತಪಡಿಸಿದ ಮೋದಿ


ರೋಹನ್​ ಬೋಪಣ್ಣ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಶುಭ ಹಾರೈಸಿದ್ದಾರೆ. ವಯಸ್ಸು ಕೇವಲ ನಂಬರ್​ ಮಾತ್ರ ಎನ್ನುವುದನ್ನು ಬೋಪಣ್ಣ ತೋರಿಸಿಕೊಟ್ಟಿದ್ದಾರೆ. ಸಾಧನೆ ಮಾಡುವ ಛಲವಿದ್ದರೆ ಏನೂ ಕೂಡ ಮಾಡಬಹುದು ಎನ್ನುವುದಕ್ಕೆ ನಮಗೆಲ್ಲ ಬೋಪಣ್ಣ ಸಾಧನೆಯೇ ಸ್ಫೂರ್ತಿ. ಅವರ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯವನ್ನು ಮೆಚ್ಚಲೇ ಬೇಕು. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಮೋದಿ ಟ್ವಿಟರ್​ ಎಕ್ಸ್​ನಲ್ಲಿ ಹಾರೈಸಿದ್ದಾರೆ.

ಇದು ರೋಹನ್​ ಬೋಪಣ್ಣಗೆ ಒಲಿದ 2ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ಅವರು 2017ರಲ್ಲಿ ಫ್ರೆಂಚ್​ ಓಪನ್​ ಟೂರ್ನಿಯ ವಿಶ್ರ ಡಬಲ್ಸ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು. ಕೆನಡಾದ ಗ್ಯಾಬ್ರಿಯೆಲಾ ಡಬ್ರೊವೊಸ್ಕಿ ಜತೆಗೂಡಿ ಆಡುವ ಮೂಲಕ ಈ ಸಾಧನೆ ಮಾಡಿದ್ದರು. 2013 ಮತ್ತು 2023ರಲ್ಲಿ ಯುಎಸ್​ ಓಪನ್​ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದ್ದರೂ ಇಲ್ಲಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

Exit mobile version