Site icon Vistara News

​​Commonwealth Games ಕೂಟದಲ್ಲಿ ಪದಕ ಗೆಲ್ಲಲು ಕ್ರೀಡಾಪಟುಗಳಿಗೆ ಟಿಪ್ಸ್‌ ಕೊಟ್ಟ ಪ್ರಧಾನಿ ಮೋದಿ

Narendra Modi

ನವ ದೆಹಲಿ: ಬರ್ಮಿಂಗ್​ಹ್ಯಾಮ್​ನಲ್ಲಿ ಜುಲೈ 28ರಂದು ಆರಂಭವಾಗುತ್ತಿರುವ ​​Commonwealth Games ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾ ಪಟುಗಳೊಂದಿಗೆ ಪ್ರಧಾನಿ ಮೋದಿಯವರು ಮಾತನಾಡಿ ಶುಭಾಶಯ ಕೋರಿದ್ದು, ವಿಜಯಕ್ಕಾಗಿ ಕೆಲವೊಂದು ಟಿಪ್ಸ್‌ಗಳನ್ನು ನೀಡಿದ್ದಾರೆ.

ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾರತದಿಂದ 215 ಅಥ್ಲೀಟ್‌ಗಳು 19 ಕ್ರೀಡೆಗಳ 141 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಅನೇಕರು ಈಗಾಗಲೇ ಅಂರಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಆದರೆ, 65ಕ್ಕೂ ಅಧಿಕ ಅಥ್ಲೀಟ್​ಗಳು ಇದೇ ಮೊದಲ ಬಾರಿಗೆ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾಗವಹಿಸುತ್ತಿದ್ದು, ಅವರ ಜತೆ ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಹುರಿದುಂಬಿಸಿದರು.

ಮೋದಿಯವರು ಅಥ್ಲೀಟ್​ಗಳಿಗೆ ಉತ್ಸಾಹ ತುಂಭಳೂ ಪ್ರಸಿದ್ಧ ಮಾತೊಂದನ್ನು ನೆನಪಿಸಿಕೊಂಡರು. ಕೋಯಿ ನಹಿ ಹೈ ಟಕ್ಕರ್ ಮೆ, ಕಹಾಂ ಪಡೆ ಹೋ ಚಕ್ಕರ್ ಮೆ! ಎಂದರೆ ‘ಯಾಕೆ ಚಿಂತೆ? ನಮಗೆ ಸರಿಸಾಟಿ ಯಾರಿಲ್ಲ’ ಎಂದರ್ಥ. ಇದನ್ನೇ ಮಾದರಿಯಾಗಿಸಿಕೊಂಡು ಒತ್ತಡ ಮುಕ್ತರಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಕ್ರೀಡಾಪಟುಗಳಿಗೆ ಹೇಳಿದರು.

ಸ್ಪರ್ಧಿಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ

ಬುಧವಾರ (ಜುಲೈ 20) ಬೆಳಗ್ಗೆ 10 ಗಂಟೆಗೆ ವಿಡಿಯೊ ಕಾನ್ಫರೆನ್ಸ್​ ಸಂವಾದದಲ್ಲಿ ಮೋದಿಯವರು ಮೊದಲಿಗೆ ಅಂತಾರಾಷ್ಟ್ರೀಯ ಚೆಸ್​ ದಿನದ ಶುಭಾಶಯ ತಿಳಿಸಿದರು. ಪುರುಷರ 300 ಮೀ. ಸ್ಟೀಪಲ್​ಚೇಸ್ ಪಟು ಅವಿನಾಶ್ ಸಬ್ಲೆ, ವೇಟ್‌​ಲಿಫ್ಟರ್ ಅಚಿಂತಾ ಶೆವ್ಲಿ, ಬ್ಯಾಡ್ಮಿಂಟನ್ ಆಟಗಾರ್ತಿ ತ್ರಿಸಾ ಜೊಲ್ಲಿ, ಹಾಕಿ ಆಟಗಾರ್ತಿ ಸಲಿಮಾ ಟೆಟೆ, ಪ್ಯಾರಾ ಅಥ್ಲೀಟ್ ಶರ್ಮಿಳಾ ಹಾಗೂ ಸೈಕ್ಲಿಸ್ಟ್ ಡೇವಿಡ್ ಬೆಕ್​ಹ್ಯಾಮ್ ಜತೆ ಪ್ರಧಾನಿ ಮೋದಿಯವರು ಪ್ರತ್ಯೇಕವಾಗಿ ಸಂವಾದ ನಡೆಸಿದ್ದರು.

ಸ್ಪರ್ಧಿಗಳು ನಡೆಸುವ ಸಿದ್ಧತೆಯ ಕುರಿತು, ಫಿಟ್​ನೆಸ್​ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಮೂಲಕ ಮೋದಿಯವರು ಸಂವಾದಕ್ಕೆ ಮೌಲ್ಯ ತುಂಬಿದರು. ಕ್ರೀಡಾಪಟುಗಳು ತಮ್ಮ ಅನುಭವವನ್ನು ಪ್ರಧಾನಿಯವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು, ಮನಸ್ಸನ್ನು ಹಗುರವಾಗಿಸಿಕೊಳ್ಳಲು ಇದು ಸೂಕ್ತ ಸಂವಾದವಾಗಿತ್ತು. ಪ್ರತಿ ಕ್ರೀಡಾಪಟುವಿನ ಬಗ್ಗೆ ಅಧ್ಯಯನ ನಡೆಸಿ ಬಂದಂತೆ ಕಂಡ ಮೋದಿಯವರು ತಮ್ಮ ಪ್ರಶ್ನೆಗಳ ಮೂಲಕ ಕ್ರೀಡಾಪಟುಗಳನ್ನು ಬೆರಗಾಗಿಸಿದರು.

ತಮಾಷೆಯೂ ಇತ್ತು

ಸಂವಾದ ಕೇವಲ ಗಂಭಿರ ವಿಷಯಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇಲ್ಲಿ ಕೆಲವು ತಮಾಷೆಯ ಕ್ಷಣಗಳು ಕೂಡ ಇತ್ತು. ವೇಟ್‌ಲಿಫ್ಟರ್ ಅಚಿಂತಾ ಶೆವ್ಲಿ ಅವರಿಗೆ ‘ನಿಮಗೆ ಸಿನಿಮಾ ನೋಡುವ ಆಸಕ್ತಿ ಹೆಚ್ಚಿದೆ ಎಂದು ತಿಳಿದಿದೆ, ಆದರೆ ಅಭ್ಯಾಸದ ಸಂದರ್ಭದಲ್ಲಿ ಸಿನಿಮಾ ನೋಡಲು ಕಷ್ಟವಾಗುತ್ತದೆ. ಇದರಿಂದ ನಿಮಗೆ ಬೇಸರವಾಗುವುದಿಲ್ಲವೇ?’ ಎಂದು ಮೋದಿಯವರು ತಮಾಷೆ ಮಾಡಿದರು.

ಬ್ಯಾಡ್ಮಿಂಟನ್ ಪಟು ತ್ರಿಸಾ ಜೊಲ್ಲಿಯವರಿಗೆ ‘ಪಿ.ವಿ ಸಿಂದೂ ಅವರು ಮ್ಯಾಚ್ ಗೆದ್ದ ಮೇಲೆ ಐಸ್​ಕ್ರೀಂ ತಿಂದು ಸಂಭ್ರಮಿಸಬೇಕು ಎಂದುಕೊಂಡಿದ್ದರು. ನೀವು ಬರ್ಮಿಂಗ್​ಹ್ಯಾಮ್​ನಲ್ಲಿ ಮ್ಯಾಚ್ ಗೆದ್ದ ಬಳಿಕ ಹೇಗೆ ಸಂಭ್ರಮಿಸಬೇಕು ಎಂದುಕೊಂಡಿದ್ದೀರಿ ಎಂದು ಕೇಳಿ ನಗು ತರಿಸಿದರು.

ಕ್ರೀಡಾಪಟುಗಳ ಸ್ಫೂರ್ತಿ ಕಥೆ

ಹಾಕಿ ಆಟಗಾರ್ತಿ ಸಲಿಮಾ ಟೆಟೆ ಅವರು ತಮ್ಮ ಜೀವನದ ಕಷ್ಟದ ಕ್ಷಣಗಳನ್ನು ಮೋದಿಯವರೊಂದಿಗೆ ಹಂಚಿಕೊಂಡರು. ಅತಿ ಕಡಿಮೆ ವಯಸ್ಸಿನಲ್ಲಿ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸಲಿಮಾ ತೀರಾ ಬಡತನದಲ್ಲಿ ಬೆಳೆದುಬಂದವರು. ಹಾಕಿ ಆಡಲೇಬೇಕು ಎಂಬ ಹಠ ಇವರ ಮನದಲ್ಲಿ ಚಿಕ್ಕ ವಯಸ್ಸಿನಿಂದಲೇ ಇತ್ತು. ತಂದೆಯೂ ಹಾಕಿ ಆಟಗಾರರಾಗಿದ್ದು, ಅವರೊಂದಿಗೆ ಸೈಕಲಿನಲ್ಲಿ ಹಾಕಿ ಆಟವನ್ನು ನೋಡಲು ಹೋಗುತ್ತಿದ್ದರು ಎಂಬುದಾಗಿ ತಿಳಿಸಿದರು. ಅವರ ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ ಎಂದು ತಿಳಿಸಲಾಯಿತು.

ಈ ಹಿಂದೆಯೂ ಮಾಡಿದ್ದರು ಸಂವಾದ

ಟೋಕಿಯೊ ಒಲಿಂಪಿಕ್ಸ್​ಗೆ ಹೊರಡುವ ಮೊದಲು ಷಟ್ಲರ್​ ಪಿ. ವಿ ಸಿಂಧೂ, ಟೇಬಲ್​ ಟೆನಿಸ್​ ಪಟು ಮಣಿಕಾ ಬಾತ್ರಾ, ಕುಸ್ತಿಪಟು ವಿನೇಶ್​ ಫೋಗಾಟ್​ ಸೇರಿದಂತೆ ಹಲವು ಕ್ರೀಡಾಳುಗಳ ಜತೆ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದರು. ಪ್ರಧಾನಿಯವರ ಮಾತಿನಂತೆ ಹೆಚ್ಚು ಪದಕಗಳನ್ನು ಗೆಲ್ಲುವಲ್ಲಿ ಭಾರತದ ಕ್ರೀಡಾಳುಗಳು ಯಶಸ್ವಿಯಾಗಿದ್ದರು.

ಈ ಬಾರಿಯ ಕಾಮನ್​ವೆಲ್ತ್ ಗೇಮ್ಸ್​ ಮಹತ್ವವಾಗಿದೆ. ಕಳೆದ ಬಾರಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್​ನಲ್ಲಿ ನಡೆದ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತದ ಸ್ಪರ್ಧಿಗಳು ಒಟ್ಟಾರೆ 66 ಪದಕ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ಈ ಬಾರಿ ಅದನ್ನು ಮೀರುವುದು ಭಾರತದ ನಿಯೋಗದ ಗುರಿಯಾಗಿದೆ. 2010ರಲ್ಲಿ ನವ ದೆಹಲಿಯಲ್ಲಿ ನಡೆದ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಒಟ್ಟು 101 ಪದಕಗಳನ್ನು ಗೆದ್ದು ಎರಡನೇ ಸ್ಥಾನ ಪಡೆದಿತ್ತು. ಇದು ಭಾರತದ ಈವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಈ ಬಾರಿ ಈ ಎಲ್ಲ ಸಾಧನೆಗಳನ್ನು ಮೀರಿ ಹೊಸ ದಾಖಲೆಗಳನ್ನು ಬರೆಯುವಂತೆ ಪ್ರತಿ ಕ್ರೀಡಾಪಟುವಿಗೆ ಮೋದಿಯವರು ಶುಭನುಡಿಗಳನ್ನಾಡುವ ಮೂಲಕ ಉತ್ಸಾಹ ತುಂಬಿದರು. ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಗೆದ್ದು ಬರುವಂತೆ ಎಲ್ಲರಿಗೂ ಶುಭಾಶಯ ತಿಳಿಸಿದರು.

ಇದನ್ನೂ ಓದಿ: ಕಾಮನ್ವೆಲ್ತ್​ ಗೇಮ್ಸ್​ ನಿಯೋಗವನ್ನು ಹುರಿದುಂಬಿಸಲಿದ್ದಾರೆ Narendra Modi , ಬುಧವಾರ ಸಂವಾದ

Exit mobile version