ಮುಂಬಯಿ: ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಪೃಥ್ವಿ ಶಾ(Prithvi Shaw) ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಭೋಜಪುರಿ ನಟಿ ಸಪ್ನಾ ಗಿಲ್(Sapna Gill) ಪ್ರಕರಣದಲ್ಲಿ ಪೃಥ್ವಿ ವಿರುದ್ಧ ಬಾಂಬೆ ಹೈಕೋರ್ಟ್(Bombay High Court) ಗುರುವಾರ ನೋಟಿಸ್ ಜಾರಿ ಮಾಡಿದೆ.
ಫೆಬ್ರವರಿ 15ರಂದು ಮುಂಬೈನ ದೇಶೀಯ ವಿಮಾನ ನಿಲ್ದಾಣದ ಸಮೀಪದ ಪಂಚತಾರಾ ಹೋಟೆಲೊಂದರಲ್ಲಿ ಕ್ರಿಕೆಟಿಗ ಪೃಥ್ವಿ ಶಾ ಮತ್ತವರ ಗೆಳೆಯ ಸುರೇಂದರ್ ಯಾದವ್ ಮೇಲೆ ಹಲ್ಲೆಯಾಗಿತ್ತು. ಈ ವೇಳೆ ಸಪ್ನಾ ಗಿಲ್, ಶಾ ಅವರ ಮೇಲೆ ಬೇಸ್‌ಬಾಲ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೃಥ್ವಿ ಆರೋಪ ಹೊರಿಸಿದ್ದರು. ಆರೋಪದ ನಂತರ ಫೆ.16ರಂದು ಸಪ್ನಾ ಗಿಲ್‌ರನ್ನು ಬಂಧಿಸಲಾಗಿತ್ತು.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಕೆಲ ದಿನಗಳ ಹಿಂದೆ ಸಪ್ನಾ ಗಿಲ್ ಅವರು ಪೃಥ್ವಿ ಶಾ ಮತ್ತು ಅವರ ಗೆಳೆಯ ಸುರೇಂದರ್ ಯಾದವ್ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ಹಾಗೆಯೇ ಕ್ರಿಕೆಟಿಗನ ವಿರುದ್ಧ ಎಫ್ಐಆರ್ ದಾಖಲಿಸಲು ಸಹಕರಿಸದ ಪೊಲೀಸ್ ಅಧಿಕಾರಿಗಳಾದ ಸತೀಶ್ ಕವಂಕರ್, ಭಾಗವತ್ ಗರಾಂಡೆ ವಿರುದ್ಧವೂ ಕ್ರಿಮಿನಲ್ ದೂರನ್ನು ದಾಖಲಿಸಿದ್ದರು.
ಇದನ್ನೂ ಓದಿ Prithvi Shaw: ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ ನಟಿ
ಇದೀಗ ಈ ವಿಷಯದ ವಿಚಾರಣೆ ನಡೆದಿದ್ದು, ಸಪ್ನಾ ಅವರ ಅರ್ಜಿಯ ಮೇರೆಗೆ ಪೃಥ್ವಿ ಶಾ, ಅವರ ಸ್ನೇಹಿತ ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ 11 ಜನರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ಒಂದಡೆ ಫಾರ್ಮ್ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿರುವ ಪೃಥ್ವಿ ಶಾಗೆ ಇದೀಗ ಕೋರ್ಟ್ ನೋಟಿಸ್ ನೀಡಿರುವುದು ಮತ್ತಷ್ಟು ಚಿಂತೆಗೀಡು ಮಾಡಿದೆ. 16ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಪರ ಅವರು ಆಡಿದ ನಾಲ್ಕು ಪಂದ್ಯದಲ್ಲಿ ಕ್ರಮವಾಗಿ 12, 7, 0 ಮತ್ತು 15 ರನ್ ಬಾರಿಸಿದ್ದಾರೆ.