ಮುಂಬಯಿ: ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ(Prithvi Shaw) ಮತ್ತು ಅವರ ಸ್ನೇಹಿತ ಆಶೀಶ್ ಯಾದವ್ ವಿರುದ್ಧ ನಟಿ ಸಪ್ನಾ ಗಿಲ್(Sapna Gill) ಅವರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಇದರಿಂದ ಪೃಥ್ವಿ ಶಾಗೆ ಸಂಕಷ್ಟವೊಂದು ಎದುರಾಗಿದೆ.
ಫೆಬ್ರವರಿ 15ರಂದು ಪೃಥ್ವಿ ಶಾ ಹಾಗೂ ಗೆಳೆಯರು ಮುಂಬಯಿಯ ಪಂಚತಾರಾ ಹೋಟೆಲೊಂದಕ್ಕೆ ಊಟಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಸಪ್ನಾ ಗಿಲ್ ಹಾಗೂ ಸಹಚರರು ಸೆಲ್ಫಿಗಾಗಿ ಪೃಥ್ವಿಗೆ ದುಂಬಾಲು ಬಿದಿದ್ದಾರೆ. ಮೊದಲಿಗೆ ಪೃಥ್ವಿ ಒಪ್ಪಿಕೊಂಡಿದ್ದರು. ಆದರೆ, ಪದೇ ಪದೇ ಅವರು ಹಿಂಸೆ ಕೊಡಲು ಶುರು ಮಾಡಿದಾಗ ನಿರಾಕರಿಸಿ ಮುಂದೆ ನಡೆದಿದ್ದರು. ಈ ವೇಳೆ ಸಪ್ನಾ ಹಾಗೂ ಗೆಳೆಯರು ಪೃಥ್ವಿ ಶಾ ಅವರನ್ನು ನಿಂದಿಸಿ ಗಲಾಟೆ ಮಾಡಲು ಮುಂದಾಗಿದ್ದರು. ತಕ್ಷಣ ಹೋಟೆಲ್ನ ಭದ್ರತಾ ಸಿಬ್ಬಂದಿ ಅವರನ್ನು ಹೊರಕ್ಕೆ ಕಳುಹಿಸಿದ್ದರು. ಹೊರಗಡೆ ಹೋದ ಸಪ್ನಾ ಹಾಗೂ ಗೆಳೆಯರು ಪೃಥ್ವಿ ಶಾ ಹೋಟೆಲ್ನಲ್ಲಿ ಊಟ ಮುಗಿಸಿ ಹೊರಕ್ಕೆ ಬರುತ್ತಿದ್ದಂತೆ ಬೇಸ್ಬಾಲ್ ಬ್ಯಾಟ್ನೊಂದಿಗೆ ಬೆನ್ನಟ್ಟಿ ಹಲ್ಲೆ ಮಾಡಿದ್ದರು. ಅವರ ಕಾರಿನ ಹಿಂಬದಿಯ ಗಾಜಿಗೂ ಹೊಡೆದಿದ್ದರು.
ಸಪ್ನಾ ಗಿಲ್ ಅವರು ಪೃಥ್ವಿ ಶಾ ಮೇಲೆ ದಾಳಿ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಪ್ನಾ ಗಿಲ್ ಮತ್ತು ಆಯೆಯ ಸ್ನೇಹಿತರು ಜೈಲು ಸೇರಿದ್ದರು. ಆ ಬಳಿಕ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.
ಇದನ್ನೂ ಓದಿ Prithvi Shaw : ನಟಿ ಸಪ್ನಾ ಗಿಲ್ ವಿರುದ್ಧ ಕೊಲೆ ಕೇಸ್ ಕೂಡ ದಾಖಲು, ಮತ್ತೊಮ್ಮೆ ಜೈಲು ಸೇರುವ ಸಾಧ್ಯತೆ?
ಜಾಮೀನು ಪಡೆದು ಸರಿ ಸುಮಾರು ಒಂದು ತಿಂಗಳು ಕಳೆದರು ಸುಮ್ಮನಿದ್ದ ಸಪ್ನಾ ಗಿಲ್ ಇದೀಗ ಪೃಥ್ವಿ ಶಾ ಮತ್ತು ಆಶೀಶ್ ಯಾದವ್ ವಿರುದ್ಧ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದಾರೆ. ಪೃಥ್ವಿ ಶಾ ಮತ್ತು ಆತನ ಗೆಳೆಯರು ನನ್ನ ಮೊಬೈಲ್ ಕಿತ್ತು ನೆಲಕ್ಕೆ ಬಿಸಾಡಿದ್ದಾರೆ. ಫೋನ್ ಸಂಪೂರ್ಣ ಡ್ಯಾಮೇಜ್ ಆಗಿತ್ತು. ಅದೇ ರೀತಿ ಅವರು ನನ್ನ ಮೇಲೆ ದೌರ್ಜನ್ಯ ಕೂಡ ನಡೆಸಿದ್ದಾರೆ. ನನ್ನ ದೇಹದ ಖಾಸಗಿ ಭಾಗವನ್ನು ಮುಟ್ಟುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬುದಾಗಿ ಗಿಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್, ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಸದ್ಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಪೃಥ್ವಿ ಶಾಗೆ ಈ ಪ್ರಕರಣದಲ್ಲಿ ಕೋರ್ಟ್ ಯಾವ ಶಿಕ್ಷೆ ನೀಡಲಿದೆ ಎಂದು ಕಾದು ನೋಡಬೇಕಿದೆ.