Site icon Vistara News

20km Race Walk: ಚಿನ್ನ ಗೆದ್ದ ಪ್ರಿಯಾಂಕಾ, ಅಕ್ಷದೀಪ್‌ಗೆ ಒಲಿಂಪಿಕ್ಸ್ ಟಿಕೆಟ್‌

Priyanka Goswami

#image_title

ರಾಂಚಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ನಡಿಗೆ ಚಾಂಪಿಯನ್‌ಶಿಪ್​ನ 20 ಕಿ.ಮೀ(20km Race Walk) ವಿಭಾಗದಲ್ಲಿ ಅಕ್ಷದೀಪ್‌ ಸಿಂಗ್(Akashdeep Singh) ಹಾಗೂ ಪ್ರಿಯಾಂಕಾ ಗೋಸ್ವಾಮಿ(Priyanka Goswami) ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ಈ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ ಮತ್ತು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಮಂಗಳವಾರ ನಡೆದ ಪುರುಷರ ವಿಭಾಗದ 20 ಕಿ.ಮೀ ಸ್ಪರ್ಧೆಯಲ್ಲಿ ಪಂಜಾಬ್​ನ 22 ವರ್ಷದ ಅಕ್ಷದೀಪ್‌ ಅವರು 1 ಗಂಟೆ 19 ನಿಮಿಷ 55 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಗೆದ್ದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡರು. ಜತೆಗೆ ಈ ಟೂರ್ನಿಯಲ್ಲಿ ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿದರು. ಈ ಹಿಂದೆ ಸಂದೀಪ್‌ ಕುಮಾರ್ (1 ಗಂಟೆ 20 ನಿ. 16 ಸೆ.) ಸ್ಥಾಪಿಸಿದ್ದ ದಾಖಲೆಯನ್ನು ಅಳಿಸಿಹಾಕಿದರು.

ಮಹಿಳೆಯರ 20 ಕಿ.ಮೀ. ವಿಭಾಗದ ಸ್ಪರ್ಧೆಯಲ್ಲಿ ಪ್ರಿಯಾಂಕಾ ನಿರೀಕ್ಷೆಯಂತೆ ಚಿನ್ನ ಜಯಿಸಿದರು. ಅವರು 1 ಗಂಟೆ 28 ನಿ. 50 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 2021ರಲ್ಲಿ 1 ಗಂಟೆ 28 ನಿ. 45 ಸೆಕೆಂಡುಗಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಸದ್ಯ ಈ ದಾಖಲೆ ಅವರದೇ ಹೆಸರಿನಲ್ಲಿದೆ.

ಇದನ್ನೂ ಓದಿ 2028 Olympics Cricket: 2028ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಸೇರ್ಪಡೆ?

ವಿಶ್ವ ಚಾಂಪಿಯನ್‌ಶಿಪ್‌ ಬುಡಾಪೆಸ್ಟ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿದೆ. ಪುರುಷರ ವಿಭಾಗದಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವಚಾಂಪಿಯನ್‌ಶಿಪ್‌ಗೆ 1 ತಾಸು 20 ನಿ. 10 ಸೆ. ಸಮಯ ಅರ್ಹತಾ ಮಾನದಂಡವಾಗಿದೆ. ಮಹಿಳಾ ವಿಭಾಗದಲ್ಲಿ 1 ತಾಸು 29 ನಿ. 20 ಸೆಕೆಂಡು ಆಗಿದೆ. ಆದರೆ ಅಕ್ಷದೀಪ್‌ ಮತ್ತು ಪ್ರಿಯಾಂಕಾ ಈ ಸಮಯಕ್ಕಿಂತ ಮುಂಚಿತವಾಗಿ ಗುರಿ ತಲುಪಿ ವಿಶ್ವ ಚಾಂಪಿಯನ್‌ಶಿಪ್‌ ಮತ್ತು ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Exit mobile version