Site icon Vistara News

Pro Kabaddi: ಬುಲ್ಸ್​ಗೆ 7ನೇ ಸೋಲು; ಒಂದು ಅಂಕದ ಅಂತರದಿಂದ ಗೆದ್ದ ದಬಾಂಗ್​ ಡೆಲ್ಲಿ

Pro Kabaddi League

ಮುಂಬಯಿ: ತವರಿನಲ್ಲಿ ಬೊಂಬಾಟ್​ ಪ್ರದರ್ಶನ ತೋರಿದ ಯು ಮುಂಬಾ(U Mumba) ತಂಡ ಶುಕ್ರವಾರದ ಪ್ರೊ ಕಬಡ್ಡಿ(Pro Kabaddi) ಟೂರ್ನಿಯ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್(Bengaluru Bulls)​ ತಂಡವನ್ನು ಮಣಿಸಿದೆ. ದಿನದ ಮೊದಲ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ( Dabang Delhi K.C) ತಂಡವು ಪಾಟ್ನಾ ಪೈರೇಟ್ಸ್‌(Patna Pirates) ತಂಡವನ್ನು ಕೇವಲ ಒಂದು ಅಂಕದ ಅಂತರದಿಂದ ಮಗುಚಿ ಹಾಕಿತು.

ಇಲ್ಲಿನ ನ್ಯಾಶನಲ್‌ ಸ್ಪೋರ್ಟ್ಸ್ ಕ್ಲಬ್‌ ಆಫ್ ಇಂಡಿಯಾದ ತಾಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಮುಂಬಾ ತಂಡ ಬೆಂಗಳೂರು ಬುಲ್ಸ್​ ಮೇಲೆ ಸವಾರಿ ನಡೆಸಿ 40-35 ಅಧಿಕಾರಯುತ ಗೆಲುವು ಸಾಧಿಸಿತು. ಬುಲ್ಸ್​ಗೆ ಎದುರಾದ 7 ಸೋಲು ಇದಾಗಿದೆ. ಮುಂಬೈಗೆ ಒಲಿದ 6ನೇ ಗೆಲುವು ಇದಾಗಿದೆ. ಸದ್ಯ ಮುಂಬೈ 31 ಅಂಕದೊಂದಿಗೆ 5ನೇ ಸ್ಥಾನ ಪಡೆದಿದ್ದು ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. 41 ಅಂಕ ಗಳಿಸಿರುವ ಪುಣೇರಿ ತಂಡ ಅಗ್ರಸ್ಥಾನದಲ್ಲಿದೆ. ದಬಾಂಗ್​ ಡೆಲ್ಲಿ 35 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ.

ಬುಲ್ಸ್​ ಪರ ಸ್ಟಾರ್​ ಆಟಗಾರರೇ ನಿರೀಕ್ಷಿತ ಆಟವಾಡುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ವಿಕಾಶ್​ ಖಂಡೋಲಾ(5), ಭರತ್​ ಕುಮಾರ್​(3), ಡಿಫೆಂಡರ್​ ಸುರ್ಜಿತ್​ ಸಿಂಗ್ (3) ಅಂಕ ಗಳಿಸಿದರು. ಬುಲ್ಸ್​ ಪರ ಮಿಂಚಿದ ಆಟಗಾರರೆಂದರೆ ರೇಡರ್​ಗಳಾದ ಸುಶೀಲ್​ ಮತ್ತು ಸಚಿನ್​ ಮಾತ್ರ. ಉಭಯ ಆಟಗಾರರು ತಲಾ 6 ಅಂಕ ಪಡೆದರು. ಉಳಿದಂತೆ ನಾಯಕ ಸೌರಬ್​(4) ಮತ್ತು ಅಮನ್​(4) ಅಂಕ ಕಲೆ ಹಾಕಿದರು. ಆದರೆ, ಮುಂಬಾ ಆರ್ಭಟದ ಮುಂದೆ ಇವರ ಅಂಕಗಳು ಸಾಕಾಗಲಿಲ್ಲ.

ಮುಂಬಾ ತಂಡ ಎಲ್ಲ ವಿಭಾಗದಲ್ಲಿಯೂ ಸಂಘಟಿತ ಪ್ರದರ್ಶನ ತೋರಿತು. ಅಮೀರ್ಮೊಹಮ್ಮದ್(7), ಗುಮಾನ್​ ಸಿಂಗ್​(7), ಬುಲ್ಸ್​ ತಂಡದ ಮಾಜಿ ಆಟಗಾರ ಮಹೇಂದರ್ ಸಿಂಗ್(4), ಬಿಟ್ಟು(6) ಮತ್ತು ಸೋಂಬೀರ್​ (3) ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.


ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ ಪಾಟ್ನಾ ಪೈರೇಟ್ಸ್​ ಮೇಲೆ ಸವಾರಿ ನಡೆಸಿ ಜಯ ಸಾಧಿಸಿತು. ಅತ್ಯಂತ ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಕೊನೆಯ ಕ್ಷಣದ ವರೆಗೂ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಿತು. ಆದರೆ, ಅದೃಷ್ಟ ಡೆಲ್ಲಿ ಪಾಲಿಗೆ ಒಲಿಯಿತು. ಕೇವಲ ಒಂದು ಅಂಕದ ಅಂತರದಿಂದ ಗೆಲುವು ಸಾಧಿಸಿತು. ಗೆಲುವಿನ ಅಂತರ 38-37. ಡೆಲ್ಲಿ ಪರ ಹಂಗಾಮಿ ನಾಯಕ ಅಶು ಮಲಿಕ್ 10 ಅಂಕ ಗಳಿಸಿ ಮಿಂಚಿದರು. ಪಾಟ್ನಾ ಪರ ಸಚಿನ್​ ಕೂಡ 10 ಅಂಕ ಗಳಿಸಿದರು. ಆದರೆ ಪಂದ್ಯ ಸೋತ ಕಾರಣ ಅವರ ರೇಡಿಂಗ್​ ಹೋರಾಟ ವ್ಯರ್ಥವಾಯಿತು.

Exit mobile version