Site icon Vistara News

Pro Kabaddi: ಹ್ಯಾಟ್ರಿಕ್​​ ಸೋಲಿಗೆ ತುತ್ತಾದ ಬೆಂಗಳೂರು ಬುಲ್ಸ್

Dabang Delhi K.C

ಬೆಂಗಳೂರು: ತವರಿನಲ್ಲಾದರೂ ಬೆಂಗಳೂರು ಬುಲ್ಸ್​ ಗೆಲುವಿನ ಖಾತೆ ತೆರೆಯಬಹುದೆಂದು ನಿರೀಕ್ಷೆ ಮಾಡಿದ್ದ ಸ್ಥಳೀಯ ಕಬಡ್ಡಿ​ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಶುಕ್ರವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ(Pro Kabaddi) ಲೀಗ್‌ನ 12ನೇ ಪಂದ್ಯದಲ್ಲಿ ಆತಿಥೇಯ ಬುಲ್ಸ್​ ತಂಡ ದಬಾಂಗ್​ ಡೆಲ್ಲಿ ವಿರುದ್ಧ 38-31 ಅಂತರದ ಸೋಲು ಕಂಡಿದೆ. ಈ ಮೂಲಕ ಹ್ಯಾಟ್ರಿಕ್​ ಸೋಲಿನ ಆಘಾತ ಎದುರಿಸಿತು.

ತವರಿನ ಪಂದ್ಯವಾದ ಕಾರಣ ಬುಲ್ಸ್​ ತಂಡಕ್ಕ ಬೆಂಬಲ ಸೂಚಿಸಲು ನಟ ಕಿಚ್ಚ ಸುದೀಪ್​ ಕೂಡ ಹಾಜರಿದ್ದರು. ಪಂದ್ಯ ಆರಂಭಕ್ಕೂ ಮುನ್ನವೇ ಅವರು ಮ್ಯಾಟ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಬುಲ್ಸ್​ಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದರು. ಆದರೆ ಬುಲ್ಸ್​ ತಂಡದ ಆಟಗಾರರು ಎದುರಾಳಿ ತಂಡದ ಸ್ಟಾರ್​ ರೇಡರ್​ ಎಕ್ಸ್​ಪ್ರೆಸ್​ ಖ್ಯಾತಿಯ ನವೀನ್​ ಅವರ ಸುಂಟರಗಾಳಿ ವೇಗದ ರೇಡಿಂಗ್​ಗೆ ತತ್ತರಿಸಿ ಸೋಲು ಕಂಡರು.

ಪಂದ್ಯದ ಮೊದಲ ರೇಡಿಂಗ್​ ನಡೆಸಿದ ವಿಕಾಸ್​ ಖಂಡೋಲಾ ಅಂಕ ಗಳಿಸದೆ ವಾಪಸ್ ಆದರು. ಡೆಲ್ಲಿ ತಂಡ ಮೊದಲು ಅಂಕದ ಖಾತೆ ತೆರೆಯಿತು. ಮೂರು ನಿಮಿಷ ಆಗುವಷ್ಟರಲ್ಲಿ ಬೆಂಗಳೂರು ಕೂಡ ತಿರುಗಿ ಬಿದ್ದು ಅಂಕಗಳಿಸಿ ಜಿದ್ದಾಜಿದ್ದಿನ ಪೈಪೋಟಿ ನೀಡಿತು. ಆದರೆ ಇದೇ ಲಯ ಮುಂದುವರಿಸುವಲ್ಲಿ ವಿಫಲವಾಗಿ ಮೊದಲಾರ್ಧದ ಆಟದ ಮುಕ್ತಾಯಕ್ಕೆ 12-17 ಅಂಕದ ಹಿನ್ನಡೆ ಅನುಭವಿಸಿತು.

ದ್ವಿತೀಯಾರ್ಧದಲ್ಲಿ ಸಣ್ಣ ಮಟ್ಟದ ಹೋರಾಟ

ಮೊದಲ ಅವಧಿಯಲ್ಲಿ ನೀರಸ ಆಟವಾಡಿದ ಬುಲ್ಸ್​ ದ್ವಿತೀಯಾರ್ಧದ ಆಟದಲ್ಲಿ ಫಿನಿಕ್ಸ್​ನಂತೆ ಎದ್ದು ಬಂದು ಸತತವಾಗಿ ಅಂಕ ಗಳಿಸುತ್ತಾ ಸಾಗಿತು. ಮಪದಲ ಅವಧಿಯಲ್ಲಿ 5 ಅಂಕದ ಹಿನ್ನಡೆಯಲ್ಲಿದ್ದ ಬುಲ್ಸ್​ 20-21 ಅಂಕದ ಪ್ರತಿರೋಧ ತೋರುವ ಮೂಲಕ ಡೆಲ್ಲಿಗೆ ತಿವಿಯುವ ಸೂಚನೆ ನೀಡಿತು. ಆದರೆ ಮತ್ತೆ ಬುಲ್ಸ್​ ಆಟಗಾರರು ಹಲವು ಎಡವಟ್ಟುಗಳನ್ನು ಮಾಡಿಕೊಂಡು ಹಿನ್ನಡೆ ಅನುಭವಿಸಿದರು. ಕೊನೆಯ ಮೂರು ನಿಮಿಷದ ಆಟದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದರೂ ಗಲುವು ಮಾತ್ರ ಒಲಿಯಲಿಲ್ಲ. ನಾಯಕ ವಿಕಾಸ್​ ಕಂಡೋಲಾ ಈ ಪಂದ್ಯದಲ್ಲಿ ಸಂಪೂರ್ಣ ವಿಫಲರಾದರು. 7 ರೇಡಿಂಗ್​ ನಡೆಸಿ ಶೂನ್ಯ ಸುತ್ತಿದ್ದರು. ಭರವಸೆಯ ಆಟಗಾರ ಭರತ್​ ಕುಮಾರ್​ ಏಕಾಂಗಿಯಾಗಿ ಹೋರಾಟ ನಡೆಸಿ 15 ರೇಡಿಂಗ್​ನಲ್ಲಿ 11 ಅಂಕ ಗಳಿಸಿದರು. ಸುಶೀಲ್​ ಕುಮಾರ್ 5 ಅಂಕ ಗಳಿಸಿ ​ಭರತ್​ಗೆ ಸಾಥ್​ ನೀಡಿದರೂ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ತಂಡ ಅಂತಿಮವಾಗಿ 7 ಅಂಕದ ಹಿನ್ನಡೆಯಿಂದ ಸೋಲು ಕಂಡಿತು.

ಡೆಲ್ಲಿ ಪರ ಮಿಂಚಿನ ರೇಡಿಂಗ್​ ನಡೆಸಿದ ನವೀನ್​ ಕುಮಾರ್​ ಒಟ್ಟು 19 ಬಾರಿ ಎದುರಾಳಿ ಕೋಟೆಗೆ ನುಗ್ಗಿ 13 ಅಂಕ ಕಲೆಹಾಕಿದರು. ಇದರಲ್ಲಿ 7 ಟಚ್​ ಪಾಯಿಂಟ್​, 5 ಬೋನಸ್​ ಮತ್ತು ಒಂದು ಟ್ಯಾಕಲ್​ ಪಾಯಿಂಟ್​ ಗಳಿಸಿದರು. ಇವರಿಗೆ ಉತ್ತಮ ಸಾಥ್​ ನೀಡಿದ ಅಶು ಮಲಿಕ್​(9), ವಿಶಾಲ್​(3) ಮತ್ತು ಹಿಮ್ಮತ್ ಅಂಟಿಲ್​(3) ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Exit mobile version