Site icon Vistara News

Pro Kabaddi: ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್​, ಹರ್ಯಾಣಗೆ ಒಲಿದ ಗೆಲುವು

pro kabaddi

ಬೆಂಗಳೂರು: ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್​ನ(Pro Kabaddi) ಡಬಲ್​ ಹೆಡರ್​ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಮತ್ತು ಹರ್ಯಾಣ ಸ್ಟೀಲರ್ ಗೆಲುವುವಿನ ನಗೆ ಬೀರಿದೆ, ಬೆಂಗಾಲ್​ ವಾರಿಯರ್ಸ್ ತಂಡ ತಮಿಳ್​ ತಲೈವಾಸ್​ ವಿರುದ್ಧ 48-38 ಅಂತರದಿಂದ ಗೆದ್ದರೆ, ಹರ್ಯಾಣ ಸ್ಟೀಲರ್ ಬಲಿಷ್ಠ ದಬಾಂಗ್​ ಡೆಲ್ಲಿಯನ್ನು 35-33 ಅಂಕದಿಂದ ಕೆಡವಿ ಹಾಕಿತು. ದಿನದ ಎರಡು ಪಂದ್ಯಗಳು ಕೂಡ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ತೀವ್ರ ಪೈಪೋಟಿ ಏರ್ಪಟ್ಟ ಡೆಲ್ಲಿ-ಹರ್ಯಾಣ ​ ಪಂದ್ಯ

ಸತತ 2 ಗೆಲುವು ಸಾಧಿಸಿದ್ದ ದಬಾಂಗ್​ ಡೆಲ್ಲಿ ಮತ್ತು ಹರ್ಯಾಣ ಸ್ಟೀಲರ್ ನಡುವಣ 2ನೇ ಮೊದಲ ಪಂದ್ಯ ಕಬಡ್ಡಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಕೊನೆಯ ಕ್ಷಣದವರೆಗೂ ಅಂಕ ಪಟ್ಟಿ ಹಾವು ಏಣಿ ಆಟದಂತೆ ಏರಿಳಿತ ಕಾಣುತ್ತಲ್ಲೇ ಸಾಗಿತು. ಡೆಲ್ಲಿ ಪರ ನವೀನ್​ ಸ್ಟೀಲರ್ ಪರ ಸಿದ್ದಾರ್ಥ್​ ದೇಸಾಯಿ ಜಿದ್ದಿಗೆ ಬಿದ್ದವರಂತೆ ರೇಡಿಂಗ್​ನಲ್ಲಿ ಅಂಕ ಗಳಿಸಿಸುತ್ತ ಪಂದ್ಯವನ್ನು ಅತ್ಯಂತ ರೋಚಕವಾಗುವಂತೆ ಮಾಡಿದರು. ಅಂತಿಮವಾಗಿ ಹರ್ಯಾಣ ಕೈ ಮೇಲಾಯಿತು. 2 ಅಂಕದ ಮುನ್ನಡೆ ಸಾಧಿಸಿ ಪಂದ್ಯವನ್ನು ಗೆದ್ದು ಬೀಗಿತು.

ಹರ್ಯಾಣ ತಂಡದ ಪರ ಸಿದ್ದಾರ್ಥ್​ ದೇಸಾಯಿ 15 ಬಾರಿ ಎದುರಾಳಿ ಕೋಟೆಗೆ ನುಗ್ಗಿ 10 ಅಂಕ ಗಳಿಸಿದರು. ಇವರಿಗೆ ಉತ್ತಮ ಸಾಥ್​ ನೀಡಿದ ನವೀನ್​ 5, ಅಭಿಷೇಕ್​ 7, ಮೋಹಿತ್​ 3 ಅಂಕ ಗಳಿಸಿ ಮಿಂಚಿದರು. ಡೆಲ್ಲಿ ಪರ ನವೀನ್​ ಕುಮಾರ್​ 16 ಅಂಕ ಗಳಿಸಿದರು. ಅಶು ಮಲಿಕ್​ ಅವರು ಈ ಪಂದ್ಯದಲ್ಲಿ ಕೇವಲ 4 ಅಂಕಕ್ಕೆ ಸೀಮಿತವಾದದ್ದು ಡೆಲ್ಲಿ ಸೋಲಿಗೆ ಕಾರಣವಾಯಿತು. ಈ ಹಿಂದಿನ 2 ಪಂದ್ಯಗಳಲ್ಲಿ ಅವರು ಉತ್ತಮ ರೇಡಿಂಗ್​ ನಡೆಸಿದ್ದರು.

ತಲೆಬಾಗಿದ ತಲೈವಾಸ್​

ಏಕಪಕ್ಷೀಯವಾಗಿ ಸಾಗಿದ ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ತಂಡ ತಮಿಳ್​ ತಲೈವಾಸ್​ ಎದುರು ಅಧಿಕಾರಯುತ ಗೆಲುವು ಸಾಧಿಸಿತು. ಬೆಂಗಾಲ್ ಪರ ಮಿಂಚಿನ ರೇಡಿಂಗ್​ ನಡೆಸಿದ ಮಣಿಂದರ್​ ಸಿಂಗ್​ ಬರೋಬ್ಬರಿ 16 ಅಂಕ ಗಳಿಸಿ ತಂಡದ ಗೆಲುವಿನ ರುವಾರಿ ಎನಿಸಿದರು. ಅವರ ರೇಡಿಂಗ್​ ಆರ್ಭಟವನ್ನು ತಡೆದು ನಿಲ್ಲಿಸುವಲ್ಲಿ ತಮಿಳ್​ ತಂಡದ ಡಿಫೆಂಡರ್​ಗಳು ಸಂಪೂರ್ಣ ವಿಫಲರಾದರು. ಬೆಂಗಾಲ್ ತಂಡದ ಡಿಫೆಂಡರ್​ ಶುಭಂ ಶಿಂಧೆ ಕೂಡ ಅಮೋಘ ಟ್ಯಾಕಲ್ ಮೂಲಕ 11 ಅಂಕ ಗಳಿಸಿದರು. ಉಳಿದಂತೆ ರೇಡರ್​ ನಿತಿನ್​ ಕುಮಾರ್​(7), ಶ್ರೀಕಾಂತ್​(2) ಅಂಕ ಕಲೆಹಾಕಿದರು. ತಲೈವಾಸ್​ ಪರ ನರೇಂದ್ರ ಅವರು 13 ಅಂಕ ಗಳಿಸಿದರೂ ಅವರಿಗೆ ಉಳಿದ ಆಟಗಾರರಿಂದ ಉತ್ತಮ ಬೆಂಬಲ ಸಿಗದ ಕಾರಣ ತಂಡ ಸೋಲು ಕಂಡಿತು.

ಇದನ್ನೂ ಓದಿ Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Exit mobile version