Site icon Vistara News

Pro Kabaddi: 5ನೇ ಪ್ರಯತ್ನದಲ್ಲಿ ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್​

Bengaluru Bulls

ಬೆಂಗಳೂರು: ಸತತ ನಾಲ್ಕು ಸೋಲು ಕಂಡಿದ್ದ ಬೆಂಗಳೂರು ಬುಲ್ಸ್​(Bengaluru Bulls)ತಂಡ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ತನ್ನ 5ನೇ ಪ್ರಯತ್ನದಲ್ಲಿ ಯುಪಿ ಯೋಧಾಸ್(U.P. Yoddhas)​ ವಿರುದ್ಧ ರೋಚಕ 2 ಅಂಕದ ಅಂತರದಿಂದ ಗೆದ್ದು ಬೀಗಿದೆ.

ನಾಟಕೀಯ ಕುಸಿತ ಕಂಡ ಬುಲ್ಸ್​

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ(Pro Kabaddi) ಲೀಗ್​ನ ಸೋಮವಾರದ ದ್ವಿತೀಯ ಪಂದ್ಯದಲ್ಲಿ ಆಡಲಿಳಿದ ಬೆಂಗಳೂರು ಬುಲ್ಸ್​ ತಂಡ ಎದುರಾಳಿ ಯುಪಿ ಯೊಧಾಸ್​ ವಿರುದ್ಧ 38-36 ಅಂತರದಿಂದ ಮಣಿಸಿತು. ಅತ್ಯಂತ ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಕೊನೆಯ 3 ನಿಮಿಷಗಳು ನಾಟಕೀಯವಾಗಿ ಕಂಡು ಬಂತು. 10 ಅಂಕದ ಮುನ್ನಡೆಯಲ್ಲಿದ್ದ ಬುಲ್ಸ್​ ತಂಡ ಏಕಾಏಕಿಯಾಗಿ ಕುಸಿತ ಕಂಡು ಆಲ್ ಔಟ್​ ಆಯಿತು. ಇನ್ನೇನು ಸೋಲು ಕಾಣುವುದು ಖಚಿತ ಎನ್ನುವ ವಾತಾವರಣ ಸೃಷ್ಟಿಯಾಯಿತು. ಆದರೆ ಭರತ್​ ಕುಮಾರ್​ ಅವರು ಅಂತಿಮ ಎರಡು ರೇಡ್​ಗಳಲ್ಲಿ ಅಂಕ ಗಳಿಸಿದ ಪರಿಣಾಮ ತಂಡ 2 ಅಂಕದಿಂದ ಗೆಲುವು ಕಂಡಿತು. ಇದು ಬುಲ್ಸ್​ಗೆ ಒಲಿದ ಮೊದಲ ಗೆಲುವು.

ಪಂದ್ಯ ಆರಂಭಗೊಂಡ ಕೆಲ ನಿಮಿಷ ಬುಲ್ಸ್​ ಭಾರಿ ಹಿನ್ನಡೆ ಎದುರಿಸಿತು. ಎದುರಾಳಿ ತಂಡ 5 ಅಂಕ ಗಳಿಸಿದರೂ ಬುಲ್ಸ್​ 1 ಅಂಕ ಗಳಿಸಿತ್ತು. ಆದರೆ ತಕ್ಷಣ ಎಚ್ಚೆತ್ತುಕೊಂಡ ಬುಲ್ಸ್​ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ಅಂಕಗಳಿಸಲು ಆರಂಭಿಸಿದರು. ಈ ಪರಿಣಾಮ ಮೊದಲಾರ್ಧದ ಆಟ ಮುಕ್ತಾಯಗೊಳ್ಳುವಾಗ ಬುಲ್ಸ್​ 21-14 ಅಂಕದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಸುಮಾರು 15 ನಿಮಿಷಗಳ ಆಟದ ವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಬುಲ್ಸ್​ ಅಂತಿಮ ಹಂತದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಸೋಲಿನ ಬಾಗಿಲಿನಂಚಿಗೆ ಹೋಗಿ ಸ್ವಲ್ಪ ದರದಲ್ಲೇ ಪಾರಾಯಿತು.

ಫಾರ್ಮ್​ಗೆ ಮರಳಿದ ವಿಕಾಸ್​ ಖಂಡೋಲಾ

ಕಳೆದ ನಾಲ್ಕು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದ ವಿಕಾಸ್ ಖಂಡೋಲಾ ಈ ಪಂದ್ಯದಲ್ಲಿ ಅಮೋಘ ರೇಡಿಂಗ್​ ನಡೆಸಿ 11 ಅಂಕ ಕಳೆಹಾಕಿದರು. ಅಂತಿಮ ಮೂರು ನಿಮಿಷದ ಆಟದಲ್ಲಿ ಅವರು ಮೂರು ಅಂಕ ಗಳಿಸುವ ಅವಕಾಶದಿಂದ ವಂಚಿತರಾದರು. ಮಿಡಲ್​ ಲೈನ್​ ಮುಟ್ಟಿದರೂ ಸಂಪೂರ್ಣವಾಗಿ ಲೈನ್​ ಪಾಸ್​ ಆಗದ ಕಾರಣ ಅವರು ಔಟ್​ ಆದರು. ಇಲ್ಲದಿದ್ದರೆ ಇದು ಸೂಪರ್​ ರೇಡ್​ ಆಗುತ್ತಿತ್ತು. ಭರತ್​ ಕೂಡ ಉತ್ತಮ ರೇಡಿಂಗ್​ ನಡೆಸಿ 11 ಅಂಕ ಕಲೆ ಹಾಕಿದರು. ನಾಯಕ ಸೌರಬ್​ ಡಿಫೆಂಡಿಂಗ್​ನಲ್ಲಿ 4 ಅಂಕ ಪಡೆದರು. ಯುಪಿ ಪರ ಪ್ರದೀಪ್​ ನರ್ವಾಲ್​ 13 ಅಂಕ ಗಳಿಸಿದರೂ ಗೆಲುವು ಒಲಿಯಲಿಲ್ಲ. ಸುರೇಂದರ್​ ಗಿಲ್​ 8 ಅಂಕ ಕಲೆಹಾಕಿದರು.​

ಇದನ್ನೂ ಓದಿ Pro Kabaddi: ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್​, ಹರ್ಯಾಣಗೆ ಒಲಿದ ಗೆಲುವು

ಸೋಲುವ ಪಂದ್ಯ ಗೆದ್ದ ಜೈಪುರ

ದಿನ ಮೊದಲ ಪಂದ್ಯ ಕೂಡ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಹಾಲಿ ಚಾಂಪಿಯನ್​ ಜೈಪುರ ಪಿಂಕ್​ ಪ್ಯಾಂಥರ್ಸ್​ ತಂಡ ಆರಂಭಿಕ ಹಿನ್ನಡೆಯಿಂದ ಫಿನಿಕ್ಸ್​ನಂತೆ ಎದ್ದು ಬಂದು ಸೋಲುವ ಪಂದ್ಯದಲ್ಲಿ ಗೆಲುವು ಸಾಧಿಸಿತು. ಬಲಿಷ್ಠ ಗುಜರಾತ್​ ತಂಡ 32-35 ಅಂತರದಿಂದ ಸೋಲು ಕಂಡಿತು. ಪಂದ್ಯದ ಮುಕ್ಕಾಲು ಭಾಗ ಗುಜರಾತ್ ಜೈಂಟ್ಸ್​ ತಂಡ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ತಂಡದ ಎಲ್ಲ ಗೆಲುವಿನ ಯೋಜನೆಯನ್ನು ಎದುರಾಳಿ ಆಟಗಾರ ಅರ್ಜುನ್​ ಜೈಸ್ವಾಲ್​ ಭಗ್ನಗೊಳಿಸಿದರು.

ಅರ್ಜುನ ಬಿಲ್ಲು ಬಾಣದ ವೇಗದಂತೆ ರೇಡಿಂಗ್​ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 19 ಬಾರಿ ಎದುರಾಳಿ ಕೋಟೆಗೆ ನುಗ್ಗಿ 15 ಅಂಕ ಗಳಿಸಿದರು. ಇವರಿಗೆ ಭವಾನಿ ರಜಪೂತ್​(6) ಮತ್ತು ಸುನೀಲ್​ ಕುಮಾರ್​(5) ಉತ್ತಮ ಸಾಥ್​ ನೀಡಿದರು. ಗುಜರಾತ್​ ಪರ ಸೋನು 13 ಅಂಕ ಪಡೆದರು.

Exit mobile version