Site icon Vistara News

Pro Kabaddi: ಪೈರೇಟ್ಸ್‌ ಮಣಿಸಿ ಫೈನಲ್​ ಪ್ರವೇಶಿಸಿದ ಪುಣೇರಿ ಪಲ್ಟನ್‌

Puneri Paltan vs Patna Pirates (1)

ಹೈದರಾಬಾದ್‌: 10ನೇ ಆವೃತ್ತಿ ಪ್ರೊ ಕಬಡ್ಡಿ(Pro Kabaddi) ಲೀಗ್‌ನಲ್ಲಿ ಪುಣೇರಿ ಪಲ್ಟನ್‌(Puneri Paltan) ಮೊದಲ ತಂಡವಾಗಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಇಂದು(ಬುಧವಾರ) ನಡೆದ ಮೊದಲ ಸೆಮಿಫೈನಲ್​ ಕಾದಾಟದಲ್ಲಿ ಪಾಟ್ನಾ ಪೈರೇಟ್ಸ್‌(Patna Pirates) ತಂಡವನ್ನು 37-21 ಅಂಕಗಳ ಅಂತರದಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿತು. ಕಳೆದ ಬಾರಿ ಜೈಪುರ ವಿರುದ್ಧದ ಫೈನಲ್​ನಲ್ಲಿ ಸೋತು ರನ್ನರ್‌ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಫೈನಲ್​ನಲ್ಲಿ ಪುಣೇರಿ 2ನೇ ಸೆಮಿಫೈನಲ್‌ ಪಂದ್ಯವಾದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಹರ್ಯಾಣ ಸ್ಟೀಲರ್ಸ್‌ ತಂಡಗಳ ನಡುವಣ ವಿಜೇತರನ್ನು ಎದುರಿಸಲಿದೆ.

ಇಲ್ಲಿನ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿ ಪಂದ್ಯದಲ್ಲಿ ಆಡಲಿಳಿದ ಪುಣೇರಿ ಪಲ್ಟನ್‌ ಮತ್ತು ಪಾಟ್ನಾ ಪೈರೇಟ್ಸ್‌ ಮೊದಲಾರ್ಧದ ಅಂತಿಮ 8 ನಿಮಿಷದ ಆಟ ಬಾಕಿ ಇರುವವರೆಗೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿ ಕೇವಲ ಒಂದು ಅಂಕದ ಮುನ್ನಡೆಯೊಂದಿಗೆ ಆಟವಾಡಿತ್ತು. ಆದರೆ, ಇನ್ನೇನು ಮೊದಲ ಅವಧಿಯ ಆಟ ಮುಕ್ತಾಯಗೊಳ್ಳುತ್ತದೆ ಎನ್ನುವಷ್ಟರಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪುಣೇರಿ ತಂಡದ ಆಟಗಾರರು 20-11 ಅಂತರದ ಅಂಕ ಕಲೆ ಹಾಕಿ 9 ಅಂಕದ ಮುನ್ನಡೆ ಸಾಧಿಸಿದರು.

ದ್ವಿತಿಯಾರ್ಧದಲ್ಲಿಯೂ ಇದೇ ಲಯವನ್ನು ಮುಂದುವರಿಸಿದ ಪುಣೇರಿ ಆಟಗಾರರು ಸತತವಾಗಿ ಅಂಕ ಗಳಿಸಿ ಎದುರಾಳಿ ಆಟಗಾರರಿಗೆ ಇನ್ನಿಲ್ಲದ ಒತ್ತಡ ಹೇರಿದರು. ಆಲ್‌ರೌಂಡರ್ ಅಸ್ಲಾಂ ಮುಸ್ತಫಾ ತಮ್ಮ ಆಲ್​ರೌಂಡರ್​ ಶೋ ನಿಂದ 7 ಪಾಯಿಂಟ್ ಕಲೆ ಹಾಕಿದರು. ಇವರಿಗೆ ರೇಡರ್​ ಪಂಕಜ್​ ಮೋಹಿತ್(7)​ ಮತ್ತು ಮತೋರ್ವ ಆಲ್​ರೌಂಡರ್​ ಮೊಹಮ್ಮದ್ರೇಜಾ ಚಿಯಾನೆಹ್(5) ಅಂಕ ಗಳಿಸಿ ಉತ್ತಮ ಸಾಥ್​ ನೀಡಿದರು. ಉಳಿದಂತೆ ಮೋಹಿತ್​ ಗೋಯತ್​(4), ​ಅಭಿನೇಶ್ ನಾಡರಾಜನ್(3), ಸಂಕೇತ್ ಸಾವಂತ್(3) ಅಂಕ ಕಲೆ ಹಾಕಿ ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದರು.

3 ಬಾರಿ ಪ್ರಶಸ್ತಿ ಗೆದ್ದಿರುವ ಪಾಟ್ನಾ ಈ ಬಾರಿ 5ನೇ ಫೈನಲ್‌ ತವಕದಲ್ಲಿತ್ತು. ಆದರೆ ಸೆಮಿಯಲ್ಲಿ ಸೋತು ನಿರಾಸೆ ಅನುಭವಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮಿಫೈನಲ್​ ತಲುಪಿದ್ದ ಪುಣೇರಿ ಪಲ್ಟನ್‌ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ನೀಡಿ ಗಮನ ಸೆಳೆಯಿತು. ಪಾಟ್ನಾ ಪರ ತಾರಾ ರೇಡರ್​ಗಳಾದ​ ಸಚಿನ್(5) ಮತ್ತು ಮಂಜಿತ್(4)​​ ಅವರು ಈ ಪಂದ್ಯದಲ್ಲಿ ವೈಫಲ್ಯ ಕಂಡದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

Exit mobile version