Site icon Vistara News

Pro Kabaddi: ಭರ್ಜರಿ ಗೆಲುವಿನೊಂದಿಗೆ ಸೋಲಿನ ಕೊಂಡಿ ಕಳಚಿದ ತಮಿಳ್​ ತಲೈವಾಸ್‌

U.P. Yoddhas vs Tamil Thalaivas

ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿದ್ದ ತಮಿಳ್‌ ತಲೈವಾಸ್‌(Tamil Thalaivas) ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಬುಧವಾರದ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ(Pro Kabaddi) 65ನೇ ಪಂದ್ಯದಲ್ಲಿ ಯುಪಿ ಯೋಧಾಸ್‌(U.P. Yoddhas) ತಂಡವನ್ನು 46-27 ಅಂತರದ ಮಣಿಸಿತು. ಯು ಮುಂಬಾ(U Mumba) ಮತ್ತು ಹರ್ಯಾಣ ಸ್ಟೀಲರ್ಸ್(Haryana Steelers)​ ನಡುವಣ ಮತ್ತೊಂದು ಪಂದ್ಯ ಟೈಗೊಂಡಿತು.

ಸತತ ಐದು ಪಂದ್ಯಗಳ ಸೋಲಿನ ಸುಳಿಗೆ ಸಿಲುಕಿದ್ದ ತಲೈವಾಸ್‌ ಯುಪಿ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸುವ ಮೂಲಕ ಮತ್ತೆ ಕಮ್​ಬ್ಯಾಕ್​ ಮಾಡುವ ಸೂಚನೆ ನೀಡಿದೆ .ನರೇಂದರ್‌ ಅವರ ಸೂಪರ್‌ ಟೆನ್‌ ಸಾಹಸ ತಮಿಳ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಅವರು ಒಟ್ಟು 18 ಬಾರಿ ಎದುರಾಳಿ ಕೋಟೆಗೆ ನುಗ್ಗಿ 14 ಅಂಕ ಕಲೆಹಾಕಿದರು. ಇವರಿಗೆ ಅಜಿಂಕ್ಯ ಪವಾರ್‌ (5 ಅಂಕ), ಸಾಗರ್‌ (6 ಅಂಕ), ಸಾಹಿಲ್‌ (5 ಅಂಕ) ಉತ್ತಮ ಸಾಥ್​ ನೀಡಿದರು.

ಮೊದಲಾರ್ಧದಲ್ಲೇ ಮುನ್ನಡೆ ಕಾಯ್ದುಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಂಡ ತಲೈವಾಸ್‌ ಆಟಗಾರರು, ದ್ವಿತೀಯಾರ್ಧದಲ್ಲೂ ಅದೇ ಲಯ ಕಾಯ್ದುಕೊಂಡರು. ಸಂಘಟಿತ ಹೋರಾಟ ನೀಡಿ ಎದುರಾಳಿ ಆಗಾರರ ಮೇಲೆ ಒತ್ತಡ ಹೆಚ್ಚಿಸಿದರು. ಯೋಧಾಸ್‌ ಆಟಗಾರರು ಪೈಪೋಟಿ ನೀಡಲು ತಿಣುಕಾಡಿದರು.

ಯೋಧಾಸ್‌ ಪರ ನಾಯಕ ಪರ್ದೀಪ್‌ ನರ್ವಾಲ್‌ 3 ಅಂಕ ಗಳಿಸಿ ನಿರಾಸೆ ಮೂಡಿಸಿದರು. ವಿಜಯ್‌ ಮಲಿಕ್‌ ಏಕಾಂಗಿಯಾಗಿ ಹೋರಾಟ ನಡೆಸಿ ಸೂಪರ್‌ 10 ಅಂಕ ಗಳಿಸಿ ತಂಡದ ಸೋಲಿನ ಅಂತರ ಕಡಿಮೆ ಮಾಡುವಲ್ಲಿ ಯಶಸ್ವಿಯಾದರು. ಇದು ಯೋಧಾಸ್‌ ಎದುರಾದ 8ನೇ ಸೋಲು. ತಲೈವಾಸ್‌ ಒಲಿದ ಮೂರನೇ ಗೆಲುವು. 19 ಅಂಕಗಳಿಸಿ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ತಮಿಳ್​ಗೆ ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆದ್ದರೆ ನಾಕೌಟ್​ಗೆ ಪ್ರವೇಶ ಪಡೆಯುವ ಸಣ್ಣ ಅವಕಾಶ ಉಳಿದಿದೆ. ಅಗ್ರಸ್ಥಾನದಲ್ಲಿರುವ ಪಂದ್ಯಗಳ ಸೋಲು ಕೂಡ ಇಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಇದನ್ನೂ ಓದಿ Pro Kabaddi: ಬುಲ್ಸ್​ಗೆ 7ನೇ ಸೋಲು; ಒಂದು ಅಂಕದ ಅಂತರದಿಂದ ಗೆದ್ದ ದಬಾಂಗ್​ ಡೆಲ್ಲಿ

ಟೈಗೊಂಡ ಮುಂಬಾ-ಹರ್ಯಾಣ ಪಂದ್ಯ


ದಿನದ ದ್ವಿತೀಯ ಪಂದ್ಯವಾದ ಯು ಮುಂಬಾ ಮತ್ತು ಹರ್ಯಾಣ ಸ್ಟೀಲರ್ಸ್​ ಪಂದ್ಯ ಅತ್ಯಂತ ರೋಚಕವಾಗಿ ಸಾಗಿ ಬಂತು. ಗೆಲುವಿಗಾಗಿ ಇತ್ತಂಡಗಳು ಸಮಬಲದ ಹೋರಾಟ ನಡೆಸಿ ಕೊನೆಗೆ ಪಂದ್ಯವನ್ನು ಟೈಯೊಂದಿಗೆ ಮುಕ್ತಾಯಗೊಳಿಸಿದರು. ಉಭಯ ತಂಡಗಳಿಗೆ ತಲಾ ಮೂರು ಅಂಕ ಲಭಿಸಿತು.

ಮುಂಬಾ ಪರ ಅಮೀರ್ಮೊಹಮ್ಮದ್ ಜಫರ್ದಾನೇಶ್(14 ಅಂಕ), ಗುಮಾನ್​ ಸಿಂಗ್​(7ಅಂಕ) ಮಿಂಚಿದರೆ, ಹರ್ಯಾಣ ಪರ ಜೈದೀಪ್​(8ಅಂಕ), ವಿನಯ್​, ಸಿದ್ಧಾರ್ಥ್​ ದೇಸಾಯಿ ಮತ್ತು ಚಂದ್ರನ್​ ರಂಜಿತ್​ ತಲಾ 7 ಅಂಕ ಗಳಿಸಿ ಗಮನಸೆಳೆದರು.

Exit mobile version