Site icon Vistara News

Pro Kabaddi : ತಲೈವಾಸ್​, ಗುಜರಾತ್​ ಜಯಂಟ್ಸ್​ಗೆ ಗೆಲುವು

Bangalore bulls

ಅಹಮದಾಬಾದ್​: ಪ್ರೊ ಕಬಡ್ಡಿ ಲೀಗ್​ನ (Pro Kabaddi) ಮೂರನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡದ ಸ್ಟಾರ್ ರೈಡರ್ ಅಜಿಂಕ್ಯ ಪವಾರ್ ಭಾನುವಾರ ಸಂಜೆ ದಬಾಂಗ್ ಡೆಲ್ಲಿ ವಿರುದ್ಧ 21 ಅಂಕಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವರ ನೆರವಿನಿಂದ ತಮಿಳ್ ತಲೈವಾಸ್ 42-31 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಆರಂಭಿಕ ನಿಮಿಷಗಳಲ್ಲಿ ಎರಡೂ ಕಡೆಯವರು ಜಾಗರೂಕರಾಗಿ ಆಡುವುದರೊಂದಿಗೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಆದಾಗ್ಯೂ ತಮಿಳ್ ತಲೈವಾಸ್ ಎಲ್ಲ ಹಂತದಲ್ಲೂ ಪ್ರಾಬಲ್ಯ ಸಾಧಿಸಿ ಗೆದ್ದಿತು.

ಇದನ್ನೂ ಓದಿ : Ind vs Aus : ಭಾರತ ತಂಡಕ್ಕೆ ಕೊನೇ ಪಂದ್ಯದಲ್ಲೂ ಜಯ, 4-1 ಅಂತರದಿಂದ ಸರಣಿ ಕೈವಶ

ತಮಿಳ್ ತಲೈವಾಸ್ ಪರ ಅಜಿಂಕ್ಯ ಪವಾರ್ ಮತ್ತು ಸಾಹಿಲ್ ಗುಲಿಯಾ ಗೆಲುವಿನ ಜವಾಬ್ದಾರಿ ವಹಿಸಿಕೊಂಡರೆ, ದಬಾಂಗ್ ಡೆಲ್ಲಿ ಕೆಸಿ ತಂಡಕ್ಕೆ ನವೀನ್ ಮತ್ತು ಅಶು ಮಲಿಕ್ ಗೆಲುವು ತಂದುಕೊಡಲು ಯತ್ನಿಸಿದರು. ಮೊದಲಾರ್ಧದಲ್ಲಿ ತಮಿಳ್ ತಲೈವಾಸ್ 4 ಅಂಕಗಳ ಮುನ್ನಡೆ ಸಾಧಿಸಿತ್ತು.

ದ್ವಿತೀಯಾರ್ಧದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ.ಗೆ ಅಂಕಗಳನ್ನು ಗಳಿಸುವ ಅಗತ್ಯವಿತ್ತು. ಅದೇನೇ ಇದ್ದರೂ, ತಮಿಳು ತಲೈವಾಸ್ ಗಟ್ಟಿಯಾಗಿ ಆಡಲು ಆರಂಭಿಸಿತು. ಏತನ್ಮಧ್ಯೆ ಅಜಿಂಕ್ಯ ತಮ್ಮ ಸೂಪರ್ 10 ಅನ್ನು ದಾಖಲಿಸಿದರು ಮತ್ತು ನರೇಂದರ್ ಮತ್ತು ಹಿಮಾಂಶು ಅವರ ಸಹಾಯದಿಂದ ದ್ವಿತೀಯಾರ್ಧದ ಆರಂಭದಲ್ಲಿ ತಲೈವಾಸ್​ ತನ್ನ ಮುನ್ನಡೆಯನ್ನು 6 ಅಂಕಗಳಿಗೆ ವಿಸ್ತರಿಸಿಕೊಂಡಿತು. ಅಂತಿಮ ಹತ್ತು ನಿಮಿಷಗಳಲ್ಲಿ ಎಲ್ಲಾ ವಿಭಾಗಗಳಲ್ಲಿ ಮಿಂಚಿದ ತಮಿಳ್ ತಲೈವಾಸ್ ಪರ ಪಂದ್ಯ ಸಾಗಿತು. ದ್ವಿತೀಯಾರ್ಧದಲ್ಲಿ ದಬಾಂಗ್ ಡೆಲ್ಲಿಗೆ ಅಂಕ ಗಳಿಸಲು ಯಾವುದೇ ಅವಕಾಶವನ್ನು ಬಿಟ್ಟುಕೊಡಲಿಲ್ಲ.

ಬೆಂಗಳೂರು ಬುಲ್ಸ್​ಗೆ ಸೋಲು

ದಿನದ ಎರಡನೇ ಪಂದ್ಯದ ಕೊನೆಯ ಎರಡು ನಿಮಿಷಗಳಲ್ಲಿ ಮುನ್ನಡೆ ಸಾಧಿಸಿ ಗುಜರಾತ್​ ಜಯಂಟ್ಸ್ ತಂಡ ಬೆಂಗಳೂರು ಬುಲ್ಸ್​ ವಿರುದ್ಧ 34-31 ರಿಂದ ಗೆಲುವು ಸಾಧಿಸಿತು. ಗೆಲ್ಲುವವರೆಗೂ ಎರಡೂ ತಂಡಗಳು ಪಂದ್ಯದುದ್ದಕ್ಕೂ ಮುನ್ನಡೆಯನ್ನು ಕಾಯ್ದುಕೊಂಡವು. ಈ ಪಂದ್ಯದಲ್ಲಿ ಸೋನು 12 ಅಂಕಗಳೊಂದಿಗೆ ಮತ್ತೊಮ್ಮೆ ಜೈಂಟ್ಸ್ ಪರ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದರು.

ಪಂದ್ಯದ ಮೊದಲ ನಿಮಿಷದಲ್ಲಿ ನೀರಜ್ ನರ್ವಾಲ್ ಗಳಿಸಿದ ಪಾಯಿಂಟ್​ನಿಂದ ಬುಲ್ಸ್ 3-0 ಮುನ್ನಡೆ ಸಾಧಿಸಿತು. 5ನೇ ನಿಮಿಷದಲ್ಲಿ ಮೊಹಮ್ಮದ್ ನಬಿಬಕ್ಷ್ ಗಳಿಸಿದ ಅಂಕದಿಂದ ಜಯಂಟ್ಸ್ ತಂಡ ಮೇಲುಗೈ ಸಾಧಿಸಿತು. 11ನೇ ನಿಮಿಷದಲ್ಲಿ ಜಯಂಟ್ಸ್ ಮತ್ತು ಬುಲ್ಸ್ ತಂಡಗಳು 9-9ರ ಸಮಬಲ ಸಾಧಿಸಿದವು. ಇದಾದ ಕೆಲವೇ ಕ್ಷಣಗಳಲ್ಲಿ ಬುಲ್ಸ್ ತಂಡ 14-11 ಅಂಕಗಳ ಮುನ್ನಡೆ ಸಾಧಿಸಿತು. ಮೊದಲಾರ್ಧದ ಅಂತ್ಯಕ್ಕೆ ಬುಲ್ಸ್ ತಂಡ 20-14 ಅಂಕಗಳ ಮುನ್ನಡೆ ಸಾಧಿಸಿತ್ತು.

ದ್ವಿತೀಯಾರ್ಧದ ಆರಂಭಿಕ ನಿಮಿಷಗಳಲ್ಲಿ ಸೋನು ಸೂಪರ್ ರೈಡ್ ಮಾಡಿ ಉಭಯ ತಂಡಗಳ ನಡುವಿನ ಅಂತರವನ್ನು ಕಡಿಮೆ ಮಾಡಿದರು. 27ನೇ ನಿಮಿಷದಲ್ಲಿ ಜಯಂಟ್ಸ್ 24-23ರಲ್ಲಿ ಮುನ್ನಡೆ ಸಾಧಿಸಿತು. 31ನೇ ನಿಮಿಷದಲ್ಲಿ ಕಂಡೋಲಾ ಅದ್ಭುತ ರೈಡ್ ಮಾಡಿದರೂ ಜಯಂಟ್ಸ್ 26-24ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಆದರೆ ರಾಕೇಶ್ 39ನೇ ನಿಮಿಷದಲ್ಲಿ ಭರತ್ ಗಳಿಸಿದ ಪಾಯಿಂಟ್​ನಿಂದ ಜಯಂಟ್ಸ್ 32-30ರ ಮುನ್ನಡೆ ಸಾಧಿಸಿ ಗೆಲುವು ಕಂಡಿತು.

Exit mobile version