Site icon Vistara News

Pro Kabaddi: ಟೈಗೊಂಡ ಡೆಲ್ಲಿ-ಜೈಪುರ ಪಂದ್ಯ; ಮತ್ತೆ ಸೋಲು ಕಂಡ ತಲೈವಾಸ್​

Pro Kabaddi

ಚೆನ್ನೈ: ಬುಧವಾರದ ಪ್ರೊ ಕಬಡ್ಡಿಯ ಎರಡೂ ಪಂದ್ಯಗಳು ಕೂಡ ಅತ್ಯಂತ ರೋಚಕವಾಗಿ ನಡೆಯಿತು. ಅದರಲ್ಲೂ ದಿನದ ಮೊದಲ ಡೆಲ್ಲಿ(Dabang Delhi K.C) ಮತ್ತು ಜೈಪುರ(Jaipur Pink Panthers) ನಡುವಣ ಪಂದ್ಯವಂತೂ ಕೊನೆಯ ಕ್ಷಣದ ವರೆಗೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಟೈಗೊಳ್ಳುವ ಮೂಲಕ ಅಂತ್ಯ ಕಂಡಿತು.

ಕೊನೆಯ 1 ನಿಮಿಷದ ಆಟದ ವರೆಗೆ ಮೂರು ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದ ದಬಾಂಗ್​ ಡೆಲ್ಲಿ ಸತತವಾಗಿ ಮಾಡಿದ ಎಡವಟ್ಟಿನಿಂತ ಗೆಲ್ಲುವ ಪಂದ್ಯವನ್ನು ಟೈ ಮಾಡಿಕೊಂಡಿತು. ಡೆಲ್ಲಿ ಆಟಗಾರ ವಿಕ್ರಾಂತ್​ ಕೊನೆಯ ಕ್ಷಣದಲ್ಲಿ ಜೈಪುರ ರೇಡರ್​ ಭವಾನಿ ರಜಪೂತ್​ ಅವರನ್ನು ಟ್ಯಾಕಲ್​ ಮಾಡಿದರು. ಆದರೆ ವಿಕ್ರಾಂತ್​ ಲಾಬಿ ಗೆರೆಯನ್ನು ಮೆಟ್ಟಿ ಸೆಲ್ಫ್​​ ಔಟಾದರು. ಇದರ ಲಾಭ ಪಡೆದ ಜೈಪುರ ಪಂದ್ಯವನ್ನು ಸಮಬಲಕ್ಕೆ ತಂದು ಸೋಲಿನಿಂದ ಪಾರಾಯಿತು. ಒಂದೊಮ್ಮೆ ಡೆಲ್ಲಿ ಡಿಫೆಂಡರ್ ವಿಕ್ರಾಂತ್​​ ಲಾಬಿ ಮೆಟ್ಟುತ್ತಿಲ್ಲವಾದರೆ ಒಂದು ಅಂಕದ ಮುನ್ನಡೆಯಿಂದ ಪಂದ್ಯ ಗೆಲ್ಲಬಹುದಿತ್ತು.

ಇದನ್ನೂ ಓದಿ Pro Kabaddi: ಪಾಟ್ನಾ ಮೇಲೆ ಸವಾರಿ ಮಾಡಿದ ಪುಣೇರಿ ಪಲ್ಟಾನ್

ಅಂತಿಮ ರೇಡ್​ ದಬಾಂಗ್​ ಡೆಲ್ಲಿಗೆ ಸಿಕ್ಕರೂ ಕೂಡ ಅಶು ಮಲಿಕ್​ ಯಾವುದೇ ಅಂಕಗಳಿಸುವ ಪ್ರಯತ್ನವನ್ನು ಮಾಡದರೆ ಕೇವಲ ಟಚ್​ ಹಾಕಿ ಸಮಯವನ್ನು ವ್ಯರ್ಥಮಾಡಿದರು. ಅಂಕ ಗಳಿಸುವ ಪ್ರಯತ್ನದಲ್ಲಿ ಔಟ್​ ಆದರೆ ಸೋಲು ಕಾಣುವ ಎಲ್ಲ ಸಾಧ್ಯತೆಯನ್ನು ಮನಗಂಡ ಅವರು ಜಾಣ್ಮೆ ತೋರುವ ಮೂಲಕ ಸಮಾನ ಅಂಕಗಳನ್ನು ಸಿಗುವಂತೆ ನೋಡಿಕೊಂಡರು.

ಡೆಲ್ಲಿ ಪರ ನಾಯಕ ನವೀನ್​ ಕುಮಾರ್​ ಅವರು ಇಂದು ತಮ್ಮ ಎಂದಿನ ಆಟವನ್ನು ಆಡುವಲ್ಲಿ ಯಶಸ್ಸು ಕಾಣಲಿಲ್ಲ. ಈ ಹಿಂದಿನ ಪಂದ್ಯಗಳಲ್ಲಿ ಕನಿಷ್ಠ 10 ಅಂಕ ಗಳಿಸುತ್ತಿದ್ದ ಅವರು ಈ ಪಂದ್ಯದಲ್ಲಿ ಕೇವಲ 4 ಅಂಕಕ್ಕೆ ಸೀಮಿತರಾದರು. ಅಶು ಮಲಿಕ್​ 7, ಮೋಹಿತ್​ 3, ವೀಶಾಲ್​ 4 ಅಂಕ ಗಳಿಸಿದರು.

ಹಾಲಿ ಚಾಂಪಿಯನ್​ ಜೈಪುರ ತಂಡದ ಪರ ಅರ್ಜುನ್​ ದೇಸ್ವಾಲ್​ ಮಿಂಚಿನ ರೇಡಿಂಗ್​ ನಡೆಸಿ 13 ಅಂಕ ಕಲೆಹಾಕಿ ಗೆಲುವಿನ ಹೀರೊ ಎನಿಸಿಕೊಂಡರು. ಅವರಿಗೆ ಉತ್ತಮ ಸಾಥ್​ ನೀಡಿದ ಅಂಕುಶ್​ 7 ಅಂಕ ಗಳಿಸಿದರು. ಉಳಿದಂತೆ ಭವಾನಿ ರಜಪೂತ್​(4), ವಿ.ಅಜಿತ್ (3) ಅಂಕ ಪಡೆದರು. ಅಂತಿಮವಾಗಿ ಪಂದ್ಯ 32-32 ಅಂತರದಿಂದ ಟೈ ಗೊಂಡಿತು.

ಮತ್ತೆ ಸೋಲು ಕಂಡ ತಮಿಳ್​ ತಲೈವಾಸ್

ಸೋಮವಾರವಷ್ಟೇ ಸೋಲು ಕಂಡಿದ್ದ ತಮಿಳ್​ ತಲೈವಾಸ್(Tamil Thalaivas)​ ತಂಡ ತವರಿನಲ್ಲಿ ಮತ್ತೆ ಸೋಲು ಕಂಡಿದೆ. ಬುಧವಾರದ ದ್ವಿತೀಯ ಪಂದ್ಯದಲ್ಲಿ ಬಲಿಷ್ಠ ಗುಜರಾತ್​ ಜೈಂಟ್ಸ್(Gujarat Giants)​ ವಿರುದ್ಧ 33-30 ಅಂಕಗಳಿಂದ ಸೋಲಿಗೆ ತುತ್ತಾಯಿತು. ಗುಜರಾತ್​ ಪರ ರಾಕೇಶ್​ 9 ಮತ್ತು ಪ್ರತೀಕ್​(8) ಅಂಕ ಗಳಿಸಿ ಗೆಲುವಿನ ರುವಾರಿಯಾದರು. ಉಳಿದಂತೆ ಸೋಂಬಿರ್(4), ರೋಹಿತ್​ ಮತ್ತು ಫಜಲ್ ಅತ್ರಾಚಲಿ ತಲಾ 3 ಅಂಕ ಕಲೆಹಾಕಿದರು.

ಚೆನ್ನೈ ತಂಡದ ಪರ ಮಿಂಚಿದ ಆಟಗಾರರೆಂದರೆ ಅಜಿಂಕ್ಯಾ ಪವಾರ್​ ಮತ್ತು ನರೇಂದರ್​ ಮಾತ್ರ. ಅಜಿಂಕ್ಯಾ 11 ಅಂಕ ಗಳಿಸಿದರೆ, ನರೇಂದರ್ 7 ಅಂಕ ಪಡೆದರು. ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಾರದ ಕಾರಣ ಮೂರು ಅಂಕದ ಕೊರತೆಯಿಂದ ತಂಡ ಸೋಲು ಕಂಡಿತು.

Exit mobile version