ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಡೆಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಪ್ರತಿಭಟನೆಗಾಗಿ (Wrestlers Protest) ತಮ್ಮ ಜೇಬಿನಿಂದಲೇ ಈಗಾಗಲೇ ಅರು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ರಾತ್ರಿಯೆಲ್ಲ ರಸ್ತೆ ಬದಿಯಲ್ಲಿ ಮಲಗಲು ಹಾಸಿದೆ, ಡೆಲ್ಲಿಯ ಸುಡುಬಿಸಿಲಿನಿಂದ ತಪ್ಪಿಸಿಕೊಳ್ಳುವುದಕ್ಕೆ ಕೂಲರ್, ಆಹಾರ, ಮೈಕ್ ಹಾಗೂ ಸೌಂಡ್ಬಾಕ್ಸ್ ಸೇರಿದಂತೆ ನಾನಾ ಪರಿಕರಗಳಿಗೆ ದೊಡ್ಡ ಮೊತ್ತ ಖರ್ಚಾಗಿದೆ ಎಂಬುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಐದು ದಿನಗಳಲ್ಲಿ ಕುಸ್ತಿಪಟುಗಳು, ನೀರು ಮತ್ತು ಆಹಾರದ ಹೊರತಾಗಿ ಹಾಸಿಗೆಗಳು, ಬೆಡ್ ಶೀಟ್ ಗಳು, ಫ್ಯಾನ್ ಗಳು, ಸ್ಪೀಕರ್ ಗಳು ಮತ್ತು ಮೈಕ್ರೊಫೋನ್ ಗಳು, ಮಿನಿ ಪವರ್ ಜೆನ್ ಸೆಟ್ ವ್ಯವಸ್ಥೆ ಮಾಡಲು ಐದು ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಆರಂಭದಲ್ಲಿ, ಅವರು ಹಾಸಿಗೆಗಳು, ಬೆಡ್ ಶೀಟ್ಗಳು ಮತ್ತು ಸೌಂಡ್ ಸಿಸ್ಟಮ್ ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಅದಕ್ಕೆ ದಿನಕ್ಕೆ 27,000 ರೂಪಾಯಿಯಾಗುತ್ತಿತ್ತು. ಹೀಗಾಗಿ ದೀರ್ಘಕಾಲ ಧರಣಿ ಕುಳಿತುಕೊಳ್ಳಬೇಕಾದರೆ ಹೆಚ್ಚು ಖರ್ಚಾಗಬಹುದು ಎಂಬ ಅಂದಾಜಿನ ಮೇಲೆ ಒಂದೊಂದೇ ವಸ್ತುಗಳನ್ನು ಖರೀದಿ ಮಾಡಿದ್ದಾರೆ.
ನಾವು ಹಾಸಿಗೆಗಳನ್ನು ಖರೀದಿಸಲು ನಿರ್ಧರಿಸಿದೆವು. ನಾನು ನನ್ನ ಗ್ರಾಮ ಖಾರ್ಖೋಡಾದಿಂದ ₹ 50,000 ಪಾವತಿಸಿ 80 ಹಾಸಿಗೆಗಳನ್ನು ಖರೀದಿಸಿದೆ. ಎಲ್ಲಾ ಹಾಸಿಗೆಗಳಿಗೆ ನಮಗೆ ದಿನಕ್ಕೆ 12000 ಬಾಡಿಗೆ ವಿಧಿಸಲಾಗುತ್ತಿತ್ತು. ಇದು ದೊಡ್ಡ ಮೊತ್ತವಾಗಿತ್ತು ಎಂದು ವಿನೇಶ್ ಫೋಗಟ್ ಅವರ ಪತಿ ಸೋಮ್ವೀರ್ ರಾಥಿ ಪಿಟಿಐ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಆರಂಭದಲ್ಲಿ ನಾವು ಸ್ಪೀಕರ್ಗಳು ಹಾಗೂ ಮೈಕ್ರೋಫೋನ್ಗಳನ್ನು ಬಾಡಿಗೆಗೆ ತಂದುಕೊಂಡಿದ್ದೆವು. ಅದರ ಒಂದು ದಿನದ ಬಾಡಿಗೆ 12,000 ರೂಪಾಯಿ ಆಗುತ್ತಿತ್ತು. ಈಗ ನಾವು ಚಾಂದನಿ ಚೌಕ್ ಮಾರುಕಟ್ಟೆಯಿಂದ ನಮ್ಮದೇ ಆದ ಸೌಂಡ್ ಸಿಸ್ಟಮ್ ಅನ್ನು ₹ 60,000 ಕ್ಕೆ ಖರೀದಿಸಿದ್ದೇವೆ.”ಅಂಗಡಿಯವನು ಒಳ್ಳೆಯ ವ್ಯಕ್ತಿ . ಕ್ರೀಡಾಪಟುಗಳು ರಸ್ತೆಯಲ್ಲಿದ್ದಾರೆ ಎಂದು ತಿಳಿದು ಲಾಭವನ್ನೇ ಉಳಿಸಿಕೊಳ್ಳದೇ ಸ್ಪೀಕರ್ ಕೊಟ್ಡರು, ಎಂದು ಸೋಮ್ವಿರ್ ರಾಥೀ ಹೇಳಿದ್ದಾರೆ.
ಫ್ಯಾನ್ಗಳು ಮತ್ತು ಜನರೇಟರ್ಗಳಂತಹ ಕೆಲವು ವಸ್ತುಗಳು ಇನ್ನೂ ಬಾಡಿಗೆಯಲ್ಲಿವೆ. ಎರಡೂ ದಿನಕ್ಕೆ ಸುಮಾರು 10,000 ರೂಪಾಯಿ ಬಾಡಿಗೆ ಕೊಡಬೇಕಾಗಿದೆ. ದೆಹಲಿ ಬೇಸಗೆಯ ಬಿಸಿಯಲ್ಲಿ ಬೇಯುತ್ತಿರುವ ಕಾರಣ ನಾವು ಕೂಲರ್ಗಳನ್ನೂ ಖರೀದಿ ಮಾಡಿದೆವು. ಬರುವಾಗ ನಾವು ಎರಡು ಲಕ್ಷ ರೂಪಾಯಿ ತಂದಿದ್ದೆವು. ಆದರೆ, ಇಲ್ಲಿ 5ರಿಂದ6 ಲಕ್ಷ ರೂಪಾಯಿ ಖರ್ಚಾಗಿವೆ ಎಂದು ಹೇಳಿದರು.
ಕೆಲಸಗಳ ವಿಂಗಡಣೆ
ನಾವು ಕೆಲಸವನ್ನು ನಮ್ಮ ನಡುವೆ ವಿಂಗಡಿಸಿದ್ದೇವೆ. ಕೆಲವು ಕೋಚ್ಗಳು ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಯುವ ಕುಸ್ತಿಪಟುಗಳು ಪ್ರತಿಭಟನಾ ಸ್ಥಳಕ್ಕೆ ಆಹಾರವನ್ನು ತಲುಪಿಸುತ್ತಿದ್ದಾರೆ. ಇನ್ನೊಬ್ಬರು ನೀರು ಸರಬರಾಜು ಮಾಡುತ್ತಿದ್ದಾರೆ. ಸ್ವಚ್ಛತೆಯ ಕೆಲಸವನ್ನು ಮತ್ತೊಬ್ಬರು ವಹಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ ಮುಗಿಸಿ ಇಲ್ಲಿಂದ ಹೊರಟ ಬಳಿಕ ನಮ್ಮ ವಸ್ತುಗಳನ್ನು ನಾವು ಗುರುದ್ವಾರ ಅಥವಾ ದೇವಾಲಯಕ್ಕೆ ವಿತರಿಸುತ್ತೇವೆ. ಹಾಸಿಗೆಗಳು, ಸ್ಪೀಕರ್ಗಳು ಅವರಿಗೆ ನೆರವಾಗಬಹುದು ಎಂದು ಸೋಮ್ವೀರ್ ಹೇಳಿದ್ದಾರೆ.