Site icon Vistara News

Pakistan Super League : ಆತ್ಮಹತ್ಯೆ ಮಾಡಿಕೊಂಡ ಪಾಕಿಸ್ತಾನ ಸೂಪರ್​ ಲೀಗ್​ನ ಮಾಲೀಕ

Alamgir Khan

ಬೆಂಗಳೂರು: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ ಮಾಲೀಕ ಅಲಂಗೀರ್ ಖಾನ್ ತಾರೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫ್ರಾಂಚೈಸಿ ಮೂಲಗಳು ಜುಲೈ 6 ರಂದು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ದೃಢಪಡಿಸಿದೆ. ಮುಲ್ತಾನ್​ ಸುಲ್ತಾನ್​ ಫ್ರಾಂಚೈಸಿಯನ್ನು 2017ರಲ್ಲಿ ಪಿಎಸ್ಎಲ್​ಗೆ ಆರನೇ ತಂಡವಾಗಿ ಸೇರಿಸಲಾಯಿತು. ಫ್ರಾಂಚೈಸಿಯ ಬಹುಪಾಲು ಷೇರು ಖಾನ್ ತಾರೀನ್ ಅವರು ಒಡೆತನದಲ್ಲಿತ್ತು. 2021ರಲ್ಲಿ ಅಲಂಗೀರ್ ಖಾನ್ ತಾರೀನ್ ಸಂಪೂರ್ಣ ಷೇರು ಪಡೆದುಕೊಂಡಿದ್ದರು.

ಮುಲ್ತಾನ್ ಸುಲ್ತಾನ್ ತಂಡಕ್ಕೆ ಶಾನ್​ ಮೊಹಮ್ಮದ್ ರಿಜ್ವಾನ್ ಮುನ್ನಡೆಸುತ್ತಿದ್ದಾರೆ. ಶಾನ್ ಮಸೂದ್, ಅನ್ವರ್ ಅಲಿ, ಖುಶ್ದಿಲ್ ಷಾ, ಶಹನವಾಜ್ ದಹಾನಿ, ಡೇವಿಡ್ ಮಿಲ್ಲರ್, ಆದಿಲ್ ರಶೀದ್, ಟಿಮ್ ಡೇವಿಡ್ ಮತ್ತು ರಿಲೀ ರೊಸ್ಸೌವ್ ತಂಡದಲ್ಲಿ ಇದ್ದಾರೆ.

ಲಾಹೋರ್ ಪೊಲೀಸರ ವರದಿ ಪ್ರಕಾರ 63 ವರ್ಷದ ಅಲಂಗೀರ್ ಖಾನ್ ತಾರೀನ್ ಪಿಸ್ತೂಲ್ ಬಳಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಲ್ಬರ್ಗ್​ನ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಕೆಲವೇ ದಿನಗಳಲ್ಲಿ ನಿರುದ್ಯೋಗಿಗಳಾಗಲಿದ್ದಾರೆ ಪಾಕಿಸ್ತಾನ ಕ್ರಿಕೆಟಿಗರು!

ನಮ್ಮ ಪ್ರೀತಿಯ ತಂಡದ ಮಾಲೀಕ ಅಲಂಗೀರ್ ಖಾನ್ ತಾರೀನ್ ಅವರ ನಿಧನದ ಸುದ್ದಿಯನ್ನು ನಾವು ತೀವ್ರ ದುಃಖದಿಂದ ಹಂಚಿಕೊಳ್ಳುತ್ತೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಶ್ರೀ ತಾರೀನ್ ಅವರ ಕುಟುಂಬದೊಂದಿಗೆ ಇವೆ. ದಯವಿಟ್ಟು ಅವರ ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ನಿಮ್ಮೆಲ್ಲರನ್ನೂ ವಿನಂತಿಸುತ್ತೇವೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮುಲ್ತಾನ್ ಸುಲ್ತಾನ್ಸ್ ಟ್ವೀಟ್ ಮಾಡಿದ್ದಾರೆ.

ಅನಾರೋಗ್ಯದ ಕಾರಣ

ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳ ಪ್ರಕಾರ, ತಾರೀನ್ ಕೈಬರಹದ ಆತ್ಮಹತ್ಯೆ ಪತ್ರ ಘಟನೆ ನಡೆದ ಸ್ಥಳದಲ್ಲಿ ಲಭಿಸಿದೆ. ಅದರಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ.

ತರೀನ್ ಅವರ ಕೆಲವು ಆಪ್ತ ಸ್ನೇಹಿತರು, ಜಿಯೋ ನ್ಯೂಸ್ ಜತೆ ಮಾತನಾಡಿ, ಅವರಿಗೆ ಅನಾರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ. ತಾರೀನ್ ಈ ವರ್ಷದ ಡಿಸೆಂಬರ್ ನಲ್ಲಿ ಮದುವೆಯಾಗಬೇಕಿತ್ತು. ಅವರು ದಕ್ಷಿಣ ಪಂಜಾಬಿನ ಪ್ರಮುಖ ಉದ್ಯಮಿಯಾಗಿದ್ದರು ಮತ್ತು ದೇಶದ ಅತಿದೊಡ್ಡ ನೀರು ಶುದ್ಧೀಕರಣ ಘಟಕಗಳಲ್ಲಿ ಒಂದರ ಮಾಲೀಕರಾಗಿದ್ದರು.

Exit mobile version