Site icon Vistara News

Pro Kabaddi | ಮಹಾರಾಷ್ಟ್ರ ಡರ್ಬಿ ಗೆದ್ದ ಪುಣೇರಿ ಪಲ್ಟನ್‌, ಯು ಮುಂಬಾ ವಿರುದ್ಧ ರೋಚಕ ಜಯ

ಬೆಂಗಳೂರು : ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 30-28 ಅಂತರದಲ್ಲಿ ಜಯ ಗಳಿಸಿದ ಪುಣೇರಿ ಪಲ್ಟನ್‌ ತಂಡ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿವೊ ಪ್ರೋ ಕಬಡ್ಡಿ ಲೀಗ್‌ ಸೂಪರ್‌ ಸಂಡೆ ಮಹಾರಾಷ್ಟ್ರ ಡರ್ಬಿ ಗೆದ್ದುಕೊಂಡಿದೆ.

ಅಸ್ಲಾಮ್‌ ಇನಾಂದಾರ್‌ (9), ಮೋಹಿತ್‌ ಗೋಯತ್‌ (5) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದರೆ, ಟ್ಯಾಕಲ್‌ನಲ್ಲಿ ನಾಯಕ ಫಜಲ್‌ ಅತ್ರಚಲಿ 4 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಮೊಹಮ್ಮದ್‌ ನಭಿಭಾಕ್ಷ್‌ ರೈಡಿಂಗ್‌ನಲ್ಲಿ 4 ಅಂಕ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಪುಣೇರಿ ಪಲ್ಟಲ್‌ ಋತುವಿನ ಮೊದಲ ಜಯ ದಾಖಲಿಸಿತು.

ಯು ಮುಂಬಾ ಹಿಂದಿನ ಪಂದ್ಯಗಳಿಗಿಂತ ಈ ಪಂದ್ಯದಲ್ಲಿ ಉತ್ತಮವಾಗಿಯೇ ಪ್ರದರ್ಶನ ತೋರಿತು. ಗುಮಾನ್‌ ಸಿಂಗ್‌ (7) ಹಾಗೂ ಜೈ ಭಗವಾನ್‌ (5) ಉತ್ತಮವಾಗಿಯೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು. ಆದರೆ ದ್ವಿತೀಯಾರ್ಧದ ಅಂತಿಮ ಹಂತದಲ್ಲಿ ಪುಣೇರಿ ಪಲ್ಟನ್‌ ಗಳಿಸಿದ ರೈಡಿಂಗ್‌ ಅಂಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು. ಯು ಮುಂಬಾ ಆಡಿದ ನಾಲ್ಕು ಪಂದ್ಯಗಳಲ್ಲಿ 2 ಜಯ ಹಾಗೂ 2 ಸೋಲನುಭವಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲುಳಿಯಿತು.

ಉತ್ತಮ ಪೈಪೋಟಿಯಿಂದ ಕೂಡಿದ್ದ ಪ್ರಥಮಾರ್ಧದ ಪಂದ್ಯದಲ್ಲಿ ಇತ್ತಂಡಗಳು ದಿಟ್ಟ ಹೋರಾಟ ನೀಡಿದುದರ ಪರಿಣಾಮ ಪ್ರಥಮಾರ್ಧದಲ್ಲಿ ಪಂದ್ಯ 14-13 ರಲ್ಲಿ ಮುನ್ನಡೆದು ಪುಣೇರಿ ಪಲ್ಟನ್‌ 1 ಅಂಕದಲ್ಲಿ ಮೇಲುಗೈ ಸಾಧಿಸಿತು. ಕನ್ನಡಿಗ ಬಿಸಿ ರಮೇಶ್‌ ಗರಡಿಯಲ್ಲಿ ಪಳಗಿದ ಪುಣೇರಿ ಪಲ್ಟನ್‌ ರೈಡಿಂಗ್‌ನಲ್ಲಿ 7 ಅಂಕ ಗಳಿಸಿದರೆ, ಯು ಮುಂಬಾ 8 ಅಂಕ ಗಳಿಸಿತು. ಟ್ಯಾಕಲ್‌ನಲ್ಲಿ ಪುಣೇರಿ ಪಲ್ಟನ್‌ 7 ಅಂಕ ಗಳಿಸಿ ಕಬಡ್ಡಿ ಅಭಿಮಾನಿಗಳಿಗೆ ಆಟದ ರಸದೌತಣ ನೀಡಿತು. ಯು ಮುಂಬಾ 4 ಅಂಕ ಗಳಿಸಿತು.

ಇದನ್ನೂ ಓದಿ | Pro Kabaddi | ಭಾನುವಾರದ ಪ್ರೊ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಿದ ಕಾಂತಾರದ ಶಿವ!

Exit mobile version